ಧಾರವಾಡ

ಭರದಿಂದ ಬಿತ್ತನೆ

Published On :

ಕುಂದಗೋಳ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನಿಧಾನಗತಿಯಲ್ಲಿದ್ದ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಜಿ.ಎಂ. ಮುರಗೋಡ ಸಂತಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಗುರುವಾರ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು, ತಾಲೂಕಿನಲ್ಲಿ 369 ಮಿ.ಮೀ. ಅಗತ್ಯ ಮಳೆಯಾಗಬೇಕಿತ್ತು. ಇದೀಗ 255 ಮೀ.ಮೀ. ಮಳೆ ದಾಖಲಾಗಿದೆ. ಒಟ್ಟಾರೆ ಶೇ. 69ರಷ್ಟು ಹದ ಮಳೆಯಾಗಿದ್ದು, ಅದರಲ್ಲಿ ಸಂಶಿ ಜಿಲ್ಲಾ ಪಂಚಾಯಿತಿ ಬಹುತೇಕ ಗ್ರಾಮಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಮಳೆ ಬಿದ್ದಿದೆ. ಅಲ್ಲಿ ಇನ್ನೂ ಬಿತ್ತನೆ ಮುಕ್ತಾಯಗೊಂಡಿಲ್ಲ ಎಂದು ವಿವರಿಸಿದರು.
ತಾಲೂಕು ಸಮುದಾಯ ಆರೋಗ್ಯ ಇಲಾಖೆ ಅಧಿಕಾರಿ ಎಂ.ಆರ್ ನೂಲ್ವಿಯವರು ತಮ್ಮ ಇಲಾಖೆ ಪ್ರಗತಿಯ ಬಗ್ಗೆ ಮಾತನಾಡಿದರು. ತಾಪಂ ಉಪಾಧ್ಯಕ್ಷ ಚಂದ್ರಶೇಖರ ಬಿಸೆರೊಟ್ಟಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು. ಸಿಡಿಪಿಒ ತಮ್ಮ ಇಲಾಖೆ ಪ್ರಗತಿಯನ್ನು ಹೇಳುವಾಗ ಮೊದಲಿನ ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿಲ್ಲ. ಈಗ ಹೊಸದಾಗಿ ಕಟ್ಟುತ್ತಿರುವ ಕಟ್ಟಡಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ತಾಪಂ ಉಪಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಬಿಸಿಯೂಟ ಯೋಜನೆಯಲ್ಲಿನ ದೋಷ ಸರಿಪಡಿಸಿಕೊಳ್ಳಲು ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಸವರಾಜ ಕುಸುಗಲ್ಲ ಸಭೆ ಗಮನಕ್ಕೆ ತಂದರು. ತಾಲೂಕಿನ ಎಲ್ಲ ಅಧಿಕಾರಿಗಳು ಬಿಸಿಯೂಟದ ಕಾರ್ಯಕ್ಷಮತೆಯ ಬಗ್ಗೆ ನಿಗಾವಹಿಸುವಂತೆ ಮನವಿ ಮಾಡಿದರು. ಗೌಡಗೇರಿ ಗ್ರಾಮದಲ್ಲಿ ಮಲ್ಲಿಗೆ ಹೂ ಉತ್ಪಾದಕರ ಸಂಘ, ಹಾಗೂ ಮತ್ತಿಗಟ್ಟಿಯಲ್ಲಿ ಬಾಳೆ ಉತ್ಪಾದಕರ ಸಂಘ ಸ್ಥಾಪಿಸಲಾಗಿದ್ದು, ತೋಟಗಾರಿಕೆ ಇಲಾಖೆಯಿಂದ ಈ ಬೆಳೆಗಳಿಗೆ ನೆರವು ನೀಡಲಾಗುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರೆಡ್ಡಿ ತಿಳಿಸಿದರು.
ಉಳಿದಂತೆ ಜಲಾನಯನ, ಅರಣ್ಯ, ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ಉಪವಿಭಾಗದ ಕಾಮಗಾರಿಗಳ ಕುರಿತು ಸಭೆಯಲ್ಲಿ ವಿವರಣೆ ನೀಡಲಾಯಿತು. ತಾಲೂಕಿನ ಉಪ ತಹಸೀಲ್ದಾರ್ ಎಚ್.ಎಂ. ಓಲೇಕಾರ ಪಡಿತರ ಚೀಟಿಗಳ ಕುರಿತು ಮಾತನಾಡಿದರು. ತಾಪಂ ಸದಸ್ಯ ಚಂದ್ರಶೇಖರ ಬಿಸೆರೊಟ್ಟಿ, ತಹಸೀಲ್ದಾರ್ ಎಲ್ಲಿದ್ದಾರೆ? ಅವರೇ ಈ ಸಭೆಗೆ ಬರಬೇಕಾಗಿತ್ತು. ಜನರ ಜತೆ ಸೌಜನ್ಯವಾಗಿ ವರ್ತಿಸುವುದಿಲ್ಲ ಎಂದು ತಹಸೀಲ್ದಾರ್ ವಿರುದ್ಧ ಕಿಡಿಕಾರಿದರು. ತಾಪಂ ಅಧ್ಯಕ್ಷೆ ಅಂಬಮ್ಮ ಪಾಟೀಲ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಲಕ್ಷ್ಮವ್ವ  ಹಂಚಿನಾಳ, ಕಾರ್ಯನಿರ್ವಹಣಾಧಿಕಾರಿ ಹುದ್ದಾರ ಇದ್ದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯದ ಕಾಟಾಚಾರದ ಸಭೆಯಂತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.