ದಾಖಲೆಯಲ್ಲಿ ಹುಬ್ಬಳ್ಳಿ ಗಾರ್ಡನ್ ಸಿಟಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 21
2002ರಿಂದ ನಗರದಲ್ಲಿ ಇಲ್ಲಿಯವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 600ಕ್ಕೂ ಹೆಚ್ಚು ಉದ್ಯಾನಗಳನ್ನು ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಿದೆ. ಹೀಗಾಗಿ ದಾಖಲೆಯಲ್ಲಿ ಹುಬ್ಬಳ್ಳಿಯನ್ನು ಉದ್ಯಾನ ನಗರಿ ಎಂದು ಹೇಳಿಕೊಳ್ಳಲು ಅಡ್ಡಿಯಿಲ್ಲ. ಆದರೆ, ವಾಸ್ತವದಲ್ಲಿ ಮಾತ್ರ ಈ ಚಿತ್ರಣ ಇದಕ್ಕೆ ತದ್ವಿರುದ್ಧ.
ಹುಡಾದಿಂದ ಅಭಿವೃದ್ಧಿಗೊಂಡ ವಿವಿಧ ಬಡಾವಣೆಗಳಲ್ಲಿ ಉದ್ಯಾನಕ್ಕೆ ಎಂದು ಮೀಸಲಿಟ್ಟಿರುವ ಜಾಗಗಳನ್ನು ನೋಡಿದರೆ ಕಸದ ತೊಟ್ಟಿ ಇಲ್ಲವೇ ಕಳೆ ಬೆಳೆದು ಹಾವು, ಹುಳು ಹುಪ್ಪಟೆಗಳ ವಾಸಸ್ಥಾನವಾಗುವುದರ ಜೊತೆಗೆ ಸುತ್ತಲಿನ ನಿವಾಸಿಗಳಿಗೆ ತಮ್ಮ ಮನೆ ಕಸ ಚೆಲ್ಲುವುದಕ್ಕೆ ಪ್ರಶಸ್ತ ಸ್ಥಳವಾಗಿ ಪರಿಣಮಿಸಿದೆ.
ಹೆಸರಿಗಷ್ಟೆ ಉದ್ಯಾನದ ಬೋರ್ಡ್: ಹುಡಾ ದಾಖಲೆಗಳು ಹೇಳುವ ಪ್ರಕಾರ 2002ರಿಂದಿಚೆಗೆ ಹುಬ್ಬಳ್ಳಿಯಲ್ಲಿ 277, ನವನಗರದಲ್ಲಿ 172 ಮತ್ತು ಧಾರವಾಡದಲ್ಲಿ 153 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಕೆಲವೊಂದು ಉದ್ಯಾನಗಳ ನಿರ್ವಹಣೆ ಜವಾಬ್ದಾರಿ ಮಹಾನಗರ ಪಾಲಿಕೆ ಹೆಗಲೇರಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿರುವ ಬಹುತೇಕ ಉದ್ಯಾನಗಳಲ್ಲಿ ಇಂದಿಗೂ ನಿರ್ವಹಣೆ ಎನ್ನುವುದೇ ಇಲ್ಲ. ವಾರ್ಡ್ ನಂ. 27ರ ವ್ಯಾಪ್ತಿಯ ಸಾಯಿನಗರ ಬಡಾವಣೆ ನಿರ್ಮಾಣಗೊಂಡು 20ಕ್ಕೂ ಹೆಚ್ಚು ವರ್ಷಗಳಾಗಿವೆ. ಇಲ್ಲಿ ಉದ್ಯಾನಕ್ಕೆ ಎಂದು ಮೀಸಲು ಇರಿಸಿರುವ ಜಾಗ ಇಂದಿಗೂ ಸುತ್ತಲಿನ ರೈತರ ಅಥವಾ ಕುರಿಗಾಯಿಗಳ ತಿಪ್ಪೆಯಾಗಿದೆ. ಇದೇ ಬಡಾವಣೆಯಲ್ಲಿ ಇನ್ನೊಂದು ಉದ್ಯಾನವಿದ್ದು, ಅದು ಹೆಸರಿಗಷ್ಟೆ ಉದ್ಯಾನ ಎಂದು ಬೋರ್ಡ್ ಹಾಕಿಕೊಂಡಿದೆ. ಸುತ್ತಲೂ ಬೇಲಿ, ಒಂದಿಷ್ಟು ಬೆಂಚ್‌ಗಳನ್ನು ಹೊರತುಪಡಿಸಿದರೆ ಮತ್ತೇನೂ ಇಲ್ಲ. ಗೋಕುಲ ರಸ್ತೆಗೆ ಹೊಂದಿಕೊಂಡಂತೆ ಇನ್ನೊಂದು ಅಶೋಕ ಉದ್ಯಾನ ಎಂದು ಬೋರ್ಡ್ ಹಾಕಿಸಿಕೊಂಡ ಜಾಗ ಇದೆ. ಅದರ ಪರಿಸ್ಥಿತಿ ಕೂಡ ಸಾಯಿನಗರದ ಉದ್ಯಾನಕ್ಕಿಂತ ಭಿನ್ನವಾಗಿಲ್ಲ. ಅಶೋಕ ಉದ್ಯಾನದಲ್ಲಿ ಯಥೇಚ್ಛವಾಗಿ ಗಿಡಗಂಟಿ ಬೆಳೆದು ಹಾವು, ಹಂದಿ, ಬೀದಿ ನಾಯಿಗಳ ವಾಸಕ್ಕೆ ಯೋಗ್ಯ ಸ್ಥಳ ಎನ್ನುವಂತಾಗಿದೆ. ವಿಜಯನಗರಕ್ಕೆ ಹೋಗುವ ದಾರಿಯಲ್ಲಿ ಮತ್ತೊಂದು ಉದ್ಯಾನವನ ಖಾಲಿ ಜಾಗೆ. ಹಸಿರಿನಿಂದ ಕಂಗೊಳಿಸಿ ಇಲ್ಲಿನ ನಿವಾಸಿಗಳ ವಾಯುವಿಹಾರಕ್ಕೆ ಪ್ರಶಸ್ತ ಸ್ಥಳವಾಗಬೇಕಿದ್ದ ಈ ಜಾಗದಲ್ಲಿ ಪೊಲೀಸ್ ಇಲಾಖೆ ಸಣ್ಣದೊಂದು ಕಟ್ಟಡ ನಿರ್ಮಿಸಿ ಸೆಕ್ಯೂರಿಟಿ ಪಾಯಿಂಟ್ ಮಾಡಿಕೊಂಡಿದೆ ಇನ್ನುಳಿದ ಜಾಗ ಖಾಲಿ ಖಾಲಿ. ವಾರ್ಡ್ ನಂ. 34ರಲ್ಲಿ ಉದ್ಯಾನಕ್ಕೆ ಎಂದು ಮೀಸಲು ಇರಿಸಿದ ಜಾಗದ ಕಥೆ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಕೆಲವು ದಿನಗಳ ಹಿಂದಷ್ಟೆ ಫುಟ್‌ಪಾತ್ ನಿರ್ಮಿಸಲಾಗಿದೆ.
71 ಉದ್ಯಾನ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿದ ತಡಸಿನಕೊಪ್ಪ ಲಕಮನಹಳ್ಳಿ, ಭೈರಿದೇವರಕೊಪ್ಪ, ಅಮರಗೋಳ, ರಾಯನಾಳ ಪ್ರದೇಶದಲ್ಲಿ ಒಟ್ಟು 71 ಉದ್ಯಾನಗಳ ಅಭಿವೃದ್ಧಿಗೆ ನಿವೇಶನ ಮೀಸಲು ಇರಿಸಿದ್ದು, ಅದರಲ್ಲಿ 19 ಉದ್ಯಾನಗಳ ಅಭಿವೃದ್ಧಿಯಾಗಿದ್ದು, ಇನ್ನೂ 52 ಉದ್ಯಾನಗಳನ್ನು ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಬೇಕಿದೆ ಎನ್ನುತ್ತವೆ ಹುಡಾದ ದಾಖಲೆಗಳು.
ಉದ್ಯಾನಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಎಂದು ಮಹಾನಗರ ಪಾಲಿಕೆ ಸಾರ್ವಜನಿಕರಿಂದ ತೆರಿಗೆ ಮತ್ತು ಮೂಲಸೌಕರ್ಯ ಶುಲ್ಕ ಎಂದು ಹಣ ಪಡೆಯುತ್ತಿವೆ. ಜನರಿಂದ ವಸೂಲಿ ಮಾಡಿದ ಹಣ ಎಲ್ಲಿಗೆ ಹೋಗುತ್ತಿದೆ. ಏಕೆ ಉದ್ಯಾನಗಳು ಅಭಿವೃದ್ಧಿ ಕಾಣದೇ ಹಾಳುಕೊಂಪೆಯಾಗಿವೆ ಎನ್ನುವುದಕ್ಕೆ ಅಧಿಕಾರಿಗಳು ಉತ್ತರಿಸಬೇಕು ಅಷ್ಟೆ.
-ಸತೀಶ ಪಾಗಾದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

