ಧಾರವಾಡ

ಪಾಲಿಕೆ ಕಂಟ್ರೋಲ್ ರೂಂಗೆ ಉಚಿತ ಕರೆ ಮಾಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 12
ನಿತ್ಯ ಸಾವಿರಾರು ಸಮಸ್ಯೆಗಳ ಪರಿಹಾರಕ್ಕಾಗಿ ಮಹಾನಗರ ಪಾಲಿಕೆಗೆ ದೂರು ನೀಡಲು ದೂರವಾಣಿ ಕರೆ ಮಾಡುವ ಅವಳಿ ನಗರದ ಜನತೆಗೊಂದು ಸಿಹಿ ಸುದ್ದಿ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ನಾಗರಿಕರು ದೂರು ನೀಡುವುದಕ್ಕಾಗಿಯೇ ಶೀಘ್ರದಲ್ಲಿ 'ಟೋಲ್ ಫ್ರೀ' (ಶುಲ್ಕ ರಹಿತ ಕರೆ) ದೂರವಾಣಿ ಕಾರ್ಯಾರಂಭಗೊಳ್ಳಲಿದೆ.
ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಿಕೆಗೆ ನಿತ್ಯ 5 ರಿಂದ 6 ಸಾವಿರ ದೂರುಗಳು ದೂರವಾಣಿ ಮೂಲಕ ಬರುತ್ತಿವೆ. ಸಾರ್ವಜನಿಕರು ನೀಡುವ ದೂರು ದಾಖಲಿಸಿಕೊಳ್ಳುವ ಕಂಟ್ರೋಲ್ ರೂಂನಲ್ಲಿನ ಸಿಬ್ಬಂದಿ, ದೂರು ನೀಡಿದವರಿಗೆ ದೂರಿನ ಕ್ರಮ ಸಂಖ್ಯೆ ನೀಡುವವರೆಗೆ 10 ನಿಮಿಷಗಳಿಗಿಂತ ಹೆಚ್ಚಿನ ಸಮಯ ಗತಿಸಿರುತ್ತದೆ. ಮೊಬೈಲ್ ಫೋನ್ ಅಥವಾ ಸ್ಥಿರ ದೂರವಾಣಿಯಿಂದ ಕರೆ ಮಾಡಿ ದೂರು ನೀಡುವ ಜನರು ಇದಕ್ಕಾಗಿ ಕನಿಷ್ಠ ರು. 5 ರಿಂದ 15-20ರ ವರೆಗೂ ವ್ಯಯಿಸುವುದು ಅನಿವಾರ್ಯ. ನಂತರ ತಮ್ಮ ದೂರಿನ ಕುರಿತು ಮೇಲಿಂದ ಮೇಲೆ ಕರೆ ಮಾಡಿ ವಿಚಾರಿಸಲೂ ಹಣ ವ್ಯಯಿಸಬೇಕಾಗುತ್ತದೆ.
ಒಳ ಚರಂಡಿಯಿಂದ ನೀರು ರಸ್ತೆ ಮೇಲೆ ಹರಿಯುವುದು, ಗಟಾರು ಒಡೆದಿರುವ, ಸಮರ್ಪಕ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ರಸ್ತೆ ಹದಗೆಟ್ಟಿರುವುದು, ವಿದ್ಯುತ್ ಸಮಸ್ಯೆ, ತೆರಿಗೆ ಭರಣದ ಮಾಹಿತಿ, ಗಿಡ ಬಿದ್ದಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಿಕೆ ಕಂಟ್ರೋಲ್ ರೂಂಗೆ ದೂರುಗಳ ಮಳೆಯೇ ಸುರಿಯುತ್ತಿರುತ್ತದೆ.
