ಗಲೀಜು: ಸಾಂಕ್ರಾಮಿಕ ರೋಗ ಹೆಚ್ಚುವ ಭೀತಿ
ಧಾರವಾಡ: ಒಂದೆಡೆ ಡೆಂಘೀ ಜ್ವರ ತಡೆಗಾಗಿ ಜಿಲ್ಲೆಯಾದ್ಯಂತ ಲಾರ್ವಾ ಸರ್ವೆಗೆ ಮುಂದಾಗಿರುವ ಜಿಲ್ಲಾಡಳಿತ, ಮತ್ತೊಂದೆಡೆ ಚಿಕುನ್ಗುನ್ಯಾ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿಲ್ಲವೇ...?
ಜಿಲ್ಲೆಯಾದ್ಯಂತ ಕಾಣುತ್ತಿರುವ ನೈರ್ಮಲ್ಯ ಇಂಥದೊಂದು ಶಂಕೆ ಉದ್ಭವಗೊಳ್ಳಲು ಕಾರಣ. ತುಂಬಿ ಹರಿಯುವ ಗಟಾರುಗಳು, ತಗ್ಗು ಪ್ರದೇಶದಲ್ಲಿ ನಿಲ್ಲುವ ನೀರು ಸಾಂಕ್ರಾಮಿಕ ರೋಗದ ಭೀತಿ ಸಾರ್ವಜನಿಕರಲ್ಲಿ ಹೆಚ್ಚಾಗುವಂತೆ ಮಾಡಿದೆ.
ಸಾರ್ವಜನಿಕರು ಮುಂದಾಗಿ ತಮ್ಮ ಮನೆಯಲ್ಲಿ ನೀರು ಹೆಚ್ಚಿನ ದಿನ ಸಂಗ್ರಹಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಜೊತೆಗೆ ಮತ್ತೊಂದಿಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಡೆಂಘೀ ನಿಯಂತ್ರಿಸಬಹುದು. ಆದರೆ, ಮನೆ ಮುಂದಿರುವ ಗಟಾರುಗಳಲ್ಲಿ ನೀರು ಹರಿದುಹೋಗದೆ ಸೊಳ್ಳೆಗಳ ತಾಣವಾಗಿದ್ದರೆ ಅದರಲ್ಲಿನ ಸೊಳ್ಳೆ ಕಡಿತದಿಂದ ಬರಬಹುದಾದ ಚಿಕೂನ್ಗುನ್ಯಾ ಹಾಗೂ ಮಲೇರಿಯಾದಂಥ ರೋಗಗಳನ್ನು ನಿಯಂತ್ರಿಸುವವರು ಯಾರು?
ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗ ಹೆಚ್ಚುವುದು ಸರ್ವೇ ಸಾಮಾನ್ಯ. ಮಳೆಗಾಲಕ್ಕೂ ಮುನ್ನವೇ ಮಹಾನಗರ ಪಾಲಿಕೆ ಹಾಗೂ ಜಿಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಹಾನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಗಟಾರುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲೇ ಇಲ್ಲ. ಮಹಾನಗರ ಪಾಲಿಕೆ ಹಾಗೂ ಜಿಪಂ ಅಧಿಕಾರಿಗಳ ಈ ನಿರ್ಲಕ್ಷ್ಯ ಪ್ರತಿ ವರ್ಷದ ಸಾಮಾನ್ಯ ಸಂಗತಿಯಂತಾಗಿದೆ.
ಎಲ್ಲೆಡೆ ಡೆಂಘೀ ಜ್ವರದ ಭೀತಿ ಹೆಚ್ಚುತ್ತಿದ್ದಂತೆಯೇ ಕಳೆದೆರೆಡು ದಿನಗಳ ಹಿಂದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವ ಜಿಲ್ಲಾಡಳಿತ, ಲಾರ್ವಾ ಸರ್ವೇ ನಡೆಸಿ, ಲಾರ್ವಾ ನಾಶ ಪಡಿಸಲು ಹಾಗೂ ಡೆಂಘೀ ಜ್ವರ ತಡೆಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಸೂಚಿಸಿದೆ.
ಕಾಣದ ಸ್ವಚ್ಛತೆ: ಮಹಾನಗರ ಪಾಲಿಕೆ, ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಅವರು ಇದೇ ಸಂದರ್ಭ ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮಳೆ ಬಂದಾಗ ನೀರು ನಿಲ್ಲುವ ತಗ್ಗು ಪ್ರದೇಶಗಳಲ್ಲಿ ಲಾರ್ವಾ ನಾಶಕ್ಕೆ ರಾಸಾಯನಿಕ ಸಿಂಪಡಿಸುವಂತೆ ಪಾಲಿಕೆ ಹಾಗೂ ಜಿಪಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು.
