ಸುದ್ದಿ ಸಂಕ್ಷೇಪ
ಚಿನ್ನದ ಸರ ಅಪಹರಣ
ಹುಬ್ಬಳ್ಳಿ: ಹೆಸ್ಕಾಂ ಅಧಿಕಾರಿಯೊಬ್ಬರ ಕೊರಳಲ್ಲಿದ್ದ ಸುಮಾರು ರು. 50 ಸಾವಿರ ಮೌಲ್ಯದ ಚಿನ್ನದ ಸರವನ್ನು ಅಪರಿಚಿತರು ದೋಚಿಕೊಂಡು ಪರಾರಿಯಾದ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಶೋಕ ರಾಮಪ್ಪ ಅಂಗಡಿ ಎಂಬುವವರೆ ಚಿನ್ನದ ಸರ ಕಳೆದುಕೊಂಡಿರುವ ಅಧಿಕಾರಿ. ಸೋಮವಾರ ರಾತ್ರಿ 8.30ರ ಸುಮಾರಿಗೆ ನವನಗರ ಪಾರ್ಕ್ನಿಂದ ವಾಕಿಂಗ್ ಮಾಡಿಕೊಂಡು ಹೆಸ್ಕಾಂ ಕ್ವಾಟರ್ಸ್ ಕಡೆಗೆ ಹೋಗುತ್ತಿದ್ದಾಗ, ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಅಶೋಕರ ಕೊರಳಿಗೆ ಕೈ ಹಾಕಿ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈವರೆಗೂ ಒಂಟಿ ಮಹಿಳೆಯರ ಕೊರಳಿಗೆ ಕೈಹಾಕುತ್ತಿದ್ದ ಸರಗಳ್ಳರು ಇದೀಗ ಪುರುಷರ ಕೊರಳಿಗೆ ಕೈ ಹಾಕಲಾರಂಭಿಸಿದ್ದು, ಶ್ರೀಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಸರಗಳ್ಳರನ್ನು ಬಗ್ಗುಬಡಿಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದಲ್ಲಿ ಈ ಹಾವಳಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೇರೆಯಾಗಿ ಹೇಳಬೇಕಿಲ್ಲ. ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಇನ್ಸ್ಪೆಕ್ಟರ್ ಎಚ್. ಕುಲಕರ್ಣಿ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಧಾರವಾಡ: ಟಿವಿಎಸ್ ಷೋ ರೂಂ ಕಳ್ಳತನ
ಧಾರವಾಡ: ಇಲ್ಲಿನ ಜ್ಯುಬಲಿ ಸರ್ಕಲ್ನಲ್ಲಿರುವ ಟಿವಿಎಸ್ ಷೋ ರೂಂನ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗಿದ್ದ ಕಳ್ಳರು ಅಪಾರ ಪ್ರಮಾಣದ ನಗದು ಸೇರಿದಂತೆ ಇನ್ನಿತರೆ ಸಾಮಾಗ್ರಿಗಳನ್ನು ದೋಚಿಕೊಂಡ ಹೋದ ಘಟನೆ ಸೋಮವಾರ ರಾತ್ರಿ ನಡೆದಿದೆ. ವೃತ್ತದ ಬಳಿಯ ಜ್ಯೋತಿ ಟಿವಿಎಸ್ ಷೋ ರೂಂನಲ್ಲಿ ಈ ಘಟನೆ ನಡೆದಿದೆ. ಬಾಲಕೃಷ್ಣ ಕೊಳೆಕಾರ ಎಂಬುವರಿಗೆ ಸೇರಿರುವ ಷೋ ರೂಂನಲ್ಲಿನ 1.62 ಸಾವಿರ ನಗದು ಮತ್ತು 5 ಕಂಪ್ಯೂಟರ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಲಾಗಿದೆ. ಷೋ ರೂಂ ನಲ್ಲಿಯ ಹಿಂಭಾಗದ ಕಿಡಿಕಿಯ ಸರಳುಗಳನ್ನು ಕಿತ್ತು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ರಾತ್ರಿ ಷೋ ರೂಂ ಬಂದ್ ಮಾಡಿಕೊಂಡು ಮನೆಗೆ ಹೋದ ಮಾಲೀಕರು ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ಮಾಡಿದ್ದು ಗೊತ್ತಾಗಿದೆ. ಈ ಕುರಿತಂತೆ ಎಸಿಪಿ ಎಸ್.