ಧಾರವಾಡ

ಪತಿಯನ್ನು ಗುರುವಾಗಿ ಸ್ವೀಕರಿಸಿದ ಶಾರದಾ ಗೋಕಾಕ

Published On :

ಧಾರವಾಡ:  ಮಹಾಪುರುಷರ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುವುದನ್ನು ಇತಿಹಾಸದಿಂದ ತಿಳಿಯುತ್ತೇವೆ. ಹಾಗೆಯೇ ಖ್ಯಾತ ಸಾಹಿತಿ ಡಾ. ವಿ.ಕೆ. ಗೋಕಾಕರ ಹಿಂದೆ ಅವರ ಪತ್ನಿ ಶಾರದಾ ಗೋಕಾಕರಿದ್ದರು ಎಂದು ಖ್ಯಾತ ಸಾಹಿತಿ ಡಾ. ಜಿ.ಎಂ. ಹೆಗಡೆ ಅಭಿಪ್ರಾಯಿಸಿದರು.
ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಲೇಖಕಿಯರ ಸಂಘ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಶಾರದಾ ವಿನಾಯಕ ಗೋಕಾಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಶಾರದಾ ಗೋಕಾಕರ ಆತ್ಮ ಚರಿತ್ರೆಯ ಸಮೀಕ್ಷೆ ಕುರಿತು ಉಪನ್ಯಾಸ ನೀಡಿದರು. ಗೋಕಾಕರಿಗೆ ಬೆಂಬಲವಾಗಿ ನಿಂತು ಅವರ ಸಾಹಿತ್ಯ ಸಿರಿಯನ್ನು ಹೆಚ್ಚಿಸಿದವರು ಅವರ ಪತ್ನಿ ಶಾರದಾ. ಬೇಂದ್ರೆಯವರ ಕವಿತೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಗೋಕಾಕ ದಂಪತಿ. ಈ ದಂಪತಿ ಕನ್ನಡ ಸಾಹಿತ್ಯವನ್ನು ಬೆಳೆಸಿದವರು. ಭಕ್ತಿ ಹಾಗೂ ಆಧ್ಯಾತ್ಮಿಕ ಎರಡನ್ನು ಸಮ್ಮಿಳಿತವಾಗಿ ಬೆಳೆಸಿಕೊಂಡ ಈ ದಂಪತಿಯ ಆದರ್ಶ ಜೀವನದ ಬದುಕು ಹೇಗಿರಬೇಕೆಂಬುದನ್ನು ಅವರ ಪುಸ್ತಕದಲ್ಲಿ ಕಾಣಬಹುದು ಎಂದರು.
ಕವಿತೆಯಲ್ಲಿ ಅಧ್ಯಾತ್ಮ:  ಮಹಾಕವಿಯ ಬದುಕನ್ನು ಶಾರದಾ ಅವರು ಅವರ ಲೇಖನಗಳಿಂದ ತಿಳಿದುಕೊಂಡವರಾಗಿದ್ದರು. ಇದರ ಜತೆಯಲ್ಲಿ ಶಾರದಾ ಅವರು ಕವಿತೆಗಳನ್ನು ಬರೆದು ಅಧ್ಯಾತ್ಮದ ಚೇತನವನ್ನು ಈ ಕವಿತೆಗಳಲ್ಲಿ ಕಾಣಬಹುದೆಂದರು. ಅವರ ಅರ್ಥಪೂರ್ಣ ಕನಸುಗಳು ಇಂದು ನಮಗೆಲ್ಲ ದಾರಿದೀಪ. ಗೋಕಾಕರ ಜತೆ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಶಾರದಾ, ಗೋಕಾಕರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿ ಬೆಳೆದರು ಎಂದು ಡಾ. ಜಿ.ಎಂ. ಹೆಗಡೆ ಹೇಳಿದರು.
ಕರ್ನಾಟಕ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಆರ್.ಎಸ್. ಸಾಲಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾರದಮ್ಮನವರು ತಾಳ್ಮೆಯ ಸಾಕಾರ ಮೂರ್ತಿ. ಜೀವನದ ತುಂಬಾ ಈ ಇಬ್ಬರು ಆದರ್ಶ ದಂಪತಿಯಾಗಿ ಬಾಳಿದವರು ಎಂದರು. ಇದೇ ಸಂದರ್ಭದಲ್ಲಿ ಗೋಕಾಕರ ಮಗಳು ಸುಜಾತಾ ತಮ್ಮ ತಾಯಿಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಉಜ್ವಲಾ ಹಿರೇಮಠ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ. ವೀಣಾ ಸಂಕನಗೌಡರ, ಸಂಘದ ಕೋಶಾಧ್ಯಕ್ಷರಾದ ಸುಜಾತಾ ಹಡಲಗಿ ಹಾಗೂ ಲಲಿತಾ ಪಾಟೀಲ, ಅನಿತಾ ಗುಡಿ ಇದ್ದರು. ಹಿರಿಯರಾದ ಎನ್.ಪಿ. ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಪಿ. ಹಿರೇಮಠ ಇದ್ದರು. ಇದಕ್ಕೂ ಮುಂಚೆ ಆಕಾಶವಾಣಿ ಗಾಯಕಿ ಸುಜಾತಾ ಕಮ್ಮಾರ ಡಾ. ವಿನಾಯಕ ಗೋಕಾಕರ ಕವಿತೆಗಳ ಗಾಯನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.