ಧಾರವಾಡ

27ರಂದು ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 23
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆಂಬ ಕುತೂಹಲಕ್ಕೆ ಜು. 27ರಂದು ಬಹುತೇಕ ತೆರೆ ಬೀಳಲಿದೆ.
ಬಿಜೆಪಿ ತನ್ನ ಸಂಘಟನೆ ಬಲಪಡಿಸಬೇಕೆಂಬ ಉದ್ದೇಶದಿಂದ ರಾಜ್ಯ ವ್ಯಾಪಿ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲು ನಿರ್ಣಯಿಸಿ ಕಾರ್ಯೋನ್ಮುಖವಾಗಿದೆ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರದ ಸರದಿ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಧಾರವಾಡ ಗ್ರಾಮೀಣ ಜಿಲ್ಲೆಯ ಅಧ್ಯಕ್ಷರನ್ನಾಗಿ ಎಂ.ಆರ್. ಪಾಟೀಲ ಅವರನ್ನು ಪಕ್ಷ ನೇಮಕ ಮಾಡಿದೆ. ವಿಧಾನಪರಿಷತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಿದ್ದ ಎಂ.ಆರ್. ಪಾಟೀಲ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲ ಪಡಿಸಲು ಆಸ್ಥೆ ತೋರಿದೆ. ಮಹಾನಗರಕ್ಕೂ ಇಂಥದೇ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂಬ ಇಚ್ಛೆ ಮುಖಂಡರದ್ದು.
ಯಾರ್ಯಾರು ರೇಸ್‌ನಲ್ಲಿ?: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಪಟ್ಟಕ್ಕಾಗಿ ಒಂದು ಹಂತದಲ್ಲಿ ಭರ್ಜರಿ ಪೈಪೋಟಿಯೇ ನಡೆದಿದೆ. ಹಾಲಿ ಅಧ್ಯಕ್ಷರಾಗಿದ್ದ ಮಹೇಶ ಟೆಂಗಿನಕಾಯಿ ಉತ್ತಮವಾಗಿಯೇ ಸಂಘಟನಾ ಕಾರ್ಯ ಮಾಡಿದ್ದರು ಎನ್ನುವ ತೃಪ್ತಿ ಪಕ್ಷಕ್ಕಿದೆ. ತಮ್ಮ ಅಧಿಕಾರಾವಧಿಯಲ್ಲಿ ಮಹೇಶ ಯಾವುದೇ ಗೊಂದಲಗಳಿಲ್ಲದೇ ಎಲ್ಲ ಕಾರ್ಯಕರ್ತರನ್ನು ಸರಿದೂಗಿಸಿಕೊಂಡು ಮೆಚ್ಚುಗೆ ಪಡೆದಿದ್ದರು. ಇವರ ಅಧಿಕಾರಾವಧಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಅತಿ ಹೆಚ್ಚು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು.
ಹೀಗಿರುವಾಗ ಮುಂಬರುವ ಹಂತದಲ್ಲಿಯೂ ಇಂಥ ವ್ಯಕ್ತಿಯನ್ನೇ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷ ಹೊರಟಿದೆ. ಒಂದು ಹಂತದಲ್ಲಿ ಮಹೇಶ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಿಕೊಂಡು ಹೋಗಬೇಕು ಎಂಬ ಇಚ್ಛೆ ಪಕ್ಷದ ಪ್ರಮುಖರಿಂದ ವ್ಯಕ್ತಿವಾಗಿದೆ. ಆದರೆ ಹೊಸಬರಿಗೆ ಆದ್ಯತೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಅಧ್ಯಕ್ಷರಾಗಿ ಮುಂದುವರಿಯಲು ಮಹೇಶ ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಹೊಸಬರ ಆಯ್ಕೆಗೆ ಮುಖಂಡರು ಮುಂದಾಗಿದ್ದಾರೆ.  ಏತನ್ಮಧ್ಯೆ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಹು-ಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಈರೇಶ ಅಂಚಟಗೇರಿ, ನಾರಾಯಣ ಜರತಾರಘರ, ವೀರಭದ್ರಪ್ಪ ಹಾಲಹರವಿ, ದತ್ತಾ ಡೋರ್ಲೆ ಕಣ್ಣಿಟ್ಟಿದ್ದಾರೆ. ಗ್ರಾಮೀಣ ಅಧ್ಯಕ್ಷ ಪಟ್ಟ ನಿರಾಕರಿಸಿರುವ ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರನ್ನೂ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕರೆತರುವ ಯತ್ನವೂ ಮುಖಂಡರಿಂದ ನಡೆದಿದೆ.
