ಧಾರವಾಡ ಜಿಲ್ಲೆಯಲ್ಲಿ ಶೇ. 37ರಷ್ಟು ಬಿತ್ತನೆ
ಧಾರವಾಡ: ಮುಂಗಾರು ಹಂಗಾಮಿನ 2,08,900 ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ ಈ ವರೆಗೆ ಶೇ. 37ರಷ್ಟು ಅಂದರೆ 75,899 ಹೆಕ್ಟೇರ್ನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಈ ಬಾರಿ ಒಟ್ಟು 2,36,525 ಮೆಟ್ರಿಕ್ ಟನ್ ಆಹಾರ ಬೆಳೆಯುವ ಗುರಿ ಇದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಜೂನ್ 16ರ ವರೆಗೆ 187 ಮಿಮೀ ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ 12 ಮಿಮೀ ಕಡಿಮೆ ಎಂದರು. ಜಿಲ್ಲೆಯಲ್ಲಿ ಒಟ್ಟಾರೆ 21,965 ಕ್ವಿಂಟಲ್ ವಿವಿಧ ಬೆಳೆಗಳ ಬೀಜದ ಆವಶ್ಯಕತೆ ಇದ್ದು, 16,507 ಕ್ವಿಂಟಲ್ ದಾಸ್ತಾನು ಪೈಕಿ ಈವರೆಗೆ 8,345 ಕ್ವಿಂಟಲ್ ಬೀಜ ವಿತರಣೆ ಆಗಿದೆ. ಗರಿಷ್ಠ ಐದು ಎಕರೆ ವರೆಗೆ ಎಲ್ಲ ವರ್ಗದ ರೈತರಿಗೆ ರಿಯಾಯಿತಿ ದರದಲ್ಲಿ ಬೀಜಗಳ ವಿತರಣೆ ಮಾಡಲಾಗುತ್ತಿದೆ. ಈ ದರಪಟ್ಟಿಯನ್ನು ಆಯಾ ರೈತ ಸಂಪರ್ಕ ಹಾಗೂ ಕೃಷಿ ಅಧಿಕಾರಿಗಳ ಕಚೇರಿಗಳಲ್ಲಿ ಪರಿಶೀಲಿಸಬಹುದು. ಬತ್ತ, ರಾಗಿ, ಜೋಳ, ತೊಗರಿ, ಉದ್ದು, ಹೆಸರು, ಅಲಸಂದೆ, ಶೇಂಗಾ, ಕಡಲೆ, ಸೋಯಾ ಅವರೆ, ಸಜ್ಜೆ ಇವುಗಳನ್ನು ರಿಯಾಯ್ತಿ ದರದಲ್ಲಿ ಹಾಗೂ ಪ್ರತಿ ಕೆಜಿಗೆ ಸೂರ್ಯಕಾಂತಿ ರು. 80 ಮತ್ತು ಮೆಕ್ಕೆಜೋಳ ರು. 35 ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಾಗೃತಿ ಸಮಿತಿ ರಚನೆ: ಜಿಲ್ಲೆಯಲ್ಲಿ ಮುಂಗಾರು ಹಂಗಮಿನಲ್ಲಿ 63,400 ಮೆಟ್ರಿಕ್ ಟನ್ ವಿವಿಧ ಗೊಬ್ಬರಗಳ ಬೇಡಿಕೆ ಇದ್ದು, 42,174 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಜೂನ್ 13ರ ವರೆಗೆ 12,138 ಮೆಟ್ರಿಕ್ ಟನ್ ವಿತರಣೆ ಆಗಿದೆ. 30,036 ಮೆಟ್ರಿಕ್ ಟನ್ ಇನ್ನೂ ದಾಸ್ತಾನಿದೆ. ಯೂರಿಯಾ ಹೊರತುಪಡಿಸಿ ಉಳಿದೆಲ್ಲ ಗೊಬ್ಬರಗಳ ದರ ಕಡಿಮೆಯಾಗಿದ್ದು ಒಟ್ಟಾರೆ ನಿಗದಿತ ಗರಿಷ್ಠ ದರಕ್ಕಿಂತ ಹೆಚ್ಚಿಗೆ ಪಾವತಿಸದಿರಲು ವ್ಯಾಪಾರಸ್ಥರಿಗೆ ತಿಳಿಸಲಾಗಿದೆ. ನಕಲಿ ರಸಗೊಬ್ಬರ ಪತ್ತೆಗೆ ಜಾಗೃತಿ ಸಮಿತಿಗಳನ್ನು ರಚಿಸಲಾಗಿದ್ದು ಪ್ರತಿ ತಾಲೂಕಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ನಿಜವಾದ ಗೊಬ್ಬರ ಪತ್ತೆ ಹಚ್ಚುವ ಸರಳ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತಿದ್ದು ಈ ಕುರಿತು ಕರಪತ್ರಗಳನ್ನು ಮುದ್ರಿಸಿ ವಿತರಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಉತ್ತರಿಸಿದರು.
