ಕೆಜೆಪಿಗೆ ಬಹುಮತ ನಿಶ್ಚಿತ: ಯಡಿಯೂರಪ್ಪ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 2
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಜೆಪಿ ಬಹುಮತ ಸಾಧಿಸುವುದು ನಿಶ್ಚಿತ. ಗೆಲುವಿನ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ತಾವು ಖುದ್ದಾಗಿ ಆಗಮಿಸುತ್ತೇವೆ ಎಂದು ಮಾಜಿ ಸಿಎಂ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕೆಜೆಪಿ ಅಭ್ಯರ್ಥಿಗಳ ಪರವಾಗಿ ಶನಿವಾರ ನಗರದ ವಿವಿಧಡೆ ತೆರೆದ ಜೀಪ್ನಲ್ಲಿ ಪ್ರಚಾರ ನಡೆಸಿದ ಅವರು ಸಂಜೆ ಮೂರುಸಾವಿರ ಮಠದ ಆವರಣದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಅವಳಿನಗರದ ಅಭಿವೃದ್ಧಿಗೆ ನೀಡಿದ ಕೊಡುಗೆಗೆಳ ಬಗ್ಗೆ ಮತದಾರರ ಮನೆ-ಮನೆಗೆ ತೆರಳಿ ತಿಳಿಹೇಳುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ಶೇ. 80ರಷ್ಟು ಮತದಾನ ನಡೆಯುವಂತೆ ನೋಡಿಕೊಂಡಲ್ಲಿ ಕೆಜೆಪಿ ಬಹುಮತ ಗಳಿಸುವುದು ನಿಸ್ಸಂಶಯ. ಜನತೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರು ಪ್ರೇರೇಪಿಸಬೇಕೆಂದರು.
ಮಹಾನಗರವನ್ನು ಮಾದರಿ ನಗರವನ್ನಾಗಿಸುವ ಕೆಜೆಪಿ ಕನಸನ್ನು ಸಾಕಾರಗೊಳಿಸಲು ತಮ್ಮೊಂದಿಗೆ ಕೈಜೋಡಿಸಬೇಕೆಂದೂ ಬಿಎಸ್ವೈ ವಿನಂತಿಸಿಕೊಂಡರು. ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥ ತಾವು ಇನ್ನೂ ಅನೇಕ ಕಡೆಗಳಲ್ಲಿ ಪ್ರವಾಸ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಸುವರ್ಣ ಅವಕಾಶ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದ ತಮಗೆ ಆ ಪಕ್ಷದ ನಾಯಕರು ಕುತಂತ್ರದಿಂದ ಬೆನ್ನಿಗೆ ಚೂರಿ ಹಾಕಿದ್ದಾರೆ. ಅಂಥವರಿಗೆ ತಕ್ಕ ಪಾಠ ಕಲಿಸುವ ಸುವರ್ಣ ಅವಕಾಶ ಮತದಾರರಿಗೆ ಮತ್ತೆ ಸಿಕ್ಕಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯಬೇಕೆಂದರು.
ಪ್ರಚಾರ ಕಾರ್ಯ: ಇದಕ್ಕೊ ಮೊದಲು ವಿಜಯನಗರದಿಂದ ತೆರೆದ ವಾಹನದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿದ ಬಿಎಸ್ವೈ, ಬೆಂಗೇರಿ, ಕೇಶ್ವಾಪುರ, ಸ್ಟೇಶನ್ ರಸ್ತೆ, ಶೆಟ್ಟರ್ ಓಣಿ, ಬಂಡಿವಾಡಬೇಸ್, ಷಾ ಬಝಾರ್, ಮಂಗಳವಾರ ಪೇಟ, ಘಂಟಿಕೇರಿ, ಅಗಸರ ಓಣಿ, ದುರ್ಗದಬೈಲ್, ದಾಜಿಬಾನಪೇಟ, ಅಂಚಟಗೇರಿ ಓಣಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಬಿಎಸ್ವೈ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.
ಮಾಜಿ ಸಚಿವ ಸಿ.ಎಂ. ಉದಾಸಿ, ಜಬ್ಬಾರಖಾನ್ ಹೊನ್ನಳ್ಳಿ, ಅಶೋಕ ಕಾಟವೆ, ಶಂಕ್ರಪ್ಪ ಬಿಜವಾಡ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಬೀಳಗಿ, ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ರಾಜಶ್ರೀ ಜಡಿ, ಜಯರಾಮ ಪವಾರ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

