ಧಾರವಾಡ

ಮಹಿಳೆಯರ ಸುರಕ್ಷತೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

Published On :

ಹುಬ್ಬಳ್ಳಿ: ಮಹಿಳೆಯರ ಸಬಲೀಕರಣ ಹಾಗೂ ಸುರಕ್ಷತೆಗೆ ಆಗ್ರಹಿಸಿ ಮಹಿಳಾ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಘಟಕದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಜೆ.ಸಿ. ನಗರದ ಜೆಜಿಸಿಸಿ ಕಾಲೇಜ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ತಲುಪಿತು.
ಈ ಸಂದರ್ಭ ಮಾತನಾಡಿದ ಅನೇಕರು, ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಹಾಗೂ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು. ಸದ್ಯ ಜಾರಿಯಲ್ಲಿರುವ ಕಾನೂನುಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಆರು ತಿಂಗಳ ಮಗುವಿನಿಂದ ಹಿಡಿದು ವಯೋವೃದ್ಧ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು ನಿಜಕ್ಕೂ ಖೇದಕರ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಬಂಧಿಸಲ್ಪಟ್ಟ ಸಂದರ್ಭದಲ್ಲಿ ನ್ಯಾಯಾಲಯಗಳು ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ತ್ವರಿತಗತಿಯ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರು ನಿರ್ಭೀತಿಯಿಂದ ಬದುಕು ಸಾಗಿಸುವಂತೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಮನವಿಯನ್ನು ಸರ್ಕಾರಕ್ಕೆ ಅರ್ಪಿಸಲಾಯಿತು.
ಪ್ರೊ. ಮೀನಾಕ್ಷಿ ಶೆಂಕನೂರ, ಪ್ರೊ. ಶೆಟ್ಟರ್, ಪ್ರೊ. ಮಧುಮತಿ, ಪೃಥ್ವಿಕುಮಾರ, ರವಿಕುಮಾರ, ಪ್ರವೀಣ, ಸುಜಿತ್, ಭಾಗ್ಯಶ್ರೀ, ಪ್ರಭಾವತಿ, ಅರ್ಪೂವಾ ಪಾಟೀಲ, ಶ್ವೇತಾ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಮರು ಆಕ್ರಮಣಕ್ಕೆ ಸಜ್ಜಾಗಬೇಕಿದೆ ಮಹಿಳೆ: ಡಾ. ಪ್ರಜ್ಞಾ
ಧಾರವಾಡ:
ಸ್ತ್ರೀ ಸಮಾನತೆ, ಸ್ವಾತಂತ್ರ್ಯ ಸಬಲೀಕರಣದಂತಹ ಸಂಗತಿಗಳು ಹೂವು ಅರಳುವ ಕ್ರಿಯೆಯಂತಾಗಬೇಕು. ಒತ್ತಾಯಪೂರ್ವಕವಾಗಿ ಹೇರಲ್ಪಡುವ ಯೋಜನೆಗಳಿಂದ ಅನಿವಾರ್ಯವಾಗಿ ಪಾಲಿಸಬೇಕಾದ ವಿಧಾನಗಳಿಂದ ಸ್ತ್ರೀ ಸಮಾನತೆಯ ಆಶಯಗಳು ಪೂರ್ಣ ಪ್ರಮಾಣದಲ್ಲಿ ಈಡೇರಲು ಸಾಧ್ಯವಿಲ್ಲ ಎಂದು ಹಿರಿಯ ಲೇಖಕಿ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ದಿ. ಲೀಲಾವತಿ ನಾಗಮ್ಮನವರ ದತ್ತಿ ಅಂಗವಾಗಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವರ್ತಮಾನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ತ್ರೀ ಪರ ಚಿಂತನೆಗಳಿಗೆ ಒಂದು ಚೌಕಟ್ಟಿದೆ. ಈ ಚೌಕಟ್ಟಿನಾಚೆಗೆ ಮಹಿಳೆಯ ಪರವಾದ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಮಹಿಳೆಯ ಮೇಲಿನ ದೌರ್ಜನ್ಯಗಳ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಮಹಿಳೆ ರಕ್ಷಣಾತ್ಮಕ ಆಶ್ರಯ ತಾಣಗಳಿಗೆ ಮೊರೆ ಹೋಗುತ್ತಿದ್ದಾಳೆ. ಈ ಪಲಾಯನವಾದಿತ್ವವೇ ಆಕ್ರಮಣವನ್ನು ಉತ್ತೇಜಿಸುತ್ತಿವೆ. ಮಹಿಳೆ ಮರು ಆಕ್ರಮಣಕ್ಕೆ ಸಜ್ಜಾಗಬೇಕಾದ ಸಮಯವಾಗಿದೆ ಎಂದರು.
ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಮಹಿಳೆಗೆ ಸಮಾನತೆ ಎನ್ನುವುದು ತಾನೇ ಪಡೆದುಕೊಳ್ಳುವ ಸಾಮಾಜಿಕ ಮೌಲ್ಯ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಪಾರ್ವತಿ ವಸ್ತ್ರದ ಮಾತನಾಡಿದರು. ಶಾಂತಲಾ ಹಿರೇಮಠ ದತ್ತಿ ಅಂಗವಾಗಿ ಗ್ರಂಥಾಲಯಕ್ಕೆ ಖರೀದಿಸಿದ ಪುಸ್ತಕಗಳನ್ನು ಉ-ಕ ಲೇಖಕಿಯರ ಸಂಘದ ಸಹಕಾರ್ಯದರ್ಶಿ ಸುಜಾತಾ ಹಡಗಲಿ ಬಿಡುಗಡೆ ಮಾಡಿದರು. ದತ್ತಿದಾನಿ ಮೋಹನಾಗಮ್ಮನವರ, ಗಾಯಕ ಬಸಲಿಂಗಯ್ಯ ಹಿರೇಮಠ, ಡಾ. ಪ್ರಭಾಕರ ಲಗಮಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.