ತೋಟಗಾರಿಕೆ ಬೆಳೆಗೂ ಕೊಳಚೆ ನೀರು!
ಹುಬ್ಬಳ್ಳಿ: ಕೊಳಚೆ ನೀರಿನಲ್ಲಿ ತರಕಾರಿ ಬೆಳೆಯುವ ಸಮಸ್ಯೆ ಕೇವಲ ಹುಬ್ಬಳ್ಳಿ, ಧಾರವಾಡ ನಗರಗಳಿಗೆ ಮಾತ್ರ ಸಿಮೀತವಾಗಿಲ್ಲ...!
ಬಹುತೇಕ ಎಲ್ಲ ನಗರಗಳಿಂದ ಉತ್ಪತ್ತಿಯಾಗಿ ಹಳ್ಳಿಗಳತ್ತ ಮುಖ ಮಾಡುವ ಕೊಳಚೆ ನೀರು ತರಕಾರಿ, ತೋಟಗಾರಿಕೆ ಬೆಳೆ ಬೆಳೆಯಲಿಕ್ಕೆ ಉಪಯೋಗವಾಗುತ್ತಿದ್ದು, ಇನ್ನು ಕೆಲವೆಡೆ ನದಿಗಳನ್ನು ಸೇರಿ ಜಲಮೂಲ ಕಲ್ಮಷಗೊಳಿಸುತ್ತಿದೆ. ಹುಬ್ಬಳ್ಳಿಯಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಮಾವನೂರ, ಕಟಕನೂರ, ಗಿರಿಯಾಲ ಮೂಲಕ ಕಲಘಟಗಿ ತಾಲೂಕು ಪ್ರವೇಶಿಸಿ ಕರ್ಕಿಹಳ್ಳದ ಮುಖಾಂತರ ಹರಿಯುತ್ತದೆ. ಕರ್ಕಿ ಹಳ್ಳದಲ್ಲಿ ವರ್ಷಪೂರ್ತಿ ಕೊಳಚೆ ನೀರು ಹರಿಯುವುದರಿಂದ ಹಳ್ಳದ ತೀರದ ರೈತರಿಗೆ ಬೆಳೆಗಳಿಗೆ ನೀರುಣಿಸುವುದಕ್ಕೆ ಸಮಸ್ಯೆ ಎಂದಿಗೂ ತಲೆದೊರಿಲ್ಲ.
ಚರ್ಮವ್ಯಾಧಿಗೆ ಕಾರಣ: ತರಕಾರಿ ಮತ್ತು ತೋಟಕ್ಕೆ ಬಳಕೆಯಾಗುತ್ತಿರುವ ಕೊಳಚೆ ನೀರು ಒಂದು ರೀತಿಯಲ್ಲಿ ಸದ್ಬಳಕೆಯಾಗುತ್ತಿದ್ದರೂ, ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಕೊಳಚೆ ನೀರು ಹಾಯಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ರೈತರಿಗೂ ಮತ್ತು ಕಾರ್ಮಿಕರಿಗೂ ಚರ್ಮರೋಗ ಮುಂತಾದ ವ್ಯಾಧಿಗಳು ಕಾಡುತ್ತಿವೆ. ಬೆರಳುಗಳ ಸಂದುಗಳು ಕೊಳೆಯುವುದು, ಅಂಗಾಲು ಉರಿತದಂತಹ ಕಾಯಿಲೆ ಚಳಿಗಾಲದಲ್ಲಿ ಅತಿಯಾಗಿ ಕಾಡುವುದು ಸಹಜ. ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ, ಹಣ್ಣುಗಳು ಮೇಲ್ಪದರ ಬ್ಯಾಕ್ಟೀರಿಯಾ, ಕೀಟಾಣುಗಳ ವಾಸಸ್ಥಾನ. ಇಂಥ ತರಕಾರಿಯನ್ನು ಸ್ವಚ್ಛಗೊಳಿಸದೆ ಸೇವಿಸಿದಲ್ಲಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡಿದಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ರೋಗಗಳ ಆವಾಸ ಸ್ಥಾನ; ನಾನಾ ನಗರಗಳಿಂದ ಹೊರಹೋಗುವ ಕೊಳಚೆ ನೀರಿನಲ್ಲಿ ಕೇವಲ ಮಾನವ ತ್ಯಾಜ್ಯ, ಬಳಸಿದ ನೀರು ಇರುತ್ತದೆ ಎಂದು ಭಾವಿಸುವುದು. ನಗರಪ್ರದೇಶ ವ್ಯಾಪ್ತಿಯಲ್ಲಿರುವ ಚಿಕ್ಕಪುಟ್ಟ ಕೈಗಾರಿಕೆಗಳು ಉಪಯೋಗಿಸುವ ನೀರು ಮತ್ತು ರಾಸಾಯನಿಕ ವಸ್ತುಗಳು ಒಳಚರಂಡಿ ಮುಖಾಂತರ ಸೇರಿರುವ ಇಡೀ ಕೊಳಚೆ ನೀರನ್ನು ಸಂಸ್ಕರಿಸಬೇಕಾದಂತಹ ಸ್ಥಿತಿಗೆ ತಂದಿರಿಸುತ್ತವೆ. ಆದರೆ ಬಹುತೇಕ ಮಹಾನಗರ ಪಾಲಿಕೆಗಳು ಆಗಲಿ ಸ್ಥಳೀಯ ಸಂಸ್ಥೆಗಳೇ ಆಗಲಿ ಒಳಚರಂಡಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಿಲ್ಲ. ಸಂಸ್ಕರಣಗೊಳ್ಳದ ತ್ಯಾಜ್ಯ ನೀರನ್ನೇ ನೇರವಾಗಿ ಬೆಳೆಗಳಿಗೆ ಉಣಬಡಿಸಲಾಗುತ್ತಿರುವ ಕಾರಣ ಬೇರಿನ ಮುಖಾಂತರ ಸಸ್ಯಗಳ ಎಲೆಗಳಲ್ಲೂ ವಿಷಕಾರಿ ರಾಸಾಯನಿಕ ಸೇರ್ಪಡೆಗೊಂಡು ತದನಂತರ ವಿಷಯುಕ್ತ ತರಕಾರಿ ಸೇವಿಸುವ ಮನುಷ್ಯ ಮತ್ತು ಜಾನುವಾರುಗಳ ದೇಹ ಸೇರಿ ಕಾಯಿಲೆಗೆ ಕಾರಣವಾಗುತ್ತಿದೆ. ಒಟ್ಟಾರೆಯಾಗಿ ನಗರಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಸುತ್ತಲಿನ ಹಳ್ಳಿಗಳನ್ನು ಪ್ರವೇಶಿಸುವ ಮುನ್ನ ಸಂಸ್ಕರಣಗೊಳ್ಳಬೇಕಾದ ಅನಿವಾರ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

