ಆರೋಗ್ಯ ಇಲಾಖೆಗೆ ರು. 5,267 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 17
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ನಗರದಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ, ಇನ್ನು ಕೆಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಆರಂಭದಲ್ಲಿ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ನೂತನ ಪ್ರಾದೇಶಿಕ ಔಷಧ ಪ್ರಯೋಗಾಲಯದ ಕಟ್ಟಡ ಉದ್ಘಾಟನೆ, ಸರ್ಕಾರಿ ವೈದ್ಯಕೀಯ ಸೌಲಭ್ಯ ಕೇಂದ್ರಗಳ ವ್ಯಾಪ್ತಿ ಹೊರಗಿರುವ ಜನರಿಗೆ ತಕ್ಷಣ ಆರೋಗ್ಯ ಸಲಹೆ ಹಾಗೂ ಸಮಾಲೋಚನೆ ಸೌಲಭ್ಯಗಳ 104 ದೂರವಾಣಿ ಸಂಖ್ಯೆಯ (108ರ ಮಾದರಿಯ) ಆರೋಗ್ಯ ಮಾಹಿತಿ ಸಹಾಯವಾಣಿ, ಎಚ್ಐವಿ ನಿಯಂತ್ರಣದ ಸಮಗ್ರ ಜನ ಜಾಗೃತಿಯ ಅಭಿಯಾನ ಅಲ್ಲದೇ ಐದು ವರ್ಷದೊಳಗಿನ ಮಕ್ಕಳಿಗೆ ಐದು ಮಾರಕ ರೋಗಗಳಿಂದ ರಕ್ಷಣೆ ನೀಡುವ ಪೆಂಟಾವ್ಯಾಲೆಂಟ್ ಲಸಿಕೆಯನ್ನು ಉಚಿತವಾಗಿ ಒದಗಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಆರೋಗ್ಯ ಇಲಾಖೆಗೆ ಅನುದಾನ: ರಾಯಾಪುರದ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಗೆ ರು. 5,267 ಕೋಟಿ ಅನುದಾನ ನೀಡಿದ್ದು, ರಾಜ್ಯದ ಜನತೆ ಆರೋಗ್ಯ ಸುಧಾರಣೆಗೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಜನರು ಎಚ್ಐವಿ ಸೊಂಕಿಗೆ ಒಳಗಾಗಿದ್ದು, ಇದರ ನಿಯಂತ್ರಣಕ್ಕೆ ವಿಶೇಷ ಅಭಿಯಾನವನ್ನೇ ಆರಂಭಿಸಲಾಗಿದೆ ಎಂದರು.
ಗಂಟಲು ಮಾರಿ, ಧನುರ್ವಾಯು, ನಾಯಿ ಕೆಮ್ಮು, ಯಕೃತ್ತಿನ ಉರಿ ಹಾಗೂ ನ್ಯೂಮೋನಿಯಾ ನಿಯಂತ್ರಿಸಲು ಒಂದೇ ಲಸಿಕೆಯಾದ ಪೆಂಟಾವ್ಯಾಲೆಂಟ್ನ್ನು ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿದೆ. ಒಂದು ವರ್ಷದೊಳಗಿನ 11.21 ಲಕ್ಷ ಮಕ್ಕಳಿಗೆ ಈ ಮೂಲಕ ಐದು ರೋಗಗಳಿಗೆ ಸುರಕ್ಷತೆ ನೀಡಲಾಗುತ್ತಿದೆ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ನಕಲಿ ಔಷಧಿಗಳ ಮಾರಾಟದಿಂದ ಜನತೆ ಆರೋಗ್ಯ ಹದಗೆಡುತ್ತದೆ. ವೈದ್ಯರು ಶಿಫಾರಸು ಮಾಡದ ಔಷಧಗಳ ಬಳಕೆ ಎಲ್ಲೆಡೆ ಬಳಕೆಯಲ್ಲಿದೆ. ಅಲ್ಲದೇ, ಈ ಔಷಧಗಳು ರೋಗ ನಿರೋಧಕ ಶಕ್ತಿ ನೀಡುತ್ತಿಲ್ಲ. ಆದ್ದರಿಂದ ಎಲ್ಲ ಔಷಧಿಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ನಂತರ ಮಾರುಕಟ್ಟೆ ಬಿಡುಗಡೆ ಮಾಡುವ ದೃಷ್ಟಿಯಲ್ಲಿ ಇಲ್ಲಿ ನೂತನ ಪ್ರಯೋಗಾಲಯ ಆರಂಭವಾಗಿದೆ ಎಂದರು.
ಸಿಂಥೆಟಿಕ್ ಟ್ರ್ಯಾಕ್: ಇನ್ನು, ಇಲ್ಲಿನ ಆರ್ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ರು. 3.3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಗೆ ಚಾಲನೆ ನೀಡಿ, ಬಿಜೆಪಿ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಒದಗಿಸಲು ಪ್ರಯತ್ನಿಸಿದೆ. ಬಹುವರ್ಷಗಳ ಬೇಡಿಕೆಯಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣದ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಒದಗಿಸುವ ಪ್ರಯತ್ನವಾಗಿದೆ ಎಂದರು.
ತದನಂತರ ಚರಂತಿಮಠ ಗಾರ್ಡ್ನ್ನಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಶೆಟ್ಟರ್ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಅಂದಾಜು ರು. 20 ಕೋಟಿ ವೆಚ್ಚದ ನವಲೂರು-ಸೋಮಾಪೂರ ಹಾಗೂ ಗೊಂಗಡಿಕೊಪ್ಪ-ಹೆಬಸೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಚಂದ್ರಕಾಂತ ಬೆಲ್ಲದ ಇದ್ದರು.
ನಗು-ಮಗು ನೂತನ ಕಾರ್ಯಕ್ರಮ
ಸಾಮಾನ್ಯವಾಗಿ ಇಷ್ಟು ದಿನ ಗರ್ಭೀಣಿಯರನ್ನು 108 ಅಥವಾ ಸರ್ಕಾರಿ ಅಂಬ್ಯೂಲೆನ್ಸ್ಗಳ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿತ್ತು. ಆದರೆ, ಹೆರಿಗೆಯಾದ ನಂತರ ಮರಳಿ ಮನೆಗೆ ಬಿಡುತ್ತಿರಲಿಲ್ಲ. ಪ್ರಸ್ತುತ ಆರೋಗ್ಯ ಇಲಾಖೆ ನಗು-ಮಗು ಎಂಬ ನೂತನ ಕಾರ್ಯಕ್ರಮ ಆರಂಭಿಸುತ್ತಿದ್ದು, ಹೆರಿಗೆಯಾದ ಮಹಿಳೆಗೆ ಹಾಗೂ ಮಗುವಿಗೆ ಸೊಂಕು ತಡೆಯುವಂತೆ ಹೆರಿಗೆಯಾದ ನಂತರ ಸರ್ಕಾರದ ವಾಹನದಲ್ಲಿಯೇ ಇಬ್ಬರನ್ನು ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ 200 ಹೂಸ ವಾಹನಗಳನ್ನು ತರಿಸಲಾಗುತ್ತಿದೆ.
- ಅರವಿಂದ ಲಿಂಬಾವಳಿ, ಆರೋಗ್ಯ ಮತ್ತು ಕುಟಂಬ ಇಲಾಖೆ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

