ಧಾರವಾಡ

ನರಗುಂದ ಬಂಡಾಯ ಮಾದರಿ ಕಳಸಾ-ಬಂಡೂರಿ ಹೋರಾಟ

Published On :

ನವಲಗುಂದ (ಧಾರವಾಡ): ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ, ನಿರೀಕ್ಷಿತ ಕಳಸಾ-ಬಂಡೂರಿ ನಾಲಾ ಜೋಡಣೆಯ ಹೋರಾಟವು ನವಲಗುಂದ-ನರಗುಂದ ಬಂಡಾಯದ ಮಾದರಿಯಲ್ಲಿ ಇದೇ ನೆಲದಿಂದ ಆರಂಭವಾಗಲಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಆಶಿಸಿದರು.
ಜು. 21ರ ರೈತ ಹುತಾತ್ಮ ದಿನದ ಅಂಗವಾಗಿ ಭಾನುವಾರ ಇಲ್ಲಿನ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕಳಸಾ-ಬಂಡೂರಿನ ನಾಲಾ ಜೋಡಣೆ ವಿಷಯದಲ್ಲಿ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ರೈತರು ಒಗ್ಗಟ್ಟಾಗಿ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ. ಮಲಪ್ರಭಾ ನದಿಗೆ ಕಳಸಾ-ಬಂಡೂರಿ ನಾಲಾ ಜೋಡಿಸಿದರೆ ಹು-ಧಾ ಅವಳಿ ನಗರ ಸೇರಿದಂತೆ ಅಣ್ಣಿಗೇರಿ, ನವಲಗುಂದ, ರೋಣ, ಬಾದಾಮಿ ರೈತರಿಗೂ ಅನುಕೂಲ. ಯೋಜನೆ ಜಾರಿಯಾದರೆ ಬರಗಾಲದ ಮಾತೇ ಬರಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ನವಲಗುಂದ ಬರಗಾಲದಿಂದ ತತ್ತರಿಸಿದ್ದು, ಸರಿಯಾಗಿ ಬೆಳೆವಿಮೆ ಕೂಡಾ ದೊರೆಯದೇ ರೈತ ಕಂಗಾಲಾಗಿದ್ದಾನೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸರ್ಕಾರ ನೀಡುವ ಸಬ್ಸಿಡಿ ದರದ ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ನೇರವಾಗಿ ರೈತರಿಗೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಮತ್ತೊಂದು ಬಂಡಾಯದ ಕಹಳೆ ಊದುವ ಸಮಯ ದೂರ ಉಳಿದಿಲ್ಲ ಎಂದರು.
ರೈತ ಮುಖಂಡ ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯದಲ್ಲಿ ಏಳು ಲಕ್ಷ ಗ್ರಾಮಗಳಿದ್ದು ಯಾವುದೇ ಸರ್ಕಾರ ರೈತರ ಕಷ್ಟ-ಸುಖದ ಬಗ್ಗೆ ಕಿಂಚಿತ್ತೂ  ಚಿಂತನೆ ಮಾಡುತ್ತಿಲ್ಲ. ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ಮಾರುಕಟ್ಟೆಯಲ್ಲಿ ಕೆ.ಜಿ. ಕೂದಲಿಗೆ ಸಾವಿರಾರು ರು. ಇದೆ. ಆದರೆ, ರೈತರು ಬೆಳೆದ ಜೋಳ, ಕಡಲೆಗೆ ಕ್ವಿಂಟಲ್‌ಗೆ 1500, 2000 ಇದೆ. ಬಡನತದ ಅನಿವಾರ್ಯತೆಯಿಂದ ರೈತರು ಬೆಳೆ ಮಾರಾಟ ಮಾಡಿ ನಿಕೃಷ್ಟ ಜೀವನ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬರೀ ಭಾಷಣ: ರೈತ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಂಕರಪ್ಪ ಅಂಬಲಿ ಹಾಗೂ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಎಲ್ಲ ರಾಜಕೀಯ ನಾಯಕರು ರೈತ ಹುತಾತ್ಮ ದಿನದಂದು ಬರೋಬ್ಬರಿ ಭಾಷಣ ಮಾಡಿ, ಆಶ್ವಾಸನೆ ನೀಡಿ ಹೋಗುತ್ತಾರೆಯೇ ಹೊರತು ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ. ಇದಕ್ಕೆ ಉದಾಹರಣೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಎಂದು ನೇರವಾಗಿ ಆರೋಪಿಸಿದರು.
ರೈತ ಮುಖಂಡರಾದ ಹೇಮಂತ್ ಕುಮಾರ ಪಾಂಚಾಳ, ಬಸವರಾಜ ಹೊರಟ್ಟಿ. ಕೊಟ್ರೇಶ ಶಿರೂರ, ಗಂಗಾಧರ ಕುಲಕರ್ಣಿ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹುತಾತ್ಮ ರೈತನ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದರು.
ದ್ಯಾಮನಗೌಡ ಪಾಟೀಲ, ಇಮಾಮಸಾಬ ಖುದ್ದಣ್ಣವರ, ಸುರೇಶ ಕುಲಕರ್ಣಿ, ಬಿ.ಎನ್. ದೇವರಡ್ಡಿ, ಬಿ.ಬಿ. ಗಂಗಾಧರಮಠ, ವಿ.ಎಫ್. ನೀರಲಗಿ, ಎಚ್.ಕೆ. ಲಕ್ಕಣ್ಣವರ ಹಾಗೂ ಸುತ್ತಮುತ್ತಲಿನ ಸಾವಿರಾರು ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.