ಧಾರವಾಡ

ಉಪ ಸಂಸ್ಕೃತಿಗಳನ್ನು ಗೌರವಿಸಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 29
ಬುಡಕಟ್ಟಿನ ಜನಾಂಗ, ಉಪಸಂಸ್ಕೃತಿಗಳ ಸಮೀಕ್ಷೆ ಹಾಗೂ ಸಾದ್ಯಂತ ಅಧ್ಯಯನ ನಡೆಸಿ ಸೃಜನಶೀಲ ಕೃತಿಗಳನ್ನು ರಚಿಸುವ ಪರ್ಯಾಯ ಪರಂಪರೆಯು ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಒಡಮೂಡಿದೆ ಎಂದು ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಹೇಳಿದರು.
ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಭಾನುವಾರ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಹಿರೇಮಠರ ಹವನ ಮತ್ತು ಅಭಿಮುಖ, ಪ್ರಭಾಕರ ಮಳಿಯೆ ಅನುವಾದಿತ ಕೃತಿ ಅಲ್ಬರ್ಟ್ ಕಾಮು (ಬದುಕು-ಬರಹ) ಬಿಡುಗಡೆಗೊಳಿಸಿ ಮಾತನಾಡಿದರು.
ಈ ಕೃತಿಯು ದೇಸಿ ನೆಲೆಯಲ್ಲಿದ್ದು ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದಲೂ ಸಂಭವಿಸಿರಬಹುದು. ಸಾಂಪ್ರದಾಯಿಕ ವಸ್ತು ಘಟನೆಗಳಲ್ಲದೆ, ಸಮಾಜದ ವಿವಿಧ ಸ್ತರಗಳಲ್ಲಿ ಘಟಿಸಿದ ಚಿಕ್ಕ-ಪುಟ್ಟ ಸಂಘರ್ಷಗಳೂ ಸಾಹಿತಿಗಳ ಬರವಣಿಗೆಯಲ್ಲಿ ಪ್ರಭಾವಿಸಿವೆ. ಉಪಸಂಸ್ಕೃತಿಗಳನ್ನೂ ಪ್ರಧಾನ ಸಂಸ್ಕೃತಿಗಳಂತೆಯೇ ಗೌರವಿಸಬೇಕೆಂಬ ವಾದವೂ ಇದೆ ಎಂದರು. ಸಣ್ಣ-ಪುಟ್ಟ ಸಮುದಾಯಗಳು, ಬುಡಕಟ್ಟುಗಳ ಕುರಿತಾಗಿ ಬರೆಯುವುದು, ಅಂತ ಸಣ್ಣ ಸಂಸ್ಕೃತಿಗಳಿಗೆ ಸಾಹಿತಿಗಳು ಮಾಡುವ ಉಪಕಾರವೆಂದು ಭಾವಿಸಬಾರದು ಎಂದು ಗಿರಡ್ಡಿ ಹೇಳಿದರು.
ಸಾಹಿತಿ ಹಾಗೂ ಪ್ರಕಾಶಕ ರಾಘವೇಂದ್ರ ಪಾಟೀಲ ಮಾತನಾಡಿ, ಅಧುನಿಕತೆ ನಮ್ಮ ನೆಲದ ಕೃಷಿ ಮೂಲದ ವೈವಿಧ್ಯಮಯ ಜೀವನವನ್ನು ಇಕ್ಕಟ್ಟುಗೊಳಿಸಿ, ಹಣ ಮತ್ತು ಯಂತ್ರಗಳು ಮನುಷ್ಯನ ಮೇಲೆ ಸವಾರಿ ಮಾಡುತ್ತಿವೆ. ಬಂಡಾಯ ಸಾಹಿತಿಗಳು ಮನುಷ್ಯನ ನೋವನ್ನು ಒಂದು ಚೌಕಟ್ಟಿನಲ್ಲಿಯೇ ಹೇಳಬೇಕೆಂದು ಪ್ರತಿಪಾದಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಹಿರಿಯ ವಿಮರ್ಶಕ ಡಾ. ಜಿ.ಎಸ್. ಆಮೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಎಂ. ಕಲಬುರ್ಗಿ, ಡಾ. ವೃಷಭೇಂದ್ರಸ್ವಾಮಿ, ಪಂಚಾಕ್ಷರಿ ಹಿರೇಮಠ, ವೆಂಕಟೇಶ ಮಾಚಕನೂರ, ಎಫ್.ಎಸ್. ದುರಗಣ್ಣವರ, ಕೆ.ಆರ್. ದುರ್ಗಾದಾಸ, ಪ್ರಹ್ಲಾದ್ ಅಗಸನಕಟ್ಟಿ, ಅಲ್ಲಮಪ್ರಭು ಬೆಟ್ಟದೂರು, ಶ್ಯಾಮ ಸುಂದರ, ಬಿದರಕುಂದಿ, ಡಾ. ಬಸು ಬೇವಿನಗಿಡದ, ವೀಣಾ ಶಾಂತೇಶ್ವರ, ಸಂಗಮೇಶ ಸವದತ್ತಿಮಠ, ಶ್ರೀನಿವಾಸ ವಾಡಪ್ಪಿ, ಜಿ.ಎಸ್. ಹೊಸೂರ, ಬಾಳಣ್ಣ ಶಿಗಿಹಳ್ಳಿ ಇದ್ದರು. ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರ್ವ ಅಂಗಡಿ ಪ್ರಾರ್ಥಿಸಿದರು. ಚನ್ನಪ್ಪ ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.