ಧಾರವಾಡ

ಕಸಾಪ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ

Published On :

ಧಾರವಾಡ: ಸಮುದಾಯದ ಬದುಕಿಗೆ ಸಾಕ್ಷಿ ಪ್ರಜ್ಞೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡನ್ನು ಆಳುವ ಸರ್ಕಾರಗಳಿಗೆ ಅಗತ್ಯ ಬಿದ್ದಾಗ ಸೂಕ್ತ ಮಾರ್ಗದರ್ಶನ ನೀಡುವ ಹಿರಿತನ ಪಡೆಯುವಂತಾಗಬೇಕೆಂದು ಹಿರಿಯ ಚಿಂತಕ ಗೊ.ರು. ಚನ್ನಬಸಪ್ಪ ಹೇಳಿದರು.
ನಗರದ ವಿದ್ಯಾವರ್ಧಕ ಸಂಘದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ 2ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ಸ್ವಾತಂತ್ರ್ಯ ನಂತರ ದುರಾದೃಷ್ಟವೆಂಬಂತೆ ಸಾಂಸ್ಕೃತಿಕ ಸಂಬಂಧಗಳು, ಆತ್ಮಗೌರವದ ಅಭಿಮಾನಗಳು, ಪರಸ್ಪರ ಕೂಡಿ ಬದುಕುವ ಸೌಹಾರ್ದಗಳು ಆತಂಕ ಮೂಡಿಸಿವೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಆಗಿರುವ ಅಸಹ್ಯ, ಅನೀತಿ ಬೆಳವಣಿಗೆಗಳೇ ಇದಕ್ಕೆ ಕಾರಣ ಎನ್ನುವುದರ ಜೊತೆಗೆ ಸಾಹಿತಿ, ಕಲಾವಿದರ ಮತ್ತು ಬುದ್ದಿಜೀವಿಗಳ ಆಲಸ್ಯ-ಅಲಕ್ಷ್ಯಗಳೂ ಸೇರಿಕೊಂಡಿವೆ ಎಂದು ಗೂ.ರು.ಚ ವಿಷಾದ ವ್ಯಕ್ತಪಡಿಸಿದರು.
ಇಂದಿನ ಜಾಗತೀಕರಣದ ರಣಹಲಗೆಯ ಸದ್ದು, ಅನುಕರಣೆ ಧೂಳಿನಲ್ಲಿ ನಾವು ಕಳೆದು ಹೋಗುತ್ತಿರುವ ಇಂಥ ಸನ್ನಿವೇಶದಲ್ಲಿ ಸಾಹಿತ್ಯ ಸಮ್ಮೇಳನಗಳು ಜನರಲ್ಲಿ ವೈಚಾರಿಕ ಚಿಂತನೆಗೆ ಅಗತ್ಯ ಪರಿಸರ ಒದಗಿಸಬೇಕು. ನಮ್ಮನ್ನು ನಾವು ಕಳೆದುಕೊಂಡು ನಮ್ಮನ್ನು ನಾವು ಹುಡುಕಿಕೊಳ್ಳಲಿಕ್ಕೆ ನೆರವಾಗುವುದೆಂದರೆ ಸಾಹಿತ್ಯ. ನಮ್ಮ ಸಾಹಿತ್ಯ ಕತ್ತಲಿಗೆ ಬೆಳಕು, ಬೆಟ್ಟಕ್ಕೆ ಏಣಿ, ನದಿಗೆ ದೋಣಿ, ಶೆಖೆಗೆ ತಂಗಾಳಿಯಂತಾಗಬೇಕು. ಒಟ್ಟಾರೆ ಸಾಹಿತ್ಯ ಬದುಕಿನ ಉಸಿರಾಗಬೇಕೆಂದರು.
ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ವಲಯದಲ್ಲಿ ದಲಿತ ಬಂಡಾಯ ಚಳವಳಿ ಬಳಿಕ ಚೈತನ್ಯ ತುಂಬುವ ಮಹತ್ವದ ಕೆಲಸಗಳಾಗಿಲ್ಲ. ಭಾಷೆ, ಸಾಹಿತ್ಯ ಬಹುತೇಕ ಲಯ ಕಳೆದುಕೊಳ್ಳತೊಡಗಿತು. ಈಚೆಗೆ ಬೇರೆ ಪ್ರಕಾರಗಳಿಗಿಂತ ಕವಿತೆಗೆ ಜೋತು ಬೀಳುವ ಪ್ರವೃತ್ತಿ ಹೆಚ್ಚಾಗಿದೆ. ಪುಸ್ತಕದ ಮುದ್ರಣ, ವಿತರಣೆ ಸುಲಭವಾಗಿದ್ದರಿಂದ ಪ್ರಕಟಣೆ ಸಂಖ್ಯೆ ಹೆಚ್ಚಾಗಿದೆ. ಕೃತಿಗಳ ಗುಣಮಟ್ಟ ಬೆಳೆಯಬೇಕಿದೆ. ಪರಿಶ್ರಮ, ಆಳ ಅಧ್ಯಯನ, ಅಭ್ಯಾಸಗಳ ಅಗತ್ಯವಿದೆ. ಹೊಸ ಲೇಖಕರು ಈ ಬಗ್ಗೆ ಚಿಂತನೆ ನಡೆಸಿ ಸಾಹಿತ್ಯ ಕೃಷಿ ಮುಂದುವರಿಸಬೇಕು. ಧಾರವಾಡದಲ್ಲೀಗ 5-6 ತಲೆಮಾರಿನ ಸಾಹಿತಿಗಳಿದ್ದಾರೆ. ಸಾಹಿತಿಗಳ, ಪತ್ರಕರ್ತರ ಮಧ್ಯೆ ಆಗಬೇಕಾದ ಸಂವಹನ ಅಷ್ಟಾಗಿ ಆಗುತ್ತಿಲ್ಲ ಎಂದರು.
ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಸುಮಂಗಲಾ ಕೌದೆಣ್ಣವರ, ಈರಪ್ಪ ಕರಲಿಂಗಣ್ಣವರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ವಿ.ಸಿ. ಐರಸಂಗ,  ಕಸಾಪ ತಾಲೂಕಾಧ್ಯಕ್ಷ ಗುರು ತಿಗಡಿ, ಮೋಹನ ನಾಗಮ್ಮನವರ, ಜಿಲ್ಲಾ ಕಾರ್ಯದರ್ಶಿ ಅನೀಲ ದೇಸಾಯಿ, ಗುರುಮೂರ್ತಿ ಯರಗಂಬಳಿಮಠ, ಡಾ. ಬಸು ಬೇವಿನಗಿಡದ ಇದ್ದರು. ಎಚ್.ಎಸ್. ಬಡಿಗೇರ ನಿರೂಪಿಸಿ, ಕಾಶಪ್ಪ ದೊಡವಾಡ ವಂದಿಸಿದರು. ಇದಕ್ಕೂ ಮುನ್ನ ಶಿಕ್ಷಣತಜ್ಞ ಶಿವಶಂಕರ ಹಿರೇಮಠ ರಾಷ್ಟ್ರಧ್ವಜಾರೋಹಣ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪರಿಷತ್‌ನ ಧ್ವಜಾರೋಹಣ ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.