ಧಾರವಾಡ

ವರ್ಷಾಂತ್ಯಕ್ಕೆ ಪಾಲಿಕೆ ಖಾಲಿ ಖಾಲಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 25  
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಾನವ ಸಂಪನ್ಮೂಲದ ಕೊರತೆ ಕಾಣುತ್ತಿದ್ದು, ಅಭಿವೃದ್ಧಿ ಕಾರ್ಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೋಟಿಗಟ್ಟಲೇ ಅನುದಾನವೂ ಬಂದಿತು. ಆಯುಕ್ತರಾಗಿ ಐಎಎಸ್ ಅಧಿಕಾರಿಯೂ ಬಂದರು. ಇನ್ನೂ ಕೆಲ ದಿನಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವೂ ಬರುತ್ತದೆ. ಆದರೆ, ಕೆಲಸ ಮಾಡಲು ಸಿಬ್ಬಂದಿಯೇ ಇಲ್ಲದಂತಾಗಿದೆ.
ಪ್ರತಿಯೊಬ್ಬ ಅಧಿಕಾರಿ ತನ್ನ ಕೆಲಸದ ಜೊತೆಗೆ ಕನಿಷ್ಠ ಮೂರರಿಂದ ಐದು ಹುದ್ದೆ ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದು, ಇದು ಕಾಮಗಾರಿಗಳ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.  ಅಧಿಕಾರಿಗಳು ಸೇರಿದಂತೆ 3,794 ಸಿಬ್ಬಂದಿ ಇರಬೇಕಿರುವ ಈ ಮಹಾನಗರ ಪಾಲಿಕೆಯಲ್ಲಿ 1,670 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 2,253 ಹುದ್ದೆಗಳು ಖಾಲಿ ಇದ್ದು, ಕಳೆದ ಹಲವು ವರ್ಷಗಳಿಂದ ಹುದ್ದೆ ಭರ್ತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವಿವಿಧ 1,929 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತುಂಬಿಕೊಳ್ಳಲಾಗಿದೆ. ಇವುಗಳಲ್ಲಿ 1,731 ಪೌರ ಕಾರ್ಮಿಕರು, 15 ಜನ ಗಾರ್ಡನರ್‌ಗಳು, 55 ಜನ ಗ್ರೌಂಡ್ ವಾಚ್‌ಮನ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ 2,253 ಹುದ್ದೆ ಮಹಾನಗರ ಪಾಲಿಕೆಯಲ್ಲಿ ಖಾಲಿ ಇದ್ದು, ಇದೇ ಡಿಸೆಂಬರ್ ಅಂತ್ಯಕ್ಕೆ ಇನ್ನೂ 82 ಸಿಬ್ಬಂದಿ ನಿವೃತ್ತಿ ಹೊಂದಲಿದ್ದಾರೆ. ಇವರಲ್ಲಿ 37 ಪೌರ ಕಾರ್ಮಿಕರಾಗಿದ್ದು, ಇನ್ನುಳಿದ 45 ಜನ ವಿವಿಧ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು. ಹೀಗಾಗಿ ಖಾಲಿ ಹುದ್ದೆಗಳ ಸಂಖ್ಯೆ ಡಿಸೆಂಬರ್ ಅಂತ್ಯಕ್ಕೆ 2,253ರಿಂದ 2,335ಕ್ಕೆ ಏರಲಿದೆ. ಜೊತೆಗೆ ಈಗಾಗಲೇ ಮೂರರಿಂದ ಐದು ಹೆಚ್ಚುವರಿ ಹುದ್ದೆಗಳನ್ನು ನಿಭಾಯಿಸುತ್ತಿರುವ ಅಧಿಕಾರಿಗಳ ಮೇಲೆ ಮತ್ತಷ್ಟು ಹೊರೆ ಬೀಳುವ ಜೊತೆಗೆ, ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವೂ ಮತ್ತಷ್ಟು ಕುಸಿತಗೊಳ್ಳುವುದು ಖಚಿತ.
