ಸುದ್ದಿ ಸಂಕ್ಷೇಪ
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ
ಧಾರವಾಡ: ಪಾಠ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ ಎಂದು ರಂಗಪರಿಸರ ಸಂಸ್ಥೆಯ ಕಾರ್ಯದರ್ಶಿ ಮತ್ತು ಹಿರಿಯ ರಂಗಕರ್ಮಿ ಚಂದ್ರಶೇಖರ ಜಿಗಜಿನ್ನಿ ಹೇಳಿದರು. ಹುಬ್ಬಳ್ಳಿ-ಧಾರವಾಡ ಬೈಪಾಸ್ ಹೆದ್ದಾರಿ ಬಳಿ ಹತ್ತಿರದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ತಕ್ಷಶಿಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಹಿರಿಯರು ಬಿಟ್ಟು ಹೋಗಿರುವ ಅಮೂಲ್ಯ ಆಸ್ತಿಯಾದ ಸುಂದರ, ಸ್ವಚ್ಛ ಹಸಿರು ಪರಿಸರವನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಶಾಲೆ ಮುಖ್ಯೋಪಾಧ್ಯಾಯ ಜಗದೀಶ ಜಿಗಜಿನ್ನಿ ಮಾತನಾಡಿ, ಕೈಗಾರಿಕೆ ವಲಯದಲ್ಲಿರುವ ತಮ್ಮ ಶಾಲೆ ಮತ್ತು ಸುತ್ತಮುತ್ತಲೂ ಪರಿಸರವನ್ನು ಸ್ವಚ್ಛವಾಗಿಡಲು ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಾರ್ವಜನಿಕರ ಸಹಕಾರವನ್ನು ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು. ಸಾಂಕೇತಿಕವಾಗಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಮತ್ತು ಪಾಲಕರು ಭಾಗವಹಿಸಿದ್ದರು. ನಂತರ ಮಕ್ಕಳಿಂದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಯಾದ ನೀರಾ ಬಡಿಗೇರ, ಲಕ್ಷ್ಮಿ ಬಿಂಗೋಲೆ, ಗೌರಮ್ಮ ಬಡಿಗೇರ ಭಾಗವಹಿಸಿದ್ದರು.
ಇಂದು ಶಾಲೆ ಕಾರ್ಯಾರಂಭ
ಧಾರವಾಡ: ಇಲ್ಲಿನ ಕಾಮನಕಟ್ಟಿ ಹತ್ತಿರವಿರುವ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿನ ಸಿಬಿಎಸ್ಇ ಪಠ್ಯಕ್ರಮ ಆಧಾರಿತ ಲೀಲಾವತಿ ಚರಂತಿಮಠ ಪಬ್ಲಿಕ್ ಸ್ಕೂಲ್ನ 2013-14ನೇ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜೂ. 9ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ವಿಧಾನಸಭೆಯ ಮಾಜಿ ಉಪಸಭಾಪತಿ ಮತ್ತು ನರಗುಂದ ಶಾಸಕ ಬಿ.ಆರ್. ಯಾವಗಲ್ಲ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಶಾಸಕ ವಿನಯ ಕುಲಕರ್ಣಿ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಎ.ಎನ್. ಪಾಟೀಲ, ನಿರ್ದೇಶಕ ಜಿ.ಎಸ್. ನಾಯ್ಕ, ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ್, ಬಿಇಓ ಗಿರೀಶ ಪದಕಿ ಹಾಗೂ ಮೀನಾ ಕುಮಾರಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಮಾಸಿಕ ಶಿವಾನುಭವ ಕಾರ್ಯಕ್ರಮ
ಧಾರವಾಡ: ತಾಲೂಕಿನ ಹಾರೋಬೆಳವಡಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಾಲಯದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮ ಜೂ. 9ರಂದು ಸಂಜೆ 7.30ಕ್ಕೆ ಜರುಗಲಿದೆ.
ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀಕುಮಾರ ವಿರುಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸಿದ್ಧಾರೂಢಮಠದ ಶ್ರೀಸಿದ್ಧಶಿವಯೋಗಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗುವ ಈ ಶಿವಾನುಭವದಲ್ಲಿ ಹುಬ್ಬಳ್ಳಿಯ ರಾಷ್ಟ್ರ ಪ್ರಶಸ್ತಿ ವಿಭೂಷಿತ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಜಿ.ಜಿ. ಲೋಬೋಗೋಳ ಅತಿಥಿಯಾಗಿ ಪಾಲ್ಗೊಳ್ಳುವರು. ಬೆಳಗಾವಿ ಜಿಲ್ಲೆ ಇನಾಂಹೊಂಗಲ ಗ್ರಾಮದ ಶ್ರೀಸಿದ್ಧಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಜಿ.ವೈ. ಮಣಿಕಟ್ಟಿ ಅವರನ್ನು ಇದೇ ಸಂದರ್ಭ ಗೌರವಿಸಲಾಗುವುದು. ಅನುಸೂಯಾ ಮಣಿಕಟ್ಟಿ ದಾಸೋಹ ಸೇವೆ ಸಲ್ಲಿಸಲಿದ್ದು, ಸಮೀಪದ ಎಲ್ಲ ಗ್ರಾಮಗಳ ಭಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಶಿವಾನುಭವ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