ಸಂಕಷ್ಟಕ್ಕೀಡು ಮಾಡಿದ ಫರ್ಮಾನು: ಇವೆಲ್ಲದರ ಮಧ್ಯೆ, ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಅನೇಕರು ಕಣ್ಣು ನೆಟ್ಟಿದ್ದರೂ, ಪ್ರಭಾವಿಗಳಿಗೆ ಮಾತ್ರ ಜಿಲ್ಲಾಧ್ಯಕ್ಷ ಪಟ್ಟ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ವರಿಷ್ಠ ಮಂಡಳಿ ಫರ್ಮಾನು ಹೊರಡಿಸಿದೆ. ಇದು ಅಧ್ಯಕ್ಷ ಕುರ್ಚಿಯ ಮೇಲೆ ಕಣ್ಣಿಟ್ಟಿರುವವರಿಗೆ ನಿರಾಸೆಯುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ಮಾಡುತ್ತಿರುವವರ ಪೈಕಿ ಅನೇಕರು ಹಿಂದೆ ಸರಿದಿದ್ದಾರೆ.
ನಿಯೋಗಕ್ಕೂ ಸಿಗದ ಮನ್ನಣೆ: ಮಹಾನಗರ ಜಿಲ್ಲಾಧ್ಯಕ್ಷರಾಗಬೇಕೆಂಬ ಕನಸು ಹೊತ್ತವರಲ್ಲಿ ಕೆಲವರು ತಮ್ಮ ಬೆಂಬಲಿಗರ ಮುಖಾಂತರ ಮುಖಂಡರಿಗೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿದ್ದರು. ಇತ್ತೀಚೆಗಷ್ಟೇ ಆಕಾಂಕ್ಷಿಗಳ ಬೆಂಬಲಿಗರು ಮನವಿ ಪತ್ರ ಹೊತ್ತು ಬೆಂಗಳೂರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಶೆಟ್ಟರ್ ಯಾವುದೇ ಕಾರಣಕ್ಕೂ ಜಿಲ್ಲಾಧ್ಯಕ್ಷ ಪಟ್ಟಕ್ಕಾಗಿ ಲಾಬಿ ಮಾಡುವುದು ಬೇಡ, ಪ್ರಭಾವಿಗಳಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ಪಕ್ಷ ಸೂಚಿಸಿದೆ. ಪಕ್ಷದ ಕೋರ್ ಕಮಿಟಿ ಅಧ್ಯಕ್ಷರ ಆಯ್ಕೆ ಮಾಡಲಿದೆ, ಇದನ್ನು ಎಲ್ಲರೂ ಒಪ್ಪಲೇ ಬೇಕು. ಮತ್ತೊಮ್ಮೆ ಈ ವಿಷಯವಾಗಿ ನಿಯೋಗ ತರುವುದು ಬೇಡ ಎಂದು ಕಡ್ಡಿಮುರಿದಂತೆ ಹೇಳಿ ಕಳುಹಿಸಿದ್ದಾರೆ.
ಇವರಿಗೆ ಸಿಗುವುದೇ ಪಟ್ಟ?: ಬಿಜೆಪಿ ವರಿಷ್ಠ ಮಂಡಳಿಯ ಫರ್ಮಾನಿನ ಪ್ರಕಾರ ಲೆಕ್ಕಹಾಕಿದ್ದೇ ಆದಲ್ಲಿ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ವೀರಭದ್ರಪ್ಪ ಹಾಲಹರವಿ, ದತ್ತಾ ಡೋರ್ಲೆ ರೇಸ್‌ನಲ್ಲಿರುತ್ತಾರೆ. ಆದರೆ ಈ ಪೈಕಿ ಲಿಂಗರಾಜ ಪಾಟೀಲ ಹೆಚ್ಚು ಪ್ರಭಾವಿ ಎಂದೆನಿಸಿಕೊಳ್ಳುತ್ತಾರೆ. ಎರಡು ಬಾರಿ ಹುಡಾ ಅಧ್ಯಕ್ಷರಾಗಿದ್ದಲ್ಲದೇ ಜಿಲ್ಲಾಧ್ಯಕ್ಷರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಲಿಂಗರಾಜ ಆಸೆಯ ಹಾದಿ ಸುಲಭವಾಗಿದೆ. ಯುವಕರಿಗೆ ಆದ್ಯತೆ ನೀಡಬೇಕೆಂದು ಹೊರಟರೆ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿರುವ ನಾರಾಯಣ ಜರತಾರಘರ ಅವರಿಗೂ ಅವಕಾಶ ಒದಗಲಿದೆ. ಇವರಿಬ್ಬರಲ್ಲಿ ಒಬ್ಬರಿಗೆ ಆದ್ಯತೆ ನೀಡೋಣ ಎನ್ನುವ ಇಚ್ಛೆ ಪಕ್ಷದ ಮುಖಂಡರದ್ದಾಗಿದೆ. ಸದ್ಯ ನಾರಾಯಣ ಮತ್ತು ಲಿಂಗರಾಜ ನಡುವೆಯೇ ಪೈಪೋಟಿ ಇದೆ. ಈ ಪೈಕಿ ಯಾರು? ಎಂಬುದು ಜು. 27ರಂದು ಅಧಿಕೃತವಾಗಿ ತಿಳಿಯಲಿದೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.