ಆರೋಗ್ಯವಾಣಿ 104 ಕೇಂದ್ರ ಶೀಘ್ರ ಕಾರ್ಯಾರಂಭ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 14
ಆರೋಗ್ಯ ಹದಗೆಟ್ಟಿದೆಯೇ, ಆರೋಗ್ಯ ವಾಣಿ 104ಕ್ಕೆ ಉಚಿತವಾಗಿ ಕರೆ ಮಾಡಿ. ಸಮೀಪದ ಆಸ್ಪತ್ರೆ ಎಲ್ಲಿದೆ, ಆಸ್ಪತ್ರೆ ತಲುಪುವರೆಗೆ ಕೈಗೊಳ್ಳಬೇಕಿರುವ ಪ್ರಥಮ ಚಿಕಿತ್ಸೆಯ ಮಾಹಿತಿ ಪಡೆದುಕೊಳ್ಳಿ. ತಲೆ ನೋವು, ಜ್ವರವಾಗಿದ್ದರೆ ರೋಗ ಶಮನಕ್ಕೆ ತೆಗೆದುಕೊಳ್ಳಬೇಕಿರುವ ಮಾತ್ರೆಗಳ ಮಾಹಿತಿ ನಿಮ್ಮ ಮೊಬೈಲ್ ಫೋನ್ಸೆಟ್ನಲ್ಲಿಯೇ ಪಡೆಯಿರಿ.
ಹೌದು, ಈ ಎಲ್ಲ ಮಾಹಿತಿ ನೀಡುವ 'ಆರೋಗ್ಯ ವಾಣಿ 104' ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಪ್ರಾರಂಭಗೊಳ್ಳಲಿದೆ. ರಾಜ್ಯದ ಯಾವುದೇ ಭಾಗದ ರೋಗಿಯೂ 104 ಸಂಖ್ಯೆಗೆ ಕರೆ ಮಾಡಿದರೆ ಉಚಿತ ಆರೋಗ್ಯ ಸಲಹೆ ತಕ್ಷಣ ದೊರೆಯುತ್ತದೆ.
ಹೆಲ್ತ್ ಮ್ಯಾನೇಜ್ಮೆಂಟ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎಚ್ಎಂಆರ್ಐ) ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾರಂಭಿಸಲಿರುವ 'ಆರೋಗ್ಯ ವಾಣಿ 104' ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಮುಂದಿನ ಹತ್ತು ದಿನದೊಳಗೆ ಚಾಲನೆ ಪಡೆಯಲಿದೆ. ಜೂ. 19ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹುಬ್ಬಳ್ಳಿ ಐಟಿ ಪಾರ್ಕ್ನ ಮೊದಲ ಮಹಡಿಯಲ್ಲಿರುವ ಈ ಕಚೇರಿ ಉದ್ಘಾಟಿಸುವ ಸಾಧ್ಯತೆ ಇದೆ. ಆದರೆ, ಎಚ್ಎಂಆರ್ಐ ಅಧಿಕಾರಿಗಳ ಪ್ರಕಾರ ಉದ್ಘಾಟನೆಯ ದಿನ ಇನ್ನೂ ನಿಗದಿಗೊಂಡಿಲ್ಲ.
ಆರೋಗ್ಯ ಸಹಾಯ ವಾಣಿ 104 ಕೇಂದ್ರವನ್ನು ಹುಬ್ಬಳ್ಳಿಯಲ್ಲಿಯೇ ಪ್ರಾರಂಭಿಸುವ ಈ ಹಿಂದಿನ ಸರ್ಕಾರದ ಪ್ರಸ್ತಾವನೆಗೆ ಈಗಿನ ಕಾಂಗ್ರೆಸ್ ಸರ್ಕಾರ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ತೋರಿದೆ.
ಆರೋಗ್ಯ ವಾಣಿಯ ಕೇಂದ್ರ ಹುಬ್ಬಳ್ಳಿಯಲ್ಲಿ ಪ್ರಾರಂಭಗೊಳ್ಳುತ್ತಿರುವುದರಿಂದ ಪ್ರಮುಖವಾಗಿ ಈ ಭಾಗದ ಯುವ ಜನರಿಗೆ ಉದ್ಯೋಗ ದೊರಕಿದೆ. ಹುಬ್ಬಳ್ಳಿ, ಧಾರವಾಡ, ಕಾರವಾರ, ಬಿಜಾಪುರ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದವರೇ ಹೆಚ್ಚಾಗಿ ಈ ಕೇಂದ್ರದಲ್ಲಿ ಉದ್ಯೋಗ ಪಡೆದಿದ್ದಾರೆ.
ಕಾರ್ಯವೈಖರಿ: ಒಟ್ಟು 300 ಜನರು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ದಿನದ 24 ತಾಸೂ ಕೇಂದ್ರದಲ್ಲಿ ಕೆಲಸ ನಡೆಯುವುದರಿಂದ ಮೂರು ಪಾಳಿದಲ್ಲಿ (ಶಿಫ್ಟ್) ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಪಾಳಿಯಲ್ಲಿ 100 ಜನ ಕಾರ್ಯನಿರ್ವಹಿಸುತ್ತಾರೆ.
ಪದವಿ ಪಡೆದಿರುವ ಅದರಲ್ಲಿಯೂ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ರೆಜಿಸ್ಟರ್ ಆಫೀಸರ್ಗಳಾಗಿ, ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ ನರ್ಸ್ಗಳು ಹೆಲ್ತ್ ಅಡ್ವೈಸರ್ಗಳಾಗಿ ಹಾಗೂ ನಿವೃತ್ತ ವೈದ್ಯರು ಮೆಡಿಕಲ್ ಅಡ್ವೈಸರ್ಗಳಾಗಿ ಕಾರ್ಯ ಮಾಡಲಿದ್ದಾರೆ.
