ಧಾರವಾಡ

ಆಹಾರ ಸಂಗ್ರಹ, ತಪಾಸಣೆಗೆ ಜಾಗೃತಿ ಸಮಿತಿ

Published On :

ಧಾರವಾಡ: ಜುಲೈ ತಿಂಗಳಿಂದ ಬಿಪಿಎಲ್ ಕಾರ್ಡ್‌ದಾರರಿಗೆ ರು. 1 ಕೆಜಿ ಅಕ್ಕಿ ನೀಡುವ ಬಗ್ಗೆ ಜಿಲ್ಲೆಯಲ್ಲಿ ಗೋದಾಮುಗಳ ವ್ಯವಸ್ಥೆ ಆಗಬೇಕು. ಆಹಾರ ಸಚಿವರು ಆದೇಶಿಸಿದಂತೆ ಆಹಾರ ಇಲಾಖೆ ಅಕ್ರಮ, ಆಹಾರ ವಸ್ತುಗಳ ಸಂಗ್ರಹ, ತಪಾಸಣೆಗೆ ಜಿಲ್ಲಾ ಜಾಗೃತಿ ಸಮಿತಿ, ಆಹಾರ ತಪಾಸಣಾ ಸ್ಕ್ವಾಡ್‌ಗಳು ರಚನೆಯಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಹಾರ ಇಲಾಖೆಯ ಆಹಾರ ಸಾಮಗ್ರಿ ಅಕ್ರಮವಾಗಿ ವಿತರಣೆ ಆದಲ್ಲಿ ಆಹಾರ ಇಲಾಖೆಯ ಜಿಲ್ಲಾ ಮುಖ್ಯಸ್ಥರೇ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು. ಪ್ರಾಯೋಗಿಕವಾಗಿ ಯರಗುಪ್ಪಿ ಗ್ರಾಮದಲ್ಲಿ ಬೋಗಸ್ ಕಾರ್ಡ್ ನಿರ್ಮೂಲನೆ ಕಾರ್ಯಾಚರಣೆ ಜರುಗಿಸಿ ಅಲ್ಲಿನ ಜನಸಂಖ್ಯೆ, ಕುಟುಂಬ ಸಂಖ್ಯೆ ಹಾಗೂ ಅರ್ಹ ಬಿಪಿಎಲ್ ಕಾರ್ಡ್‌ದಾರರ ಗುರುತಿಸುವಿಕೆ ಕಾರ್ಯ ಜರುಗಿಸಬೇಕೆಂದು ಸಚಿವರು ತಿಳಿಸಿದರು.
ವೆಬ್ ಕ್ಯಾಮೆರಾ: ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗಾಗಿ ಒಂದು ತಾಲೂಕಿನ ಶಾಲೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಿ ಜಿಲ್ಲಾ ಕೇಂದ್ರದಿಂದಲೇ ಶಿಕ್ಷಕರ ಕಾರ್ಯವಿಧಾನ ವೀಕ್ಷಿಸುವ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು. ದೂರದ ಹಳ್ಳಿ ಶಾಲೆಗಳಿಗೆ ನಡೆದು ಹೋಗಿ ಪಾಠ ಮಾಡುವ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸುವ ಕೆಲಸ ಆಗಬೇಕು. ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟಾರೆ ಲಭ್ಯವಿರುವ ಅನೇಕ ಹಳ್ಳ ನಾಲಾಗಳ ಮೂಲಕ ಹರಿದುಹೋಗುವ ನೀರಿನ ಕುರಿತ ದತ್ತಾಂಶ ಶೇಖರಿಸಲು ಹಾಗೂ ಯೋಗ್ಯ ನೀರಿನ ಬಳಕೆ ಕುರಿತು ಸಾಧ್ಯತಾ ವರದಿ ತಯಾರಿಸಲು ಜತೆಗೆ ಕಲಘಟಗಿಯ ಪ್ರಮುಖ ಕೆರೆ ತುಂಬದ ಸಂದರ್ಭದಲ್ಲಿ ಒದಗುವ ಸಂಕಷ್ಟ ಪರಿಹಾರಕ್ಕೆ ಕಾಳಿ ನದಿ ಅಥವಾ ನೀರಸಾಗರ ಕೆರೆ ನೀರು ಪೂರೈಕೆಯ ಸಾಧ್ಯತಾ ವರದಿ ಸಲ್ಲಿಸಲು ಸಚಿವರು ಸೂಚಿಸಿದರು.
ರು. 16 ಕೋಟಿ ಪ್ರಸ್ತಾವನೆ: ಅವಳಿ ನಗರದಲ್ಲಿ ಪ್ರತಿ ವಾರ್ಡ್‌ನಲ್ಲಿ ರಸ್ತೆಯೊಂದನ್ನು ಗುರುತಿಸಿ ಅದು ಬೆಳಗಿನ ವಾಯವಿಹಾರಕ್ಕೆ ಕಸಮುಕ್ತ, ಉತ್ತಮ ರಸ್ತೆ, ಅದರಂಚಿಗೆ ಉತ್ತಮ ಮರಗಳು ಹೀಗೆ ಪ್ರತಿಯೊಂದಕ್ಕೂ ಮಾದರಿಯೆನ್ನಿಸುವ ರೀತಿಯಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬೇಕು. ಸವದತ್ತಿ- ಧಾರವಾಡ ರಸ್ತೆಯಲ್ಲಿ ಬರುವ ಹಳ್ಳಿಗಳಿಗೆ ಮಲಪ್ರಭಾ ನೀರು ಪೂರೈಕೆಯ ಪರ್ಯಾಯ ಯೋಜನೆಗೆ ಪೈಪ್‌ಲೈನ್ ಹಾಕುವ ರು. 16 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಸೂಚಿಸಿದರು. ಕುಂದಗೋಳ ತಾಲೂಕಿನ ಯಲಗೂರ ರಸ್ತೆ ದುರಸ್ತಿ ಕುರಿತು ನಾಳೆಯೇ ಸ್ಥಳಕ್ಕೆ ಪರಿಶೀಲನೆ ಮಾಡಿ ಕ್ರಮ ಜರುಗಿಸಬೇಕು ಎಂದು ಸಚಿವರು ಸುವರ್ಣ ಗ್ರಾಮ ಯೋಜನೆಯಡಿ ಹಣ ಇದ್ದರೂ ಕಾಮಗಾರಿ ನಡೆಸದ ಭೂಸೇನಾ ನಿಗಮದ ವರ್ತನೆಗೆ ಬೇಸರ ವ್ಯಕ್ತಪಡಿಸಿದರು. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಯು ಕಳೆದ ಸಾಲಿನಲ್ಲಿ ರು.] 295 ಲಕ್ಷ ವೆಚ್ಚದಲ್ಲಿ 350 ಹೆಕ್ಟೇರ್‌ನಲ್ಲಿ ಸಸ್ಯ ಬೆಳೆಸಿರುವ ಕುರಿತು ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಮುಂದಿನ ಸಭೆಯಲ್ಲಿ ಪ್ರದರ್ಶಿಸಲು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.