15ರೊಳಗೆ ಅರ್ಜಿ: ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಜಿಲ್ಲೆಯ ಎಲ್ಲ 14 ಹೋಬಳಿಗಳನ್ನು ಒಳಗೊಂಡು ರಾಷ್ಟ್ರಿಯ ಕೃಷಿ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಮಳೆಯಾಶ್ರಿತ ಹಾಗೂ ನೀರಾವರಿ ಬತ್ತ, ಜೋಳ, ಮುಸುಕಿನ ಜೋಳ, ಶೇಂಗಾ ಸೋಯಾ ಅವರೆ ಹಾಗೂ ಮಳೆಯಾಶ್ರಿತ ಹೆಸರು, ಉದ್ದು, ತೊಗರಿ ಹಾಗೂ ಸಾವೆ ಬೆಳೆ ಈ ಯೋಜನೆಯ ವ್ಯಾಪ್ತಿಯ ಬೆಳೆಗಳಾಗಿವೆ. ಬೆಳೆಸಾಲ ಪಡೆದ ರೈತರಿಗಿದು ಕಡ್ಡಾಯವಾಗಿದ್ದು, ಉಳಿದವರಿಗೆ ಐಚ್ಛಿಕ, ಸಣ್ಣ ಅತೀ ಸಣ್ಣ ರೈತರಿಗೆ ವಿಮಾ ಕಂತಿನ ಶೇ. 10ರಷ್ಟು ಸಹಾಯಧನ ಸೌಲಭ್ಯವಿದೆ. ಈ ಯೋಜನೆಯಡಿ ಆಗಸ್ಟ್ 15ರೊಳಗಾಗಿ ಅರ್ಜಿ ಸಲ್ಲಿಸಬೇಕು. ಪ್ರಾಯೋಗಿಕ ಹವಾಮಾನ ಆಧಾರಿತ ವಿಮೆಗೆ ಜಿಲ್ಲೆಯ 13 ಬೆಳೆಗಳು ಪ್ರಸಕ್ತ ಮುಂಗಾರು ಹಂಗಮಿನಲ್ಲಿ ಒಳಗೊಂಡಿದ್ದು ಎಲ್ಲ ಹೋಬಳಿಗಳಲ್ಲಿ ಇದು ಜಾರಿಯಲ್ಲಿರುತ್ತದೆ. ಮಳೆಯಾಶ್ರಿತ ಜೋಳ, ಮುಸುಕಿನ ಜೋಳ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ಶೇಂಗಾ, ಆಲೂಗಡ್ಡೆ ಹಾಗೂ ಹತ್ತಿ ಬೆಳೆಗಳು ಇದರಲ್ಲಿ ಸೇರಿವೆ. ರೈತರು ಅರ್ಜಿಯನ್ನು ಸಲ್ಲಿಸಲು ಜುಲೈ 31 ಕೊನೆಯ ದಿನ ಎಂದು ಪಿ.ಎ. ಮೇಘಣ್ಣವರ ತಿಳಿಸಿದರು.