ಅದರಂತೆ ಆರೋಗ್ಯ ಇಲಾಖೆ ಕಾರ್ಯಕರ್ತರು ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡಿ ಲಾರ್ವಾ ಸರ್ವೇ ನಡೆಸುತ್ತಿದ್ದಾರೆ. ಲಾರ್ವಾ ಕಂಡುಬಂದಲ್ಲಿ ಅವುಗಳನ್ನು ನಾಶ ಪಡಿಸಿ, ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆಯೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವಳಿ ನಗರದಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಸರ್ವೇ ಕಾರ್ಯ ಮುಂದುವರೆಯಲಿದೆ.
ಆದರೆ, ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಅವಳಿ ನಗರದ ಹೆಚ್ಚಿನ ಪ್ರದೇಶಗಳಲ್ಲಿನ ಗಟಾರುಗಳಲ್ಲಿ ನೀರು ಮುಂದೆ ಹರಿದುಹೋಗದೆ ನಿಂತಿರುವುದು ಗೋಪನಕೊಪ್ಪ, ಅರವಿಂದನಗರ, ಉಣಕಲ್, ಹಳೇ ಹುಬ್ಬಳ್ಳಿ, ಗಾಂಧಿವಾಡ, ಧಾರವಾಡದ ಮದಿಹಾಳ, ಕೆಲಗೇರಿ ಮತ್ತಿತರೆಡೆ ಕಾಣಿಸುತ್ತದೆ. ತೆರೆದ ಗಟಾರುಗಳಲ್ಲಿ ನಿಂತಿರುವ ನೀರು ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಗ್ರಾಮೀಣ ಪ್ರದೇಶದ ಚಿತ್ರಣ ಇದಕ್ಕಿಂತ ಆತಂಕಕಾರಿ. ಗಟಾರು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು ಸಾಮಾನ್ಯ. ಸಂಜೆಯಾಗುತ್ತಿದ್ದಂತೆಯೇ ಗಟಾರುಗಳಿಂದ ಸೊಳ್ಳೆಗಳು ಮನೆ ಸೇರಿಕೊಳ್ಳುತ್ತವೆ. ಗ್ರಾಮೀಣ ಪ್ರದೇಶದಲ್ಲಿನ ಗಟಾರುಗಳಲ್ಲಿ ಕಸ-ಕಡ್ಡಿ ತುಂಬಿಕೊಂಡಿದ್ದರೂ ಇವುಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗ್ರಾಪಂ ಸಿಬ್ಬಂದಿ ಮುಂದಾಗುವುದಿಲ್ಲ.
ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದ್ದು, ಇನ್ನಾದರೂ ಸ್ವಚ್ಛತಾ ಕಾರ್ಯಕ್ಕೆ ಮಹಾನಗರ ಪಾಲಿಕೆ ಹಾಗೂ ಜಿಪಂ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಸಜ್ಜಾಗಬೇಕಿದೆ. ಇಲ್ಲದಿದ್ದರೆ ಸೊಳ್ಳೆಗಳ ನಿಯಂತ್ರಣ ಕಷ್ಟಸಾಧ್ಯವಾಗಿ, ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿಸುವುದು ಖಚಿತ.
ಡೆಂಘೀ ಜ್ವರ ನಿಯಂತ್ರಣ ಜೊತೆಗೆ ಚಿಕೂನ್ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ತಡೆಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅವಳಿನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಹಾಗೂ ತಾಲೂಕು ಕೇಂದ್ರಗಳಲ್ಲಿ ನೀರು ನಿಲ್ಲುವ ಗಟಾರುಗಳನ್ನು ಸ್ವಚ್ಛಗೊಳಿಸಲು ಹಾಗೂ ಮಳೆ ನೀರು ಸಂಗ್ರಹಗೊಳ್ಳುವ ತಗ್ಗು ಪ್ರದೇಶದಲ್ಲಿ ಲಾರ್ವಾ ನಾಶಕ್ಕೆ ಅವಶ್ಯಕ ರಾಸಾಯನಿಕ ಸಿಂಪಡಿಸುವಂತೆ ಮಹಾನಗರ ಪಾಲಿಕೆ ಹಾಗೂ ಜಿಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಾಂಕ್ರಾಮಿಕ ರೋಗ ನಿಯಂತ್ರಣದ ಉಪಾಯಗಳ ಬಗ್ಗೆ ಜನರಿಗೆ ಕರಪತ್ರಗಳ ಮೂಲಕ ತಿಳಿವಳಿಕೆ ನೀಡಲಾಗುವುದು. ಲಾರ್ವಾ ಸರ್ವೇ ನಡೆಸಿರುವ ಆರೋಗ್ಯ ಇಲಾಖೆ ಕಾರ್ಯಕರ್ತರು ಪ್ರತಿ ಮನೆಯಲ್ಲಿ ಈ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಜಿಲ್ಲಾಡಳಿತದ ಜೊತೆಗೆ ಜನರೂ ಸಹಕರಿಸಿದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ನಿಯಂತ್ರಣ ಸುಲಭವಾಗುತ್ತದೆ.
- ಸಮೀರ ಶುಕ್ಲಾ, ಜಿಲ್ಲಾಧಿಕಾರಿ, ಧಾರವಾಡ
ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

