ಹುಲಿ-ಮಾನವ ಸಂಘರ್ಷ ಕೊನೆಗೊಳ್ಳಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 29
ಪ್ರಸ್ತುತ ಹುಲಿಗಳಿಗೆ ಮಾನವನೇ ದೊಡ್ಡ ವೈರಿಯಾಗಿದ್ದು, ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ಕೊನೆಗೊಳ್ಳಬೇಕೆಂದು ಶಿರಸಿಯ ವನ್ಯಜೀವಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಧರ ಭಟ್ ಹೇಳಿದರು.
ಹುಲಿಗಳ ಉಳಿವಿಗಾಗಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಮುಂದಿನ ಜನಾಂಗಕ್ಕೆ ಹುಲಿಗಳನ್ನು ಉಳಿಸಲಿಲ್ಲವೆಂಬ ಅಪವಾದಕ್ಕೆ ನಾವೇ ಕಾರಣರಾಗುತ್ತೇವೆ. ಅಲ್ಲದೇ ವನ್ಯಜೀವಿಗಳ ರಕ್ಷಣೆಯು ಸರ್ಕಾರ ಮತ್ತು ಪ್ರಜೆಗಳ ಇಬ್ಬರ ಕರ್ತವ್ಯವಾಗಿದ್ದು, ಇಬ್ಬರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದಲ್ಲಿ ಹುಲಿಗಳ ರಕ್ಷಣೆ ಸಾಧ್ಯ ಎಂದರು.
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಹಾಗೂ ಗ್ರೀನ್ ಆರ್ಮಿ ಸಂಸ್ಥೆ ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ 'ಅಂತಾರಾಷ್ಟ್ರೀಯ ಹುಲಿಗಳ ದಿನಾಚರಣೆ' ನಿಮಿತ್ತ ಅವರು ಉಪನ್ಯಾಸ ನೀಡಿದರು.
ಬ್ರಿಟಿಷರು ಭಾರತಕ್ಕೆ ಬಂದೊಡನೆ ವನ್ಯಜೀವಿಗಳ ಬೇಟೆಯನ್ನು ತಮ್ಮ ಹವ್ಯಾಸವಾಗಿ ಪ್ರಾರಂಭಿಸಿದರು. ಇದನ್ನೇ ಸ್ವಾತಂತ್ರ್ಯದ ನಂತರವೂ ಮಂದುವರೆಸಿಕೊಂಡು ಬಂದ ನಾವು, ಒಂದು ಲಕ್ಷದಷ್ಟಿದ್ದ ಹುಲಿಗಳ ಸಂಖ್ಯೆಯನ್ನು 1970ರ ಅಂಚಿನಲ್ಲಿ ಕೇವಲ ನಾಲ್ಕು ಸಾವಿರಕ್ಕೆ ತಂದೆವು. 1972ರಲ್ಲಿ ವನ್ಯಜೀವಿಗಳ ರಕ್ಷಣೆಗಾಗಿ ಮಾಡಿದ ಕಾಯ್ದೆಯಿಂದ ಸದ್ಯ 1,700 ಹುಲಿಗಳು ಭಾರತದಲ್ಲಿ ರಕ್ಷಿತವಾಗಿದ್ದು, ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಎಲ್ಲ ಪೂರಕ ವ್ಯವಸ್ಥೆಗಳನ್ನು ಮಾಡಬೇಕಾಗಿದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ವಿ.ಎಚ್. ಅರಳಿ, ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಮಾತನಾಡಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್.ವಿ. ಬಿರಾದಾರ, ಪ್ರಾಧ್ಯಾಪಕರಾದ ಡಾ. ಮಂಗಳಾ ನಾಯಕ, ಡಾ. ಎ.ಎಸ್. ಬೆಲ್ಲದ, ಹರ್ಷ ನೀಲಗುಂದ, ಸಸ್ಯಶಾಸ್ತ್ರ ವಿಭಾಗದ ಡಾ. ಕೆ. ಕೊಟ್ರೇಶ, ಭೂಗರ್ಭಶಾಸ್ತ್ರ ವಿಭಾಗದ ಡಾ. ಜಗದೀಶ ಗುಡಗುರ, ವನ್ಯಜೀವಿ ತಜ್ಞ ಪ್ರೊ. ಗಂಗಾಧರ ಕಲ್ಲೂರ, ಡಾ.ನಿಟಾಳಿ, ಡಾ. ವಿಜಯ ಭಾಸ್ಕರ, ಎಸ್.ಎನ್. ಪಾಟೀಲ, ಗ್ರೀನ್ ಆರ್ಮಿಯ ನಂದೀಶ ಕಡಕೋಳ, ಮಾಧುರಿ ಬಿರಾದಾರ, ಡಾ. ಸರ್ವಮಂಗಳಾ ಕಲಿವಾಳ, ಗ್ಲೋಬಲ್ ಎಜ್ಯುಕೇಶನ ಟ್ರಸ್ಟ್ ಅಧ್ಯಕ್ಷ ಅನಿಲ ಅಲ್ಲೋಳ್ಳಿ ಇದ್ದರು. ಸಭಾ ಕಾರ್ಯಕ್ರಮದ ನಂತರ ದಿ ಟ್ರೂತ್ ಅಬೌಟ್ ಟೈಗರ್ ಎಂಬ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ವಿಜ್ಞಾನ ಕಾಲೇಜಿನ ವಿಜ್ಞಾನ ಸಂಘದ ಅಧ್ಯಕ್ಷ ಡಾ. ಜಿ.ಎಚ್. ಮಳಿಮಠ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