ಮಳೆಗಾಲದಲ್ಲಿ ಹೆಚ್ಚು ದೂರು: ಮಳೆಗಾಲದಲ್ಲಿ ಈ ದೂರುಗಳ ಸಂಖ್ಯೆ 8 ರಿಂದ 9 ಸಾವಿರಗಳವರೆಗೂ ದಾಟುವುದು ಪ್ರತಿ ವರ್ಷದ ಸಂಗತಿ. ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು, ಮನೆ ಎದುರಿನ ವಿದ್ಯುತ್ ತಂತಿ ಹರಿದುಬಿದ್ದಿರುವುದು, ಗಿಡ ಮುರಿದು ಬೀಳುವುದು ಸಾಮಾನ್ಯ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ನಾಗರಿಕರು ಪಾಲಿಕೆ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡುತ್ತಾರೆ. ದೂರು ನೀಡಲು ಕರೆ ಮಾಡಿದ್ದಕ್ಕಾಗಿ ಜನತೆ ಉಪಯೋಗಿಸುವ ಮೊಬೈಲ್ ಅಥವಾ ಸ್ಥಿರ ದೂರವಾಣಿಗೆ ಬಿಲ್ ಬರುತ್ತದೆ. ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಗಳು ಉದ್ಭವಿಸುವುದರಿಂದ ತಗ್ಗು ಪ್ರದೇಶದಲ್ಲಿ ವಾಸಿಸುವವರು ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಿಕೆಗೆ ಮೇಲಿಂದ ಮೇಲೆ ಕರೆ ಮಾಡಿ ದೂರು ನೀಡುವುದು ಅನಿವಾರ್ಯ.
ಮೊಬೈಲ್ ಸೆಟ್ ಅಥವಾ ಸ್ಥಿರ ದೂರವಾಣಿ ಸೌಲಭ್ಯ ಇಲ್ಲದೇ ಇರುವವರು ಟೆಲಿಫೋನ್ ಬೂತ್‌ಗಳತ್ತ ತೆರಳಿ ದೂರು ನೀಡಬೇಕಾಗುತ್ತದೆ. ಇದಕ್ಕಾಗಿ ದೂರು ನೀಡುವವರು ಹೆಚ್ಚಿನ ಹಣ ತೆರದೇ ಬೇರೆ ವಿಧಿ ಇರುವುದಿಲ್ಲ.
ಸಾರ್ವಜನಿಕರ ಈ ಗೋಳು ತಪ್ಪಿಸಲು ಮಹಾನಗರ ಪಾಲಿಕೆಯಲ್ಲಿ 'ಟೋಲ್ ಫ್ರೀ' ದೂರವಾಣಿ ಸಂಖ್ಯೆ ಜಾರಿಗೆ ತರುವ ಕುರಿತು ಹಿರಿಯ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. 'ಟೋಲ್ ಫ್ರೀ' ದೂರವಾಣಿ ಸಂಖ್ಯೆ ಇದ್ದಲ್ಲಿ ಬಡ ಜನರು ಸಹ ಯಾವುದೇ ಶುಲ್ಕ ಇಲ್ಲದೇ ಪಾಲಿಕೆ ಕಂಟ್ರೋಲ್ ರೂಂಗೆ ಕರೆ ಮಾಡಿ, ದೂರು ನೀಡುವುದು ಸುಲಭ.
ಸದ್ಯ ಪಾಲಿಕೆ ಕಂಟ್ರೋಲ್ ರೂಂನಲ್ಲಿ ದೂರವಾಣಿ ಸಂಖ್ಯೆಗಳಾದ 0836-2213888, 2213898, 2213869 ಕಾರ್ಯನಿರ್ವಹಿಸುತ್ತಿವೆ. ಈ ದೂರವಾಣಿ ಸಂಖ್ಯೆಗಳು ದಿನದ 24 ತಾಸೂ ಚಾಲನೆಯಲ್ಲಿರುತ್ತವೆ. ಈ ದೂರವಾಣಿ ಸಂಖ್ಯೆಗಳ ಜೊತೆಯೇ 'ಟೋಲ್ ಫ್ರೀ' ದೂರವಾಣಿ ಸಂಖ್ಯೆಯೂ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಪಾಲಿಕೆ ಅಧಿಕಾರಿಗಳು ಜನರ ಹಿತಕ್ಕಾಗಿ ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದು ಅವಳಿನಗರದ ಜನರಲ್ಲಿ ಸಂತಸ ಮೂಡಿಸಿದೆ.
-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.