ವಾಸ್ತು ದೋಷ: ಕಚೇರಿ ಸ್ಥಳಾಂತರ!
ಕುಂದಗೋಳ: ಮುಖ್ಯಮಂತ್ರಿಯಿಂದ ಹಿಡಿದು ಸಚಿವರು ವಾಸ್ತು ಪ್ರಕಾರ ತಮ್ಮ ಕೊಠಡಿಗಳನ್ನು ಸರಿಪಡಿಸಿಕೊಂಡರೆ, ಪಟ್ಟಣದ ಗ್ರಾಪಂ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ...!
ಹೌದು, ಕುಂದಗೋಳ ತಾಲೂಕಿನ ಹಿರೇನರ್ತಿಯಲ್ಲಿ 13 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿತ್ತು. ಅಂದಿನ ಗ್ರಾಪಂ ಜನಪ್ರತಿನಿಧಿಗಳು ಕಟ್ಟಡ ಉದ್ಘಾಟಿಸಿ ತಮ್ಮ ಅಧಿಕಾರವನ್ನು ಆರಂಭಿಸಿದ್ದರು. ಆದರೆ ಗ್ರಾಪಂದಲ್ಲಿ ಯಾವುದೇ ನೆಮ್ಮದಿಯಿಲ್ಲದೆ ಬರೀ ಕಿತ್ತಾಟದಲ್ಲಿಯೇ ಕಾಲ ಹರಣಮಾಡುವಂತಾಗಿತ್ತು. ಪ್ರತಿನಿತ್ಯವೂ ಒಂದಿಲ್ಲೊಂದು ತಂಟೆ, ತಕರಾರುಗಳು ತಾರಕಕ್ಕೇರಿ ಪರಸ್ಪರ ವಿಕೋಪಕ್ಕೆ ತಿರುಗುವ ಪರಿಸ್ಥಿತಿ ಎದುರಾಗುತ್ತಿತ್ತು. ಇದನ್ನು ಕಂಡು ಅಂದಿನ ಅಧ್ಯಕ್ಷರು ಹೇಗೂ ತಮ್ಮ ಅಧಿಕಾರವಧಿ ಮುಗಿಸಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಈ ಹೊಸ ಕಟ್ಟಡದಲ್ಲಿ ಆಡಳಿತ ನಡೆಸದೆ ಹಳೆ ಚಾವಡಿಯಲ್ಲಿ ನಡೆಸುತ್ತಿದ್ದಾರೆ. ಈ ಚಾವಡಿಯೂ ಮಳೆಗಾಲದಲ್ಲಿ ಸೋರುತ್ತಿದ್ದರೂ ಹೊಸ ಕಟ್ಟಡಕ್ಕೆ ಹೋಗುವ ಮನಸ್ಸು ಮಾಡುತ್ತಿಲ್ಲ.
4 ಗುಂಟೆ ಜಾಗ ಖರೀದಿ: ಹಿರೇನರ್ತಿ ಗ್ರಾಪಂ ಸದಸ್ಯ ಬಸವಣ್ಣೆಪ್ಪ ಉಣಕಲ್ ಅವರನ್ನು ಈ ಕುರಿತು ಮಾತನಾಡಿಸಿದಾಗ, ಕಳೆದ ಅವಧಿಯಲ್ಲಿ ಅಂದಿನ ಸದಸ್ಯರು ಪರಸ್ಪರ ಕಿತ್ತಾಡಿಕೊಂಡು ಕಾಲಹರಣ ಮಾಡಿದ್ದಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಕಾರಣ ಈ ಕಟ್ಟಡಕ್ಕೆ ವಾಸ್ತು ದೋಷವಿದೆ ಎಂದು ಹಳೆ ಚಾವಡಿಗೆ ಮತ್ತೆ ಆಡಳಿತ ವರ್ಗಾಯಿಸಿದ್ದೇವೆ ಎನ್ನುತ್ತಾರೆ.
ಪಿಡಿಒ ಗುರುನಾಥ ಜೋಗಿ ಅವರನ್ನ ಕೇಳಿದರೆ, ಜನಪ್ರತಿನಿಧಿಗಳು ಈ ಕಟ್ಟಡದಲ್ಲಿ ವಾಸ್ತು ದೋಷವಿದೆ ಎಂದು ಹಳೆ ಕಟ್ಟಡದಲ್ಲಿಯೇ ಕಾರ್ಯ ಆರಂಭಿಸಿದ್ದಾರೆ. ಇನ್ನೊಂದು ಹೊಸ ಕಟ್ಟಡ ನಿರ್ಮಿಸಲು 4 ಗುಂಟೆ ಜಾಗವನ್ನು ಖರೀದಿಸಿದ್ದು, ಅಲ್ಲಿ ವಾಸ್ತು ಪ್ರಕಾರ ಹೊಸ ಕಟ್ಟಡ ಕಟ್ಟಲು ನಿರ್ಧರಿಸಲಾಗಿದೆ ಎಂದರು.
ಗ್ರಾಮದಲ್ಲಿ 4 ಗುಂಟೆ ಜಾಗ ಖರೀದಿಸಿ ಅಲ್ಲಿ ಇನ್ನೊಂದು ಗ್ರಾಪಂ ಕಟ್ಟಡವನ್ನು ಕಟ್ಟಲು ಅಣಿಯಾಗುತ್ತಿರುವ ನಮ್ಮ ಜನಪ್ರತಿನಿಧಿಗಳು ಮೂಢನಂಬಿಕೆಗೆ ದಾಸರಾಗುತ್ತಿದ್ದಾರೆಯೇ ಎಂಬ ಜಿಜ್ಞಾಸೆ ಜನತೆಯಲ್ಲಿ ಮೂಡಿದೆ.
ಶೀತಲ ಎಸ್. ಮುರಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

