ಧಾರವಾಡ

ಶಿವಶರಣ ಹರಳಯ್ಯಾ ಜೀವನ ಕುರಿತು ಚಿತ್ರ

Published On :

ಕುಂದಗೋಳ: 12ನೇ ಶತಮಾನದ ಶಿವಶರಣ ಹರಳಯ್ಯಾ ಅವರ ಜೀವನ ಚರಿತ್ರೆ ಕುರಿತು ಚಲನಚಿತ್ರ ಚಿತ್ರೀಕರಣವನ್ನು ತಾಲೂಕಿನ ಕಮಡೂಳ್ಳಿ ಗ್ರಾಮದಲ್ಲಿ 5 ದಿನದಿಂದ ಆರಂಭಿಸಲಾಗಿದೆ ಎಂದು ನಿರ್ದೇಶಕ ಪುರುಷೋತ್ತಮ ತಿಳಿಸಿದರು. ಅವರು ಬುಧವಾರ ಕಮಡೊಳ್ಳಿ ಗ್ರಾಮದ ಸಿದ್ಧನಗೌಡ ಪಾಟೀಲರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ನನ್ನ 8ನೇ ಚಿತ್ರವಾಗಿದ್ದು, ಶಿವ ಶರಣರ ಜೀವನ ಚರಿತ್ರೆಯನ್ನು ಚಲನಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. 12ನೇ ಶತಮಾನದಲ್ಲಿಯೇ ಅನಿಷ್ಟ ಜಾತಿ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ಮಹಾಪುರುಷ ಬಸವೇಶ್ವರರಂತೆ ಹರಳಯ್ಯನವರೂ ಸರ್ವ ಜಾತಿಗಳನ್ನು ಪ್ರೀತಿಸಿ ಮಾನವ ಧರ್ಮ ಒಂದೇ ಎಂದು ನುಡಿದವರು. ಜಗಜ್ಯೋತಿ ಬಸವೇಶ್ವರರ ಪರಮ ಶಿಷ್ಯರಾದ ಹರಳಯ್ಯನವರು ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಸಾರಿದವರು. ಹರಳಯ್ಯನವರ ಕುರಿತು ಚಲನಚಿತ್ರಗಳು ಇದುವರೆಗೂ ಬಾರದಿರುವುದರಿಂದ ಗರಗದ ಚನ್ನಬಸವೇಶ್ವರ ಸ್ವಾಮೀಜಿ ಹಾಗೂ ಅವರ ಶಿಷ್ಯ ವೀರೇಶ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಭಾಗ್ಯೋದಯ ಸಿನಿ ಕ್ರಿಯೇಶನ್ಸನಲ್ಲಿ 'ಶಿವಶರಣ ಹರಳಯ್ಯ' ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ ಎಂದು ಹೇಳಿದರು.
ಪಾತ್ರಕ್ಕೆ ಜೀವ: ಈ ಚಿತ್ರದ ಪ್ರಮುಖ ಪಾತ್ರವಾದ ಹರಳಯ್ಯನ ಪಾತ್ರಕ್ಕೆ ಶ್ರೀಧರ ಅವರು ಜೀವತುಂಬುತ್ತಿದ್ದು, ಬಸವೇಶ್ವರರಾಗಿ ರಮೇಶ ಅರವಿಂದ, ಹರಳಯ್ಯನ ಹೆಂಡತಿ ಕಲ್ಯಾಣಮ್ಮಳಾಗಿ ಶೀಲಾ, ವಿಕ್ರಂ ಉದಯಕುಮಾರ ಹರಳಯ್ಯನ ತಂದೆಯಾಗಿ, ಡಿಂಗ್ರಿ ನಾಗರಾಜ ಶಿಲವಂತನ ಮಗ ಹೀಗೆ ಅನೇಕ ಅನುಭವಿ ಚಿತ್ರ ಕಲಾವಿದರು ಆಯಾ ಪಾತ್ರಕ್ಕೆ ಜೀವತುಂಬಿ ನಟಿಸುತ್ತಿದ್ದಾರೆ. ಚಿತ್ರವನ್ನು ದೇವರಾಜ, ವೆಂಕಟೇಶ, ರವಿಚಂದ್ರ ಹಾಗೂ ಕಾಶಿನಾಥ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣವು ಬೆಂಗಳೂರು, ಐರಾಣಿ, ಕಮಡೊಳ್ಳಿ ಹಾಗೂ ಉತ್ತರ ಕರ್ನಾಟಕದ ಹಲವೆಡೆ ನಡೆಯುತ್ತಿದ್ದು, 5 ಹಾಡು ಹಾಗೂ 8 ವಚನಗಳನ್ನೊಳಗೊಂಡಿದೆ. ಇದಕ್ಕೆ ಜಿಮ್ಮಿರಾಜ ಸಂಗೀತ ಒದಗಿಸುತ್ತಿದ್ದಾರೆ. ಕಮಡೊಳ್ಳಿ ಗ್ರಾಮದ ಸಿದ್ಧನಗೌಡ ಪಾಟೀಲ, ಬಸವನಗೌಡ ಪಾಟೀಲ ಹಾಗೂ ಗ್ರಾಮದ ಜನತೆ ಚಿತ್ರೀಕರಣಕ್ಕೆ ಸಂಪೂರ್ಣ ಸಹಕರಿಸುತ್ತಿದ್ದಾರೆ ಎಂದರು. ಹರಳಯ್ಯನ ಪಾತ್ರಧಾರಿ ಶ್ರೀಧರ ಮಾತನಾಡಿ, ಧಾರ್ಮಿಕ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಲು ನನಗೆ ತುಂಬಾ ಇಷ್ಟ. ನಾನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳು ಸೇರಿ ಒಟ್ಟು 65 ಪೌರಾಣಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಶಬರಿಮಲೈ ಅಯ್ಯಪ್ಪ ಮೊದಲ ಚಿತ್ರ. ಪೌರಾಣಿಕ ಚಿತ್ರಗಳು ಹಲವು ವರ್ಷಗಳವರೆಗೆ ಸ್ಮೃತಿ ಪಟಲದಲ್ಲಿರುತ್ತವೆ.  ಸಾಮಾಜಿಕ ಚಿತ್ರಗಳೂ ಚಿತ್ರೀಕರಣ ವೇಳೆ ಮನದಲ್ಲಿರುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.