ಧಾರವಾಡ

ಹು-ಡಾ ಅಧ್ಯಕ್ಷ ಪಟ್ಟಕ್ಕೆ ಲಾಬಿ ಶುರು

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 30
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಮುಖಂಡರ ತೆರೆಮರೆಯ ಲಾಬಿ ತೀವ್ರಗೊಂಡಿದೆ.  
ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಕೋ.ಆಪ್ ಬ್ಯಾಂಕ್‌ಗಳಿಗೆ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನು ನೇಮಿಸುವುದು ಬಹುತೇಕ ಖಚಿತ. ಹೀಗಾಗಿ ಆಕಾಂಕ್ಷಿಗಳು ತಮಗಾಪ್ತರಾಗಿರುವ ಸಚಿವರು ಹಾಗೂ ಮುಖಂಡರ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅವಳಿ ನಗರದ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಆಕಾಂಕ್ಷಿಗಳಲ್ಲಿ ಹುಬ್ಬಳ್ಳಿಯವರೇ ಹೆಚ್ಚಾಗಿದ್ದರೂ ಈ ಬಾರಿ ಧಾರವಾಡದವರಿಗೇ ಅವಕಾಶ ನೀಡಬೇಕೆಂಬ ಕೂಗು ಧಾರವಾಡದ ಮುಖಂಡರಿಂದ ಕೇಳಿಬರುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಎರಡು ದಶಕಗಳಿಂದ ಧಾರವಾಡದವರಿಗೆ ಹುಡಾ ಅಧ್ಯಕ್ಷಗಿರಿ ದೊರೆಯಲಾರದ್ದೂ ಇದಕ್ಕೆ ಕಾರಣ. 1992ರಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಎಸ್.ಆರ್. ಮೋರೆ ಜಿಲ್ಲೆಯ ಸಚಿವರಾಗಿದ್ದಾಗ ಸೂರಪಾಲಿ ಎಂಬುವವರು ಹುಡಾ ಅಧ್ಯಕ್ಷರಾಗಿದ್ದರು. ನಂತರದ ಯಾವುದೇ ಕಾಂಗ್ರೆಸ್ ಸರ್ಕಾರದಲ್ಲಿ ಧಾರವಾಡದವರಿಗೆ ಹುಡಾ ಅಧ್ಯಕ್ಷಗಿರಿ ದೊರಕಿಲ್ಲ.
ಸದ್ಯ ಹುಬ್ಬಳ್ಳಿಯ ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಪ್ರದೇಶ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಸತೀಶ ಮೆಹರವಾಡೆ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಮಾಜಿ ಮೇಯರ್ ದಾನಪ್ಪ ಕಬ್ಬೇರ, ಅನ್ವರ್ ಮುಧೋಳ, ಧಾರವಾಡದ ಬುರಾನ ಗವಳಿ, ಮಹೇಶ ಶೆಟ್ಟಿ, ಮನೋಹರ ಮೋರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಹೆಸರು ಹುಡಾ ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳಾ ಕಾಂಗ್ರೆಸ್ ಮುಖಂಡರಾದ ಜಿ. ದೇವಕಿ ಅವರ ಹೆಸರೂ ಮುಂಚೂಣಿಯಲ್ಲಿರುವುದು ವಿಶೇಷ.
ಒಂದೇ ಹುದ್ದೆ: ಒಬ್ಬರಿಗೆ ಒಂದೇ ಹುದ್ದೆಯೆಂಬ ನಿಯಮ ಕಾಂಗ್ರೆಸ್‌ನಲ್ಲಿ ಇರುವುದರಿಂದ ರಾಜಶೇಖರ ಮೆಣಸಿನಕಾಯಿ ಅಥವಾ ದೀಪಕ್ ಚಿಂಚೋರೆ ಅವರಿಗೆ ಹುಡಾ ಅಧ್ಯಕ್ಷರಿ ಗಾದಿ ಒಲಿದಲ್ಲಿ ಇಬ್ಬರೂ ಕ್ರಮವಾಗಿ ಎಪಿಎಂಸಿ ಹಾಗೂ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲೇಬೇಕು. ದೀಪಕ್ ಚಿಂಚೋರೆ ಮೇಯರ್ ಆದಲ್ಲಿ ಕೇವಲ ಒಂದು ವರ್ಷ ಅಧಿಕಾರ ಅನುಭವಿಸಬಹುದು. ಆದರೆ ಹುಡಾ ಅಧ್ಯಕ್ಷ ಸ್ಥಾನ ಒಲಿದಲ್ಲಿ ಮೂರು ವರ್ಷ ಅಧ್ಯಕ್ಷ ಗಾದಿ ಖಚಿತ. ಹೀಗಾಗಿ ಇವರೂ ಹುಡಾ ಅಧ್ಯಕ್ಷ ಹುದ್ದೆಗಾಗಿ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ.
ಈ ಮಧ್ಯೆ ವಿಧಾನಸಭೆ ಚುನಾವಣೆ ಮುಂಚೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ ಹಾಗೂ ಸರ್ವೋದಯ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದ ಮಾಜಿ ಮೇಯರ್ ದಾನಪ್ಪ ಕಬ್ಬೇರ ಅವರಿಗೆ ಹುಡಾ ಅಧ್ಯಕ್ಷ ಹುದ್ದೆ ಲಭಿಸುವ ಸಾಧ್ಯತೆಗಳು ಕಡಿಮೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ಗೆ ಮರಳಿದವರಿಗೆ ಯಾವುದೇ ಹುದ್ದೆ ನೀಡದಂತೆ ಇತ್ತೀಚೆಗೆ ಧಾರವಾಡದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಸದಸ್ಯತ್ವಕ್ಕೂ ಲಾಬಿ: ಅಧ್ಯಕ್ಷ ಸ್ಥಾನದ ಜತೆಗೆ ಹುಡಾ ಸದಸ್ಯತ್ವಕ್ಕಾಗಿಯೂ ಲಾಭಿ ತೀವ್ರಗೊಂಡಿದೆ. ಒಟ್ಟು 5 ಸದಸ್ಯ ಸ್ಥಾನಗಳಲ್ಲಿ ಒಂದು ಸ್ಥಾನ ಮಹಿಳೆಯರಿಗೆ ಹಾಗೂ ಮತ್ತೊಂದು ಸ್ಥಾನ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ನೀಡುವುದು ಕಡ್ಡಾಯ. ಇನ್ನಿತರ ಮೂರು ಸ್ಥಾನಗಳನ್ನು ಹಿಂದುಳಿದ, ಸಾಮಾನ್ಯ ಸದಸ್ಯರಿಗೆ ಹಂಚುವುದರಿಂದ ಈ ಹುದ್ದೆಗಳಿಗೂ ಈಗಿನಿಂದಲೇ ಲಾಬಿ ಪ್ರಾರಂಭಗೊಂಡಿದೆ.

ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.