ಧಾರವಾಡ: ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ
ಧಾರವಾಡ: ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಸಹಯೋಗದಲ್ಲಿ ಮಂಗಳವಾರ ನಗರದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಎಐಡಿವೈಓ ಯುವಜನ ಸಂಘಟನೆಯ ರಾಜ್ಯಾಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ಮಣಿಪಾಲದಲ್ಲಿ ಅತ್ಯಾಚಾರದ ಘಟನೆ ನಡೆದು 5 ದಿನಗಳಾದರೂ ಪಾತಕಿಗಳನ್ನು ಬಂಧಿಸಿಲ್ಲ. 200 ಜನರ 11 ಪೊಲೀಸ್ ತಂಡ ರಚಿಸಿದ್ದೇವೆ ಎಂದು ಪೊಲೀಸ್ ಇಲಾಖೆ ಈ ಆಘಾತಕಾರಿ ಘಟನೆಯನ್ನು ಏತಕ್ಕೆ ಭೇದಿಸುತ್ತಿಲ್ಲ. ಇಂಥ ಪ್ರಕರಣ ರಾಜ್ಯದಲ್ಲಿ ನಡೆಯುತ್ತಿದ್ದರೂ ಅವುಗಳನ್ನು ತಡೆಯುವ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ಬಹುಪಾಲು ವಿದ್ಯಾರ್ಥಿಗಳು, ಯುವಜನತೆ ಮೊಬೈಲ್, ಇಂಟರ್ನೆಟ್ಗಳಲ್ಲಿ ಅಶ್ಲೀಲ ವೀಕ್ಷಣೆ ದಾಸರಾಗುತ್ತಿದ್ದಾರೆ. ಈ ವಿಷಯಗಳನ್ನು ಸ್ವಯಂಸೇವಾ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಗಳು ದೃಢೀಕರಿಸಿದೆ. ಸಿನಿಮಾ, ಟಿವಿಗಳಲ್ಲಿ ಲೈಂಗಿಕ ಪ್ರಚೋದನೆಯ ವಿಷಯಗಳು, ಹಲವಾರು ರೀತಿಯ ಅಶ್ಲೀಲ ಕ್ರೌರ್ಯವಿರುವ ದೃಶ್ಯಗಳನ್ನು ಧಾರಾಳವಾಗಿ ಬಿತ್ತರಿಸಲಾಗುತ್ತಿದೆ. ಅಶ್ಲೀಲ ಸಾಹಿತ್ಯವು ಯುವಕರಿಗೆ ಸುಲಭದಲ್ಲಿ ಕೈಗೆಟಕುತ್ತಿದೆ. ಆದ್ದರಿಂದ ಅಶ್ಲೀಲ ಸಿನಿಮಾ ಸಾಹಿತ್ಯ, ಅಂತರ್ಜಾಲದಲ್ಲಿ ಹರಿದಾಡುವ ಲೈಂಗಿಕ ಪ್ರಚೋದಕ ದೃಶ್ಯಗಳನ್ನು ನಿಷೇಧಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ವಿವಿಧ ಸಂಘಟನೆ ಮುಖಂಡರಾದ ಲಕ್ಷ್ಮಣ ಜಡಗನ್ನವರ, ಪ್ರಭಾವತಿ ಗೂಗಲ್, ಗಂಗಾಧರ ಬಡಿಗೇರ, ವಿ. ದೀಪಾ, ಶರಣಬಸವ, ನಾಗರಾಜ ತಳುಗೇರಿ, ಶಿವಶರಣ, ಎಸ್ಡಿಎಂ ವೈದ್ಯಕೀಯ, ಲೇಡಿ ಲೂರ್ಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿದ್ದರು.
ಎಬಿವಿಪಿ ಪ್ರತಿಭಟನೆ
ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳವಾರ ರಸ್ತೆ ತಡೆ ಮಾಡುವ ಮೂಲಕ ಖಂಡಿಸಿತು. ಮಣಿಪಾಲ ನಗರಕ್ಕೆ ಹೊರ ರಾಜ್ಯ, ಹೊರ ದೇಶಗಳಿಂದಲೂ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬರುತ್ತಾರೆ. ಇಂಥ ಊರಲ್ಲಿ ಪೊಲೀಸ್ ಇಲಾಖೆ ತುಸು ಚುರುಕಿನಿಂದ ಕೆಲಸ ಮಾಡುವ ಅಗತ್ಯವಿದೆ. ರಾಜ್ಯದಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಈ ಪೈಶಾಚಿಕ ಘಟನೆಗೆ ಕಾರಣರಾದ ಅಪರಾಧಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಂಘಟನೆಯ ಜಗದೀಶ ಮಾನೆ, ಬಸವಕುಮಾರ ಗೌಡರ, ಮುತ್ತುರಾಜ, ಶರಣು ಅಂಗಡಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

