ಹೆಣ್ಣುಭ್ರೂಣ ಹತ್ಯೆ: ಕ್ರಮಕ್ಕೆ ಆಗ್ರಹ
ಧಾರವಾಡ: ಹೆಣ್ಣು ಭ್ರೂಣ ಗುರುತಿಸಿ ಹತ್ಯೆ ಮಾಡುತ್ತಿರುವ ನಗರದ ಕೆಲ ಖಾಸಗಿ ಆಸ್ಪತ್ರೆಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಅನಧಿಕೃತವಾಗಿ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವುದನ್ನು ಕೆಲ ಖಾಸಗಿ ಆಸ್ಪತ್ರೆಗಳು ಒಂದು ವ್ಯವಹಾರ ಮಾಡಿಕೊಂಡಿವೆ. ಇಂತಹ ನರ್ಸಿಂಗ್ ಹೋಂಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸದ್ಯ ದೇಶದಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆ ಇದ್ದು, ಈ ರೀತಿಯ ಗರ್ಭಪಾತದಿಂದ ಮತ್ತೇ ಇದೇ ರೀತಿಯ ವ್ಯತ್ಯಾಸ ಮುಂದುವರೆಯುತ್ತದೆ. ಅಲ್ಲದೇ ಆಸ್ಪತ್ರೆ ತ್ಯಾಜ್ಯವನ್ನು ವೈದ್ಯರು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದಿಲ್ಲ. ವಿವಿಧ ಜಾಗಗಳಲ್ಲಿ ಬೇಕಾಬಿಟ್ಟಿ ಎಸೆಯುತ್ತಾರೆ. ಇಂತಹ ಆಸ್ಪತ್ರೆಗಳನ್ನು ಗುರುತಿಸಿ ಅವುಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಂಘಟನೆಯ ಲಕ್ಷ್ಮಣ ದೊಡ್ಡಮನಿ, ಯಲ್ಲಪ್ಪ ಮಂಟೂರು, ವಿಜಯ ಕುಂದಗೋಳ, ಪರಶುರಾಮ ದೊಡವಾಡ, ನಾರಾಯಣ ಮಾದರ, ರವಿ ಸಾಂಬ್ರಾಣಿ, ಸಿಡ್ಲಪ್ಪ ಹೆಗಡೆ ಆಗ್ರಹಿಸಿದ್ದಾರೆ.
ಡಿಕ್ಕಿ: ಬೈಕ್ ಸವಾರ ಸಾವು
ಕುಂದಗೋಳ: ಗುಡಗೇರಿ-ಲಕ್ಷ್ಮೇಶ್ವರ ಮಾರ್ಗ ಮಧ್ಯೆ ಹರ್ಜಗೇರಿ ಬಳಿ ಸೋಮವಾರ ಸಾಯಂಕಾಲ 4 ಗಂಟೆ ಸುಮಾರಿಗೆ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ತೀವ್ರ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಮೃತನು ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಸವಂತಪ್ಪ ಈರಪ್ಪ ಬಳ್ಳಾರಿ (55) ಎಂದು ಗುರುತಿಸಲಾಗಿದೆ.
ಕಲ್ಲು ಗಣಿಗಾರಿಕೆ ಬಂದ್ ಮಾಡಲು ಒತ್ತಾಯ
ಧಾರವಾಡ: ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡಿಸುವಂತೆ ಒತ್ತಾಯಿಸಿ ಲಿಂಗನಕೊಪ್ಪ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮದ ಹದ್ದಿನಲ್ಲಿರುವ ಎಸ್.ಜಿ. ಸಿಂಗ್ ಮತ್ತು ಸಂಗನಗೌಡ ಪಾಟೀಲ ಅವರು ಕಲ್ಲು ಗಣಿಗಾರಿಕೆ ನಡೆಸಿದ್ದು, ಇದರಿಂದ ಜನರಿಗೆ ಹಲವು ರೀತಿ ತೊಂದರೆಯಾಗುತ್ತಿದೆ. ಅಲ್ಲದೆ, ಗ್ರಾಮದ ಮಕ್ಕಳು ಶಾಲೆಗೆ ಹೋಗುವ ಸಂದರ್ಭ ಮತ್ತು ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಗಣಿಗಾರಿಕೆಯ ಸುರಂಗ ಕೊರೆಯುವುದರಿಂದ ಅವರಿಗೆ ಪೆಟ್ಟಾಗುವ ಸಂಭವ ಜಾಸ್ತಿ. ಅಲ್ಲದೇ, ಗಣಿಗಾರಿಕೆಯಿಂದ ಹಾರಿ ಬರುವ ಬಿಳಿ ಪುಡಿ ಬೆಳೆಗಳ ಮೇಲೆ ಕುಳಿತು ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಕಾರಣ ಕೂಡಲೇ ಕಲ್ಲು ಗಣಿಗಾರಿಕೆ ಮಾಲೀಕರನ್ನು ಕರೆಯಿಸಿ ಸ್ಥಗಿತಗೊಳಿಸುವಂತೆ ಸೂಚಿಸಬೇಕು ಎಂದು ಗ್ರಾಮಸ್ಥರಾದ ಪಿ.ಎಫ್. ದಾಸ್ತಿಕೊಪ್ಪ, ಸಿ.ಕೆ. ಸುಳ್ಳದ ಮತ್ತಿತರರು ಒತ್ತಾಯಿಸಿದರು.
