ಧಾರವಾಡ

ಕುಂದಗೋಳದಲ್ಲಿ ಬೀಡುಬಿಟ್ಟ ಅಧಿಕಾರಿಗಳು

Published On :

ಕುಂದಗೋಳ:  ಕುಂದಗೋಳ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಇವರಿಗೆ ಸರ್ಕಾರಿ ಆಡಳಿತದ ಯಾವ ನಿಯಮವು ಅನ್ವಯಿಸಲ್ಲವೇ ಎಂಬ ಪ್ರಶ್ನೆ ತಾಲೂಕಿನ ಜನರಲ್ಲಿ ಕಾಡುತ್ತಿದೆ.
ಸರ್ಕಾರದ ನಿಯಮಾವಳಿ ಡಿಪಿಎಆರ್ 22 ಎಸ್ಟಿಆರ್ 2013ರ ಪ್ರಕಾರ ಪ್ರತಿ ಗೆಜೆಟೆಡ್ ಎ ಮತ್ತು ಬಿ ಅಧಿಕಾರಿಗಳು ಒಂದು ಕಚೇರಿಯಲ್ಲಿ 3 ವರ್ಷ ಮಾತ್ರ ಸೇವೆ ಸಲ್ಲಿಸಬೇಕೆಂಬ ನಿಯಮವಿದ್ದರೆ, ಸಿ ಗ್ರೇಡ್ ನೌಕರರು 4 ಹಾಗೂ ಡಿ ಗ್ರೇಡ್ ನೌಕರರು 7 ವರ್ಷ ಸೇವೆ ಸಲ್ಲಿಸಬಹುದಾಗಿದೆ. ಈ ನಿಯಮವನ್ನು ತಾಲೂಕಿನ ಅನೇಕ ಕಚೇರಿಗಳಲ್ಲಿ ಗಾಳಿಗೆ ತೂರಿ 6-7 ವರ್ಷಗಳಿಂದ ಅಧಿಕಾರಿಗಳು ಖುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿದ್ದಾರೆ.
ಠಿಕಾಣಿ: ಉದಾಹರಣೆಗೆ ಇಲ್ಲಿನ ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗಾಧಿಕಾರಿ ಕಚೇರಿಯ ಆರ್.ಎನ್. ಹೆಬ್ಬಾರ ಅವರು 6 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯೂ 6 ವರ್ಷದಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಅದರಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎ.ಆರ್. ಕುಲಕರ್ಣಿ ಅವರೂ 6 ವರ್ಷದಿಂದ ಠಿಕಾಣಿ ಹಾಕಿದ್ದಾರೆ.  ಹಾಗೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ 6 ವರ್ಷದಿಂದ ಬೀಡುಬಿಟ್ಟರೆ ಕೃಷಿ ಇಲಾಖೆ ಅಧಿಕಾರಿ ಜಿ.ಡಿ. ಮುರಗೋಡ ಅವರೂ ಕೂಡ ಇದೇ ಸಾಲಿನಲ್ಲಿದ್ದಾರೆ. ಇವರೆಲ್ಲ ಇನ್ನೂ ವರ್ಗಾವಣೆಗೊಳ್ಳದೆ ತಾಲೂಕಿನ ಕಚೇರಿಯಲ್ಲಿದ್ದುಕೊಂಡು ತಾಲೂಕಿನ ಜನತೆಯ ನಾಡಿಮಿಡಿತಗಳ ಒಳಹೊರ ಆಳವನ್ನು ಅರಿತುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ನಿಯಮಗಳು ಅನ್ವಯಿಸುತ್ತಿಲ್ಲವೆ?: ಪೊಲೀಸ್ ಇಲಾಖೆ, ತಾಲೂಕು ಪಂಚಾಯಿತಿ, ಉಪನೋಂದಣಾಧಿಕಾರಿ, ಉಪಖಜಾನೆ, ತಹಸೀಲ್ದಾರ್, ಜಲಾನಯನ ಈ ಇಲಾಖೆಗಳಲ್ಲಿ 2-3 ವರ್ಷದೊಳಗಿನ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿದ್ದಾರೆ. ಆದರೆ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ ಹಾಗೂ ಜಿಪಂ ರಾಜ್ ಎಂಜಿನಿಯರ್ ಉಪ ವಿಭಾಗಾಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಬಿಇಓ, ಕೃಷಿ ಇಲಾಖೆ ಅಧಿಕಾರಿಗಳಿಗೆ ಸರ್ಕಾರದ ಯಾವ ನಿಯಮಗಳು ಅನ್ವಯಿಸುತ್ತಿಲ್ಲವೆ?
ಕಪ್ಪ ಕಾಣಿಕೆ: ಪ್ರತಿ ಚುನಾವಣಾ ನಂತರ ಅಧಿಕಾರಿಗಳ ವರ್ಗಾವಣೆ ಸರ್ವೇಸಾಮಾನ್ಯವಾಗಿದೆ. ಚುನಾವಣಾ ನಂತರ ಬರುವ ಬಹುತೇಕ ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ಇಲಾಖೆಯಲ್ಲಿ ಇಟ್ಟುಕೊಳ್ಳುತ್ತಾರೆ ಎನ್ನಲಾಗಿದೆ. ಆದರೆ ತಾಲೂಕಿನಲ್ಲಿನ ಅಧಿಕಾರಿಗಳು ಇನ್ನೂ ಇಲ್ಲಿಯೇ ಉಳಿದುಕೊಳ್ಳವ ಲಕ್ಷಣಗಳು ಗೋಚರಿಸುತ್ತಿದೆ. ಇಲಾಖೆಯ ಅಧಿಕಾರಿಗಳು ತಾಲೂಕಿನ ಜನಪ್ರತಿನಿಧಿಗಳಿಗೆ ಕಪ್ಪ ಕಾಣಿಕೆ ಸಲ್ಲಿಸಿ ಉಳಿದುಕೊಳ್ಳುತಾರೆಯೇ? ಎನ್ನುವುದು ಜನರ ಪ್ರಶ್ನೆ.
-ಶೀತಲ ಎಸ್. ಮುರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.