ಖಾಲಿ ಇರುವ ಹುದ್ದೆಗಳಿವು:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ಹೆಚ್ಚುವರಿ ಆಯುಕ್ತ, ಉಪ ಆಯುಕ್ತ (ಕಂದಾಯ), ಮುಖ್ಯ ಲೆಕ್ಕಾಧಿಕಾರಿ, ಕಾರ್ಯನಿರ್ವಾಹಕ ಅಭಿಯಂತರ (ಸಿವಿಲ್), ಕಾನೂನು ಅಧಿಕಾರಿ, ಆರೋಗ್ಯಾಧಿಕಾರಿ, ಪರಿಷತ್ ಕಾರ್ಯದರ್ಶಿ, ಸಾರ್ವಜನಿಕ ಸಂಪರ್ಕಾಧಿಕಾರಿ, ತಾಂತ್ರಿಕ ಸಹಾಯಕ, ಲೆಕ್ಕಾಧಿಕಾರಿ, ಪ್ರಾಣಿ ಚಿಕಿತ್ಸಾಧಿಕಾರಿಗಳ ತಲಾ ಒಂದು ಹುದ್ದೆ, ವಲಯ ಆಯುಕ್ತರ ಮೂರು ಹುದ್ದೆ, ನಗರ ಯೋಜನಾ ಸಹಾಯಕ ಅಧಿಕಾರಿಯ 2, ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) 8, ಸಹಾಯಕ ಅಭಿಯಂತರ (ಸಿವಿಲ್) 4, ಸಹಾಯಕ ಅಭಿಯಂತರ (ತ್ಯಾಜ್ಯ ನಿರ್ವಹಣೆ) 9, ಸಹಾಯಕ ಅಭಿಯಂತರ (ಒಳ ಚರಂಡಿ) 9, ಪರಿಸರ ಅಭಿಯಂತರ 7 ಹುದ್ದೆಗಳು ಖಾಲಿ ಇವೆ. ಪರಿಶೋಧಕ ಅಭಿಯಂತರ, ಸಹಾಯಕ ನಿರ್ದೇಶಕ (ಲೆಕ್ಕ)ರ ತಲಾ ಒಂದು ಹುದ್ದೆ, 2 ಸಹಾಯಕ ಕಾನೂನು ಅಧಿಕಾರಿಗಳ, 7 ಕಂದಾಯ ಅಧಿಕಾರಿಗಳ, 3 ಸೂಪರ್‌ವೈಸರ್‌ಗಳ, 7 ಕಿರಿಯ ಅಭಿಯಂತರ (ಇಲೆಕ್ಟ್ರಿಕಲ್), 12 ಕಿರಿಯ ಅಭಿಯಂತರ (ಸಿವಿಲ್), 12 ಕಿರಿಯ ಅಭಿಯಂತರ (ತ್ಯಾಜ್ಯ ನಿರ್ವಹಣೆ), 15 ಕಿರಿಯ ಅಭಿಯಂತರ (ಒಳ ಚರಂಡಿ), 1 ಸಹಾಯಕ ಯೋಜನಾಧಿಕಾರಿ, 5 ಹಿರಿಯ ಆರೋಗ್ಯಾಧಿಕಾರಿ, 12 ಲೆಕ್ಕಾಧಿಕಾರಿಗಳ, 5 ಸರ್ವೆಯರ್‌ಗಳ, 2 ಸ್ಟೋರ್ ಕೀಪರ್‌ಗಳ, 1 ದಾಖಲೆ ನಿರ್ವಹಣಾಧಿಕಾರಿಯ, 10 ಜೂನಿಯರ್ ಪ್ರೋಗ್ರಾಮರ್‌ಗಳ, 1 ವೆಟರನರ್ ಇನ್‌ಸ್ಪೆಕ್ಟರ್, 2 ಫುಡ್ ಇನ್‌ಸ್ಪೆಕ್ಟರ್‌ಗಳ, 37 ಸ್ಟೆನೊಗ್ರಾಫರ್‌ಗಳ, 13 ಎಫ್‌ಡಿಎ, 10 ಎಫ್‌ಜಿಆರ್‌ಐ, 52 ವರ್ಕ್ ಇನ್‌ಸ್ಪೆಕ್ಟರ್, 12 ವಾಟರ್ ಸಪ್ಲೈ ಇನ್‌ಸ್ಪೆಕ್ಟರ್, 14 ಯುಜಿಡಿ ಇನ್‌ಸ್ಪೆಕ್ಟರ್, 28 ಕಮ್ಯುನಿಟಿ ಆರ್ಗನೈಜರ್, 9 ಇಲೆಕ್ಟ್ರಿಶಿಯನ್ ಗ್ರೇಡ್-1, 124 ಡಾಟಾ ಎಂಟ್ರಿ ಆಪರೇಟರ್‌ಗಳ, 5 ತೋಟಗಾರಿಕಾ ಸಹಾಯಕರ, 8 ಇಲೆಕ್ಟ್ರಿಶಿಯನ್ ಗ್ರೇಡ್-2, 17 ಚಾಲಕರ, 65 ಆಫೀಸ್ ಡ್ರೈವರ್‌ಗಳ, 35 ಸಹಾಯಕ ಒಳಚರಂಡಿ ನಿರ್ವಾಹಕರ, 9 ದಫೆದಾರ್‌ಗಳ, 35 ಪ್ಲಂಬರ್‌ಗಳ, 36 ಸ್ಯಾನಿಟರಿ ಸೂಪರ್‌ವೈಜರ್‌ಗಳ, 5 ಹೆಡ್ ಗಾರ್ಡನರ್, 28 ಸೀನಿಯರ್ ವಾಲ್‌ಮನ್, 35 ಹಿರಿಯ ಒಳಚರಂಡಿ ಸಹಾಯಕರ, 112 ನೀರು ಪೂರೈಕೆ ಸಹಾಯಕರ, 11 ವಾಚ್‌ಮನ್‌ಗಳ, 231 ಒಳಚರಂಡಿ ಸಹಾಯಕರ, 47 ಕ್ಲೀನರ್‌ಗಳ, 4 ಆಫಿಸ್ ವಾಚ್‌ಮನ್‌ಗಳ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ನಗರಾಭಿವೃದ್ಧಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದೇ ಹೋದಲ್ಲಿ ಮಹಾನಗರ ಪಾಲಿಕೆ ಆಡಳಿತ ಹದಗೆಡುವುದರಲ್ಲಿ ಯಾವುದೇ ಶಂಕೆ ಇಲ್ಲ.

 ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.