ಹೆಬ್ಬಳ್ಳಿ ಅಭಿವೃದ್ಧಿಗೆ ಬೇಕಿದೆ ಸರ್ಜರಿ
ಹೆಬ್ಬಳ್ಳಿ (ಧಾರವಾಡ): ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆಗೆಯನ್ನು ತಾಲೂಕಿನ ಹೆಬ್ಬಳ್ಳಿ ಪಡೆದಿದೆ. ಚುನಾವಣೆ ಸಂದರ್ಭದಲ್ಲಂತೂ ಎಲ್ಲ ಪಕ್ಷಗಳ ಮುಖಂಡರು ಈ ಗ್ರಾಮವನ್ನೇ ಪ್ರಚಾರದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿರುತ್ತಾರೆ. ಆದರೆ, ಈ ಗ್ರಾಮದ ಅಭಿವೃದ್ಧಿಗೆ ಮಾತ್ರ ಏಕೋ ಏನೋ ಎಲ್ಲರ ವರ್ತನೆ ಗೌಣವಾಗಿ ಬಿಡುತ್ತದೆ.
ಚುನಾವಣಾ ಅಖಾಡಕ್ಕೆ ವೇದಿಕೆಯಾಗಿರುವ ಈ ಗ್ರಾಮ ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಬೇಡವಾಗಿದೆ ಎಂದು ಇಲ್ಲಿನ ಜನ ನೋವಿನಿಂದ ಹೇಳಿಕೊಳ್ಳುತ್ತಾರೆ.
ಹೌದು. ಹೆಬ್ಬಳ್ಳಿಯಲ್ಲಿ ವಿವಿಧ ಸರ್ಕಾರದ ಯೋಜನೆ, ಕಾಮಗಾರಿ ಹಾಗೂ ಕೆಲಸಗಳನ್ನು ಗಮನಿಸಿದರೆ ಎಲ್ಲ ಯೋಜನೆಗಳಿಗೂ ನೂತನ ಶಾಸಕ ವಿನಯ ಕುಲಕರ್ಣಿ ಸರ್ಜರಿ ಮಾಡುವ ಅಗತ್ಯವಿದೆ.
ಹಲವು ವರ್ಷಗಳಿಂದಲೂ ಇಲ್ಲಿನ ರೈತರು ವ್ಯವಸ್ಥಿತ ಪಶುಚಿಕಿತ್ಸಾ ಕೇಂದ್ರಕ್ಕಾಗಿ ಹಾತೊರೆಯುತ್ತಿದ್ದರೂ ಕನಸು ನನಸಾಗುತ್ತಿಲ್ಲ. ಸಾಕಿದ ದನಕರುಗಳಿಗೆ ವ್ಯವಸ್ಥಿತ ಚಿಕಿತ್ಸೆ ಕೊಡಿಸಲಾಗದೆ ಎಲ್ಲಿ ನಮಗೆ ಪಾಪ ಬರಬಹುದೆಂಬ ಪಾಪ ಪ್ರಜ್ಞೆಯಲ್ಲಿ ರೈತರು ಬದುಕುವಂತಾಗಿದೆ.
ಇದ್ದು ಇಲ್ಲದಂತೆ: ಒಂದು ಪಟ್ಟಣ ಪ್ರದೇಶ ಹೊಂದಿರುವಷ್ಟು ಜನಸಂಖ್ಯೆ (17 ಸಾವಿರ) ಹೊಂದಿರುವ ಈ ಗ್ರಾಮದಲ್ಲೊಂದು ವ್ಯವಸ್ಥಿತ ಪಶುಚಿಕಿತ್ಸಾ ಕೇಂದ್ರವಿಲ್ಲ.
