ರಾಜ್ಯದಲ್ಲಿ ಹೆಚ್ಚುತ್ತಿರುವ ಎಚ್ಐವಿ ಸೋಂಕು: ಕಳವಳ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ದೇಶದಲ್ಲಿ ಎಚ್ಐವಿ ಸೋಂಕು ಹರಡಿರುವ 6 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದಲ್ಲಿ ಈ ಸೋಂಕು ತಗುಲಿರುವವರಲ್ಲಿ ಶೇ. 31ರಷ್ಟು 15ರಿಂದ 25ರ ವಯೋವಾನದವರು ಎನ್ನುವುದು ಕಳವಳಕಾರಿ ಸಂಗತಿ ಎಂದು ಕೆಸಾಪ್ಸ್ ಜಂಟಿ ನಿರ್ದೇಶಕಿ ಡಾ. ಲೀಲಾ ಸಂಪಿಗೆ ಹೇಳಿದರು.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ 30 ಜಿಲ್ಲೆಗಳಲ್ಲಿ ಎಚ್ಐವಿ ಸೋಂಕು ವೇಗವಾಗಿ ಹರಡುತ್ತಿದ್ದು, ದೇಶದ 158 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ರಾಜ್ಯದೆಂದು ಗುರುತಿಸಲಾಗಿದೆ. ಅಂಥ ಜಿಲ್ಲೆಗಳ ಪೈಕಿ ಧಾರವಾಡ ಜಿಲ್ಲೆ ಕೂಡಾ ಒಂದು ಎಂದು ಹೇಳಿದರು.
ಈ ಸೋಂಕಿನ ಕುರಿತು ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವುದೊಂದೆ ದಾರಿ. ಸೋಂಕು ತಗುಲಿದರೂ ಅದಕ್ಕೆ ಚಿಕಿತ್ಸೆ ಇದೆ ಎನ್ನುವ ಅರಿವು ಮೂಡಿಸುವುದು ಅಗತ್ಯ. ಈ ಪ್ರಕ್ರಿಯೆ ಒಂದು ಜನಾಂದೋಲನದ ರೀತಿಯಲ್ಲಿ ಪರಿವರ್ತನೆಯಾಗಬೇಕಿದೆ. ಪ್ರಸ್ತುತ ಈ ಸೋಂಕಿನ ಕುರಿತು ಮುಕ್ತವಾಗಿ ಮಾತನಾಡುವ ಸ್ಥಿತಿ ಇಲ್ಲ. ಅದಕ್ಕೆ ಹಲವು ಕಾರಣಗಳಿವೆ. ಇದನ್ನು ಹೋಗಲಾಡಿಸುವುದು ಒಂದು ಸವಾಲು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪ್ಸಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಸುಮಾರು 9,158 ಎಂದು ಅಂದಾಜಿಸಲಾಗಿದೆ. ಎಆರ್ಟಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವರು ಸುಮಾರು 9,911 ಜನ. ಈ ಪೈಕಿ 569 ಮಕ್ಕಳಿದ್ದಾರೆ. ಅಲ್ಲದೇ ಈ ಸಂಖ್ಯೆಗೆ ಪ್ರತಿ ತಿಂಗಳು ಸರಾಸರಿ 150 ಜನ ಹೊಸದಾಗಿ ಎಆರ್ಟಿ ಕೇಂದ್ರಕ್ಕೆ ನೋಂದಣಿಯಾಗುತ್ತಿದ್ದಾರೆ ಎಂದರು.
ಧಾರವಾಡ ತಾಲೂಕಿನಲ್ಲಿ ಸುಮಾರು 1,902 ಜನ ಎಆರ್ಟಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಸುಮಾರು 115 ಮಕ್ಕಳಿದ್ದಾರೆ. ಹುಬ್ಬಳ್ಳಿ ತಾಲೂಕಿನಲ್ಲಿ ಸುಮಾರು 2,054 ಜನ, ಆ ಪೈಕಿ 146 ಮಕ್ಕಳಿರುವುದು ಆತಂಕದ ವಿಷಯ. ಹೆಚ್ಚುತ್ತಿರುವ ಈ ಪಿಡುಗಿನ ಕುರಿತು ಜನಸಮುದಾಯಕ್ಕೆ ಸರಿಯಾದ ಮಾಹಿತಿ ನೀಡಿ, ಸೋಂಕನ್ನು ನಿಯಂತ್ರಿಸಬೇಕಿರುವುದು ತುರ್ತು ಅಗತ್ಯ ಈ ಕುರಿತು ಸರಿಯಾದ ಮಾಹಿತಿ ಹಾಗೂ ಈ ಕ್ಷೇತ್ರದಲ್ಲಿ ದೊರೆಯುತ್ತಿರುವ ಸೇವೆಗಳ ಬಗ್ಗೆ ಜನರಿಗೆ ತಿಳುವಳಿಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಂದು ವಾರ ಸಮಗ್ರ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮಾ. 18ರಿಂದ ಆರಂಭವಾಗುವ ಎಚ್ಐವಿ ಅಭಿಯಾನ 25ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಮನೆ, ಮನೆಗೆ ಭೇಟಿ ನೀಡಿ ಸೋಂಕು, ಲಭ್ಯವಿರುವ ಚಿಕಿತ್ಸೆ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡುತ್ತಾರೆ. ಈ ಅವಧಿಯಲ್ಲಿ 2.60 ಲಕ್ಷ ಮನೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 650 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡ ಒಂದು ದಿನಕ್ಕೆ 50 ಮನೆಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಮಾ. 17ರಂದು ಸಂಜೆ 5.30ಕ್ಕೆ ಇಲ್ಲಿನ ರಾಯಾಪುರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, 18ರಂದು ಬೆಳಗ್ಗೆ ಚಿತ್ರನಟ ಗಣೇಶ ಜಾಥಾಕ್ಕೆ ಚಾಲನೆ ನೀಡುತ್ತಾರೆ. ಅಲ್ಲದೇ ನಗರದ ಗಾಂಧಿಚೌಕ್ನಲ್ಲಿ 10 ಮನೆಗಳಿಗೆ ಸ್ವತಃ ಚಿತ್ರನಟ ಗಣೇಶ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎನ್.ಎಂ. ಅಂಗಡಿ, ಶಶಿಧರನ್. ಕೆ, ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