ಎಚ್. ಕೇರಿ, ಸಿಪಿಐ ವಿಜಯಕುಮಾರ ಬಿಸ್ನಳ್ಳಿ, ಶ್ವಾನದಳ ಮತ್ತು ಬೆರಳಚ್ಚು ವಿಭಾಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಧಾರವಾಡ: ಇಲ್ಲಿನ ಹೊಸಯಲ್ಲಾಪುರದ ಜಡ್ಜಿ ಬಾವಿ ಕಟ್ಟೆಯ ಮೇಲೆ ಮಂಗಳವಾರ ಬೆಳಗ್ಗೆ ಒಂದು ಅಪರಿಚಿತ ಶವ ಪತ್ತೆಯಾಗಿದೆ. ಬಾವಿ ಸಮೀಪದ ವಿಜಯೇಂದ್ರ ಎಂಬುವರು ಬೆಳಗ್ಗೆ ಈ ಶವ ನೋಡಿ ಕೂಡಲೇ ಶಹರ ಠಾಣೆ ಪೊಲೀಸರಿಗೆ ತಿಳಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಗೆ ಅಂದಾಜು 35 ವಯಸ್ಸಾಗಿದ್ದು, 5.4 ಅಡಿ ಎತ್ತರವಿದ್ದು, ಹೆಸರು, ವಿಳಾಸ ತಿಳಿದು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈತನ ಕುರಿತು ಮಾಹಿತಿ ಇದ್ದವರು 0836 2233512 ಸಂಪರ್ಕಿಸಿ.
ಕೆವಿಜಿ ಬ್ಯಾಂಕ್ ನೂತನ ವ್ಯವಸ್ಥಾಪಕರ ನೇಮಕ
ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಧಾರವಾಡ ವಲಯದ ನೂತನ ಪ್ರಾದೇಶಿಕ ವ್ಯವಸ್ಥಾಪಕರಾಗಿ ಬಿ. ವಾಸುದೇವ ನಿಯುಕ್ತಿಗೊಂಡಿದ್ದಾರೆ. ಮೂಲತ-ಉಡುಪಿ ಜಿಲ್ಲೆಯ ವಾಸುದೇವ ಅವರು 53 ವರ್ಷದವರಾಗಿದ್ದು, ವ್ಯವಹಾರ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಬ್ಯಾಂಕಿಂಗ್ ರಂಗದಲ್ಲಿ 30 ವರ್ಷಗಳ ಅನುಭವ ಹೊಂದಿದ್ದರೆ, ಇವರು ಶಾಖಾ ಅಧಿಕಾರಿ, ವಲಯಾಧಿಕಾರಿ, ಮುಖ್ಯ ಪ್ರಬಂಧಕ ಹೀಗೆ ವಿವಿಧ ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುಂಚೆ ಬ್ಯಾಂಕಿನ ಅತಿ ಪ್ರತಿಷ್ಠಿತ ಶಾಖೆಯೆನಿಸಿರುವ ಜಿಲ್ಲೆಯ ಮುಖ್ಯ ಶಾಖೆಯ ಮುಖ್ಯ ಪ್ರಬಂಧಕರಾಗಿದ್ದರು. ಕೆವಿಜಿ ಬ್ಯಾಂಕ್ 9 ಪ್ರಾದೇಶಿಕ ಕಾರ್ಯಾಲಯ ಹೊಂದಿದ್ದು, ಅದರಲ್ಲಿ ಧಾರವಾಡ ವಲಯವೂ ಒಂದಾಗಿದೆ. ಪ್ರಸ್ತುತ ಧಾರವಾಡ ಪ್ರಾದೇಶಿಕ ಕಾರ್ಯಾಲಯ 60 ಶಾಖೆ ಹೊಂದಿದ್ದು, 2277 ಕೋಟಿ ವಹಿವಾಟು ಮಾಡುತ್ತಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿ ಉಲ್ಲಾಸ ಗುನಗಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