ಅನಾರೋಗ್ಯದಿಂದ ಬಳಲುತ್ತಿರುವ ದನ-ಕರುಗಳನ್ನು ಎರಡು ಕಿಮೀಗಳ ವರೆಗೆ ನಡೆಸಿಕೊಂಡು ಪಕ್ಕದ ಹಳ್ಳಿಯಾದ ಮಾರಡಗಿಗೆ ಹೋಗುವ ಅನಿವಾರ್ಯತೆ ಇದೆ. ಗ್ರಾಮದಲ್ಲಿ ಪಶು ಕೇಂದ್ರವಿದ್ದರೂ ಇಲ್ಲದಂತಿದೆ. ಪಶುವೈದ್ಯರ ಕೊರತೆ, ಮೂಲಭೂತ ಸೌಕರ್ಯಗಳು ಹಾಗೂ ಔಷಧಿ ವ್ಯವಸ್ಥೆ ಈ ಹೆಬ್ಬಳ್ಳಿ ಕೇಂದ್ರದಲ್ಲಿಲ್ಲ. ಪಶುಗಳಿಗೆ ಎಷ್ಟೇ ನೋವು, ತೊಂದರೆಯಾದರೂ ಪಕ್ಕದ ಸಣ್ಣ ಹಳ್ಳಿ ಮಾರಡಗಿ ಗ್ರಾಮಕ್ಕೆ ಹೋಗಿ ಅಲ್ಲಿಯೇ ಪಶುಗಳಿಗೆ ಚಿಕಿತ್ಸೆ ಕೊಡಿಸಬೇಕು.
ದನ-ಕರುಗಳಿಗೆ ಭಯಂಕರ ರೋಗಗಳು ಬಂದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಯಾರೂ ಇರದೇ ಇರುವುದರಿಂದ ಅವು ಸಾವಿಗೀಡಾದ ಪ್ರಕರಣಗಳೂ ಇವೆ.
ಹೆಬ್ಬಳ್ಳಿ ದೊಡ್ಡ ಗ್ರಾಮ. 29 ಗ್ರಾಪಂ ಸದಸ್ಯರು, ಧಾರವಾಡ ತಾಲೂಕು ಪಂಚಾಯಿತಿ ಅಧ್ಯಕ್ಷರು ಇದೇ ಗ್ರಾಮದಲ್ಲಿದ್ದಾರೆ. ಆದರೆ, ಇದುವರೆಗೂ ರೈತನ ನೋವು ಆಲಿಸುವ ಸಹೃದಯ ಮಾತ್ರ ಯಾರೂ ತೋರುತ್ತಿಲ್ಲ. ಇದರಿಂದಾಗಿ ಈ ಗ್ರಾಮದಲ್ಲಿ ಪಶುಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಂತ ತಲುಪಿವೆ ಎಂಬುದು ಆತಂಕಕಾರಿ ವಿಷಯವೇ ಸರಿ.
ಇದೇ ಪಶು ಕೇಂದ್ರದ ಆವರಣದಲ್ಲಿಯೇ ಒಂದು ಅಂಗನವಾಡಿ ಕೇಂದ್ರ ಇದೆ. ಕೆಲವು ಬಾರಿ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆ ಬಾಗಿಲು ತೆರೆದಿಟ್ಟು ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳು ಒಳಹೋಗಿ ಪಶುಗಳ ಔಷಧಿಯಾಗಲಿ ಅಲ್ಲಿನ ವಸ್ತುಗಳನ್ನಾಗಲಿ ಸೇವಿಸಿದರೆ ಏನು ಗತಿ ಎಂಬುದನ್ನು ಯಾರೂ ಗಮನಿಸುತ್ತಿಲ್ಲ. ದನ-ಕರುಗಳಿಂದ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎನ್ನುತ್ತಾರೆ ಗ್ರಾಮಸ್ಥರು.
ದೊಡ್ಡ ಗ್ರಾಮವಾದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಈ ಗ್ರಾಮ ಇನ್ನಾದರೂ ಸರಿಯಾಗಲಿ. ಶಾಸಕ ವಿನಯ ಕುಲಕರ್ಣಿ ಅವರು ಈ ಕುರಿತು ಶೀಘ್ರದಲ್ಲಿ ಸ್ಪಂದಿಸುವರೇ ಎಂಬುದು ಗ್ರಾಮದ ಜನತೆಯ ಒಕ್ಕೊರಲಿನ ಮನವಿಯಾಗಿದೆ.
- ಹೊನ್ನಪ್ಪ ಲಕ್ಕಮ್ಮನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

