ಜನಮಾನಸದ ನೆನಪಿನಲ್ಲಿ ದರ್ಪಣ ಜೈನ್: ಕಣವಿ
ಧಾರವಾಡ: ಧಾರವಾಡಕ್ಕೆ ಬಂದ ಕೂಡಲೇ ಇಲ್ಲಿನ ಸಾಂಸ್ಕೃತಿಕ ಪರಿಸರ ಅರ್ಥೈಸಿಕೊಂಡು ಯೋಜನೆ ರೂಪಿಸಿ, ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ದರ್ಪಣ ಜೈನ್ ಅವರು ಜನಮಾನಸದ ನೆನೆಪಿನಲ್ಲಿ ನಿರಂತರವಾಗಿ ಉಳಿಯುತ್ತಾರೆ ಎಂದು ನಾಡೋಜ ಡಾ. ಚನ್ನವೀರ ಕಣವಿ ಇಲ್ಲಿ ಹೇಳಿದರು.
ಶಿಕ್ಷಣ, ಸಾಹಿತ್ಯ ಮತ್ತು ಸಂಗೀತಗಳ ತ್ರಿವೇಣಿ ಸಂಗಮ ಎಂದು ಪರಿಗಣಿಸಲ್ಪಡುವ ಧಾರವಾಡ ಜಿಲ್ಲೆಯನ್ನು ತಮ್ಮ ಕ್ರಿಯಾಶೀಲತೆ, ಪಾರದರ್ಶಕ ಆಡಳಿತದ ಮೂಲಕ ಅನ್ವರ್ಥಕಗೊಳಿಸಿದವರು ಹಿಂದಿನ ಜಿಲ್ಲಾಧಿಕಾರಿ ದರ್ಪಣ ಜೈನ. ಒಂದರ್ಥದಲ್ಲಿ ಅಧಿಕಾರಶಾಹಿಗೆ ಸಾಂಸ್ಕೃತಿಕ ದೀಕ್ಷೆ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೊಗಳಿದರು.
ಅಪರೂಪದ ಅಧಿಕಾರಿ: ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗಳ ಪ್ರಶಸ್ತಿ ಪಡೆದ ಹಿಂದಿನ ಜಿಲ್ಲಾಧಿಕಾರಿ ದರ್ಪಣ ಜೈನ ಅವರಿಗೆ ಶನಿವಾರ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ದರ್ಪಣ ಅವರು ನಿಜವಾದ ಅರ್ಥದಲ್ಲಿ ದರ್ಪಣವೇ. ಕನ್ನಡಿಯ ಮುಂದೆ ನಿಂತು ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಅವರ ಪ್ರತಿ ಕೆಲಸದಲ್ಲೂ ನಾವು ಸಂತೋಷ ಅನುಭವಿಸಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ, ಜನಸ್ಪಂದನೆ, ಸಾಂಸ್ಕೃತಿಕ ಕಾಳಜಿ ಅಳವಡಿಸಿಕೊಂಡು ನಿರಂತರವಾಗಿ ಕೆಲಸ ಮಾಡಿದವರು ಎಂದರು.
ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ, ಧಾರವಾಡ ಉತ್ಸವ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯವಾದದ್ದು ದರ್ಪಣ ಜೈನ ಅವರ ಕರ್ತೃತ್ವ ಶಕ್ತಿಗೊಂದು ನಿದರ್ಶನ ಎಂದರು.
ನೊಂದವರ ಕಣ್ಣೀರು ಒರೆಸಬೇಕು: ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ದರ್ಪಣ ಜೈನ, ಧಾರವಾಡ ನೆಲಕ್ಕೆ ವಿಶಿಷ್ಟ ಶಕ್ತಿ ಇದೆ. ನೀವು ತೋರಿದ ಪ್ರೀತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡಲು ಸ್ಫೂರ್ತಿ, ಪ್ರೇರಣೆ ನೀಡಿದೆ. ಮನುಷ್ಯ ಪ್ರಶಂಸೆಯಿಂದ ದೂರವಿರಬೇಕು. ಅದರಿಂದ ಅಹಂ ಹೆಚ್ಚುತ್ತೆ, ಭ್ರಮೆ ಹುಟ್ಟಿಸುತ್ತದೆ. ತಪ್ಪು ಗ್ರಹಿಕೆಗೆ ಮಾರ್ಗ ಮಾಡಿ ಕೊಡುತ್ತದೆ. ಜನರ ಸೇವೆ ಮಾಡುವ ಅವಕಾಶ ದೊರೆತಾಗ ಪ್ರಾಮಾಣಿಕವಾಗಿ ನೊಂದವರ ಕಣ್ಣೊರೆಸುವ, ಸ್ಪಂದಿಸುವ ಪ್ರಯತ್ನ ಮಾಡಬೇಕಿರುವುದು ಅಧಿಕಾರಿಗಳ ಕರ್ತವ್ಯ ಎಂದರು. ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸಿ ಸ್ವಾಗತಿಸಿದರು. ಹಿರಿಯ ಅಧಿಕಾರಿ ಮಹಾಂತೇಶ ಬೀಳಗಿ, ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಉಪವಿಭಾಗಾಧಿಕಾರಿ ಕರ್ಜಗಿ ಮತ್ತಿತರರು ಇದ್ದರು. ಸಮಾರಂಭಕ್ಕೂ ಮುಂಚೆ ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

