ದುರ್ಬಲರ ರಕ್ಷಣಾ ಕಾಯ್ದೆ ಉಲ್ಲಂಘನೆ ಬೇಡ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 30
ದುರ್ಬಲ, ದೀನ ಹಾಗೂ ಶೋಷಿತ ಸಮುದಾಯಗಳ ರಕ್ಷಣೆ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸುವ ಅಧಿನಿಯಮಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಸುವ ಮತ್ತು ದಂಡನೆ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ ಎಂದು ಜಿಪಂ ಸಿಇಓ ಪಿ.ಎ. ಮೇಘಣ್ಣವರ ಹೇಳಿದರು.
ಆಲೂರು ವೆಂಟಕರಾವ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ, ಸ್ವಾತಂತ್ರ್ಯ ಬಂದು ಪ್ರಜಾಪ್ರತಿನಿಧಿ ವ್ಯವಸ್ಥೆ ಆಡಳಿತದಲ್ಲಿ ದೌರ್ಜನ್ಯ ತಡೆ ಅಧಿನಿಯಮಗಳು ಜಾರಿಗೊಂಡರೂ ಅಂತಹ ಪ್ರಕರಣಗಳು ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಗ್ರಾಮ, ತಾಲೂಕು ಮಟ್ಟದಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗೆ ಕಾನೂನುಗಳ ಅರಿವು ಬೇಕಿದೆ ಎಂದರು.
ಹುಬ್ಬಳ್ಳಿ- ಧಾರವಾಡ ಉಪ ಪೊಲೀಸ್ ಆಯುಕ್ತ ಸುಭಾಷ ಗುಡಿಮನಿ ಮಾತನಾಡಿ, ದೌರ್ಜನ್ಯ ಪ್ರಕರಣ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆ ಕೇವಲ ಪೊಲೀಸ್ ಇಲಾಖೆಗೆ ಸಂಬಂಧಿಸಿಲ್ಲ. ಸಂಬಂಧಿತ ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿನ ವಿವಿಧ ಸರ್ಕಾರಿ ಇಲಾಖೆಗಳು ಅಷ್ಟೇ ಜವಾಬ್ದಾರಿ ಹೊಂದಿವೆ. ಎಲ್ಲರೂ ಒಂದು, ಎಂದೆಂದಿಗೂ ನಾವೆಲ್ಲರೂ ಒಂದು ಎನ್ನುವ ಭಾವನೆ ಸಮಾಜದ ಎಲ್ಲರಲ್ಲೂ ಇರಬೇಕು. ಅಗಲೇ ದೌರ್ಜನ್ಯಗಳ ಸಂಭವ ತಾನಾಗಿಯೇ ಕಡಿಮೆಯಾಗುತ್ತದೆ. ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಬಿ.ಎಸ್. ಲೋಕೇಶಕುಮಾರ, ವಿದೇಶಗಳಲ್ಲಿ ಕಾನೂನು ಪಾಲನೆಯಲ್ಲಿ ಹೆಸರುವಾಸಿಯಾದ ಭಾರತೀಯರು ದೇಶದಲ್ಲಿ ಮಾತ್ರ ಕಾನೂನು ಉಲ್ಲಂಘಿಸುವುದೇ ಸ್ವಾತಂತ್ರ್ಯ ಎಂದು ತಿಳಿದಿರುವುದು ದುರದೃಷ್ಟಕರ. ದೌರ್ಜನ್ಯ ತಡೆ ಕಾಯ್ದೆಗಳ ವ್ಯಾಪ್ತಿ ಹಾಗೂ ಆಶಯ ಬಹು ವಿಸ್ತಾರ. ಪೊಲೀಸ್ ಇಲಾಖೆಗೆ ಬರುವ ಸಾರ್ವಜನಿಕರು ಹೆಚ್ಚಾಗಿ ಒಂದಿಲ್ಲೊಂದು ಸಂಕಟದಲ್ಲಿರುವವರೇ ಆಗಿರುತ್ತಾರೆ. ಠಾಣೆಗೆ ಬರುವ ಅಂತಹವರಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕನಿಷ್ಠ ಸೌಜನ್ಯ ಹಾಗೂ ಅಗತ್ಯದ ನೆರವು ಕಲ್ಪಿಸಬೇಕು ಎಂದರು.
ಉಪ ಪೊಲೀಸ್ ಆಯುಕ್ತ ಶ್ರೀನಾಥ ಜೋಶಿ, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ದೊಡ್ಡಮನಿ, ಸಂಗಮೇಶ ಹಾಗೂ ಲಕ್ಷ್ಮಣ ಬಕ್ಕಾಯಿ, ಡಾ. ವಿಶ್ವನಾಥ ಚಿಂತಾಮಣಿ, ಎಂ. ಅರವಿಂದ ಇದ್ದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅಶೋಕ ಚಲವಾದಿ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ನವೀನ ಶಿಂತ್ರೆ ವಂದಿಸಿದರು. ನಂದ ಹಣಬರಟ್ಟಿ ಪ್ರಾರ್ಥಿಸಿದರು. ಸಂಗಮೇಶ ಕೆರಿಕಾರ ನಿರೂಪಿಸಿದರು.
ನಾಗರಿಕ ಹಕ್ಕು ಜಾರಿ ಕಾಯ್ದೆ ಕುರಿತು ಹಿರಿಯ ನ್ಯಾಯವಾದಿ ಎಸ್.ಎಸ್. ಸಾಲಿಮಠ, ಭೂ ವರ್ಗಾವಣೆ ಕಾಯ್ದೆ ಬಗ್ಗೆ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ದೌರ್ಜನ್ಯ ತಡೆಕಾಯ್ದೆ 1989ರ ಕುರಿತು ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಎಚ್. ಪಟೇಲ ಹಾಗೂ ಶೇ. 22.75 ಅನುದಾನ ಹಾಗೂ ವಿಶೇಷ ಘಟಕ ಯೋಜನೆಗಳ ಅನುಷ್ಠಾನ ಕುರಿತು ಬೆಳಗಾವಿಯ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ದೇವರಾಜ ಜಿ.ಪಿ. ಉಪನ್ಯಾಸ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