ಉಚಿತ ಆರೋಗ್ಯ ಸಲಹಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲ ವಿಭಾಗದ ಸಿಬ್ಬಂದಿಗೆ 35 ದಿನಗಳ ತರಬೇತಿಯನ್ನು ಎಚ್ಎಂಆರ್ಐ ವತಿಯಿಂದ ನೀಡಲಾಗಿದೆ.
104ಗೆ ಕರೆ ಬಂದ ಮೊದಲ ಹಂತದಲ್ಲಿ ಕರೆ ಮಾಡಿದವರ ವಿವರಗಳನ್ನು ರೆಜಿಸ್ಟರ್ ಆಫೀಸರ್ಗಳು ಪಡೆದುಕೊಳ್ಳುತ್ತಾರೆ. ಕರೆ ಮಾಡಿದವರು ವಾಸಿಸುವ ಪ್ರದೇಶ, ವಯಸ್ಸು, ಅವರಿಗಿರುವ ರೋಗದ ಲಕ್ಷಣ ಮತ್ತಿತರ ಮಾಹಿತಿ ಪಡೆಯಲಾಗುತ್ತದೆ. ಇದೇ ಸಂದರ್ಭದಲ್ಲಿ ಕರೆ ಮಾಡಿದ ವ್ಯಕ್ತಿಗೆ ಕೋಡ್ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆ ವ್ಯಕ್ತಿ ಮತ್ತೆ ಕರೆ ಮಾಡಿದರೆ ತನ್ನ ವಿವರಗಳನ್ನು ಮತ್ತೊಮ್ಮೆ ಹೇಳುವ ಬದಲು ತನಗೆ ನೀಡಿರುವ ಕೋಡ್ ಸಂಖ್ಯೆ ಹೇಳಿದರೆ ಸಾಕು.
ಎರಡನೇ ಹಂತದಲ್ಲಿ ಕರೆಯನ್ನು ಹೆಲ್ತ್ ಅಡ್ವೈಸರ್ಗಳಿಗೆ ಸ್ಥಳಾಂತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಲ್ತ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್, ರೋಗಿಯ ಲಕ್ಷಣಗಳನ್ನು ಮತ್ತೊಮ್ಮೆ ಕೇಳಿ, ತೆಗೆದುಕೊಳ್ಳಬಹುದಾದ ಮಾತ್ರೆ ಹಾಗೂ ಮತ್ತಿತರ ಮಾಹಿತಿ ನೀಡುತ್ತಾರೆ. ಕರೆ ಮಾಡಿದವರಿಗೆ ಹೆಲ್ತ್ ಅಡ್ವೈಸರ್ ನೀಡುವ ಮಾಹಿತಿ ಸಮರ್ಪಕ ಎನಿಸದೇ ಇದ್ದರೆ ಕರೆ ಮೆಡಿಕಲ್ ಅಡ್ವೈಸರ್ಗೆ ಹಸ್ತಾಂತರಗೊಳ್ಳುತ್ತದೆ. ಮೆಡಿಕಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುವ ನಿವೃತ್ತ ವೈದ್ಯರು, ಕರೆ ಮಾಡಿದ ವ್ಯಕ್ತಿ ನೀಡುವ ಮಾಹಿತಿ ಆಧಾರದ ಮೇರೆಗೆ ಆತ ತೆಗೆದುಕೊಳ್ಳಬಹುದಾದ ಮಾತ್ರೆ ಅಥವಾ ಔಷಧಿಯನ್ನು ಆತನ ಮೊಬೈಲ್ ಸೆಟ್ಗೆ ಮೆಸೇಜ್ ಮಾಡುತ್ತಾರೆ. ರೋಗ ಗಂಭೀರವಾಗಿದ್ದಲ್ಲಿ ರೋಗಿ ವಾಸಿಸುವ ಪ್ರದೇಶದ ಸಮೀಪ ಇರುವ ಆಸ್ಪತ್ರೆಗಳ ಮಾಹಿತಿ ನೀಡುತ್ತಾರೆ. ಅಗತ್ಯವಿದ್ದಲ್ಲಿ 108 ಆರೋಗ್ಯ ಕವಚಕ್ಕೆ ಮಾಹಿತಿ ನೀಡಿ, ತಕ್ಷಣ ಅಂಬ್ಯುಲೆನ್ಸ್ ರೋಗಿಯ ಮನೆಗೆ ಕಳುಹಿಸುತ್ತಾರೆ.
ನೆರೆ ರಾಜ್ಯಗಳಲ್ಲಿ ಯಶಸ್ಸು: ಎಚ್ಎಂಆರ್ಐನ ಈ ಕಾರ್ಯ ಈಗಾಗಲೇ ಆಂಧ್ರಪ್ರದೇಶ, ಅಸ್ಸಾಂ, ರಾಜಸ್ಥಾನ, ಮಹಾರಾಷ್ಟ್ರ, ಓರಿಸ್ಸಾಗಳಲ್ಲಿ ಯಶಸ್ವಿಯಾಗಿ ಮುಂದುವರಿದಿದೆ. ಇದೀಗ ಕರ್ನಾಟಕದಲ್ಲಿಯೂ ಆರೋಗ್ಯ ವಾಣಿ 104ನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಾರ್ತಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಸಂತೋಷ್ ಲಾಡ್ ಶುಕ್ರವಾರ ಸಂಜೆ ಹುಬ್ಬಳ್ಳಿ ಐಟಿ ಪಾರ್ಕ್ಗೆ ಭೇಟಿ ನೀಡಿ, ಆರೋಗ್ಯ ವಾಣಿಯಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