ಈ ದರದಲ್ಲಿ ಗೊಬ್ಬರ ಖರೀದಿಸಿ
ರೈತರಿಗೆ ಮಾರಾಟ ಮಾಡಲಾಗುವ 50 ಕೆಜಿ ಚೀಲದ ಯೂರಿಯಾ ಗೊಬ್ಬರದ ಗರಿಷ್ಠ ಮಾರಾಟ ಬೆಲೆ ಹಿಂದಿನ ವರ್ಷದಂತೆ 279ರಿಂದ ರು. 286 ಮಿತಿಯಲ್ಲೆ ಇದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರಿ ಜಿಲ್ಲಾಧಿಕಾರಿಗಳಾದ ಪಿ.ಎ. ಮೇಘಣ್ಣವರ ತಿಳಿಸಿದ್ದಾರೆ. 20/20/0/13ರ ಗೊಬ್ಬರ ಮಾರಾಟ ಮಾಡುವ ಜೆಎಸ್ಎಫ್ಸಿ ಸಂಸ್ಥೆಯ ಮಾರಾಟ ಬೆಲೆ ಕಳೆದ ವರ್ಷದಷ್ಟೆ ರು. 754 ಇದೆ. ಜುವಾರಿ ಕಂಪನಿಯ ದರ ಮಾತ್ರ ರು. 850ರಿಂದ ರು. 884ಕ್ಕೆ ಹೆಚ್ಚಳವಾಗಿದೆ. ಉಳಿದೆಲ್ಲ ಗೊಬ್ಬರಗಳ ದರ ಕಡಿಮೆ ಇದೆ ಎಂದು ಮೇಘಣ್ಣವರ ಸ್ಪಷ್ಟ ಪಡಿಸಿದರು.
ವಿವಿಧ ಗೊಬ್ಬರಗಳ ಗರಿಷ್ಠ ದರ ಪ್ರತಿ 50 ಕೆಜಿ ಚೀಲಕ್ಕೆ ದರವನ್ನು ಮಾರಾಟ ಸಂಸ್ಥೆಯು ನೀಡಿದೆ. ಎಂಓಪಿ-ಐಪಿಎಲ್ ( 844), ಜುವಾರಿ ( 856), ಸಿಎಫ್ಎಲ್ ( 844), ಎಂಸಿಎಫ್ ( 843) ಹಾಗೂ ಫ್ಯಾಕ್ಸ್ಸ್ಟ್ ( 828) ಡಿಎಪಿ - ಸಿಎಫ್ಎಲ್ ( 1187), ಜಿಎಸ್ಎಫ್ಸಿ ( 1187), ಐಪಿಎಲ್ ( 1187) ಇಫ್ಕೋ ( 1186), ಎಂಸಿಎಫ್ ( 1192), ಜುವಾರಿ ( 1189), ಆರ್ ಸಿಎಫ್ ( 1187), ಕ್ರಿಬ್ಕೋ ( 1186) ಹಾಗೂ ಅಗ್ರಿಗೋಲ್ಡ್ ( 1210) ಇದೆ. 20/20/12-ಸಿಎಫ್ಎಲ್ ( 937), ಫ್ಯಾಕ್ಸ್ ( 936), ಜಿಎಸ್ಸೆಸ್ ( 754), ಇಫ್ಕೋ ( 949), ಎಂಸಿಎಫ್ ( 935), ಜುವಾರಿ ( 884) ಅಗ್ರಿಗೋಲ್ಡ್ ( 1000), 10/26/26-ಸಿಎಫ್ಎಲ್ ( 1088), ಇಫ್ಕೋ ( 1102), ಜುವಾರಿ ( 1106), 12/32/16-ಇಫ್ಕೋ ( 1107), ಸಿಎಫ್ಎಲ್ ( 1118) ಹಾಗೂ ಜುವಾರಿ ( 1105) 15/15/15-ಆರ್ಸಿಎಫ್ ( 831), ಅಮೋನಿಯಂ ಸಲ್ಫೇಟ್-ಫ್ಯಾಕ್ಟ್ ( 555) ಜಿಎಸ್ಸೆಸ್ ( 453) ದರ ಇದೆ. ರೈತರು ಈ ಗರಿಷ್ಠ ದರಗಳ ಮಿತಿಯೊಳಗೆ ಗೊಬ್ಬರಗಳನ್ನು ಖರೀದಿಸಬೇಕೆಂದು ಮೇಘಣ್ಣವರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