ಗೃಹಿಣಿ ಸಾವು
ಧಾರವಾಡ: ಮನೆಯ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಗೃಹಿಣಿಯೊಬ್ಬರು ಮೃತರಾದ ಘಟನೆ ಸೋಮವಾರ ನಡೆದಿದೆ. ಇಲ್ಲಿನ ಗುಲಗಂಜಿಕೊಪ್ಪದ ಸ್ವಾತಿ ಗೋಪಾಲ ಬಂಗಾರಿ (25) ಮೃತಪಟ್ಟ ಗೃಹಿಣಿ. ಮೂರು ದಿನಗಳ ಹಿಂದೆ ಮನೆಯ ಮಹಡಿ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಸ್ವಾತಿ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಆರು ವರ್ಷದ ಹಿಂದೆ ಗೋಪಾಲ ಬಂಗಾರಿ ಜೊತೆ ವಿವಾಹವಾಗಿದ್ದ ಸ್ವಾತಿ ಸಂಶಯಾಸ್ಪದ ರೀತಿ ಸಾವನ್ನಪ್ಪಿದ್ದಾಳೆಂದು ಆಕೆಯ ಸಂಬಂಧಿಕರು ಗಂಡನ ಮನೆಯವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ.
ಚೂರಿ ಇರಿತ: ಬಂಧನ
ಹುಬ್ಬಳ್ಳಿ: ಇಲ್ಲಿಯ ನೆಹರು ಮೈದಾನದಲ್ಲಿ ಕ್ರಿಕೆಟ್ ಆಟದ ಸಂದರ್ಭದಲ್ಲಿ ನಡೆದ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ಸೋಮವಾರ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಾನಿ ಓಣಿಯ ಕ್ರಿಕೆಟ್ ತಂಡದ ಕಲ್ಲಪ್ಪ ಶಿರಕೋಳ, ಸಿದ್ದಾರೂಢ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ ಹಾಗೂ ಮಂಜು ಎಂದು ಗುರುತಿಸಿದ್ದಾರೆ. ಚೂರಿ ಇರಿತಕ್ಕೊಳಗಾದ ಮೆಹಬೂಬ ನಗರದ ನಜೀರ ಮುದುಗಲ್ (22) ಕಿಮ್ಸ್ನ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಬಶೀರ, ಸೈಯದ್, ಮೌಲಾಲಿ ಚೇತರಿಸಿಕೊಳ್ಳುತ್ತಿದ್ದಾರೆ. ಚೂರಿ ಇರಿತದ ನಂತರ ಕಾರ್ಯಪ್ರವತ್ತರಾದ ಶಹರ ಠಾಣೆ ಇನ್ಸ್ಪೆಕ್ಟರ್ ವಿಜಯಕುಮಾರ ಬಿಸ್ನಳ್ಳಿ ನೇತೃತ್ವದ ತಂಡ ಆರೋಪಿಗಳನ್ನು ಸೋಮವಾರ ಬೆಳಗಿನ ಜಾವವೇ ಬಂಧಿಸಿತು. ಪೊಲೀಸ್ ಆಯುಕ್ತ ಪದ್ಮನಯನ, ಡಿಸಿಪಿ ಶ್ರೀನಾಥ ಜೋಶಿ ಹಾಗೂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಮೃತ ಯೋಜನೆ: ಅರ್ಜಿ ಆಹ್ವಾನ
ಧಾರವಾಡ: ಅಮೃತ ಯೋಜನೆಯಡಿ ಧಾರವಾಡ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವ 60 ವರ್ಷದೊಳಗಿನ ವಿಧವೆಯರು ಸೇರಿದಂತೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಜಿಲ್ಲೆಗೆ 73, ಗದಗ 72, ಹಾವೇರಿ 128, ಉತ್ತರ ಕನ್ನಡ ಜಿಲ್ಲೆ ಒಂಭತ್ತು ಹೀಗೆ ಒಟ್ಟು 332 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು. ಒಟ್ಟು ಘಟಕ ವೆಚ್ಚ ರು. 35,000ಗಳಲ್ಲಿ ಶೇಕಡಾ ಅರ್ಧದಷ್ಟು ಫಲಾನುಭವಿಗಳು ವಂತಿಗೆ ನೀಡಬೇಕಾಗುತ್ತದೆ. ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ಮಾಹಿತಿಗೆ ಒಂದು ವಾರದೊಳಗಾಗಿ ಈ ಕುರಿತು ಧಾರವಾಡ ಸಹಕಾರಿ ಹಾಲು ಒಕ್ಕೂಟದ ಧಾರವಾಡ ಜಿಲ್ಲೆ ಆರ್.ಎಸ್. ಸಿದ್ಧರಾಜು- 9480682730, ಗದಗ ಜಿಲ್ಲೆ ಡಾ. ಮಹದೇವಪ್ಪ ಮಡಿವಾಳರ- 9480683732, ಹಾವೇರಿ ಜಿಲ್ಲೆ ಡಾ. ಆರ್.ಎಸ್. ಹೆಗಡೆ- 9480682709 ಹಾಗೂ ಉತ್ತರ ಕನ್ನಡ ಜಿಲ್ಲೆ ಜಯರಾಮ ಭಟ್- 9480682740 ಇವರನ್ನು ಸಂಪರ್ಕಿಸಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

