ಹರ್ಷಾ ಕಾಂಪ್ಲೆಕ್ಸ್ನಲ್ಲಿ ಬಾಂಬ್...!
ಹುಬ್ಬಳ್ಳಿ: ಸ್ಟೇಶನ್ ರಸ್ತೆಯಲ್ಲಿರುವ ಹರ್ಷಾ ವಾಣಿಜ್ಯ ಮಳಿಗೆಯಲ್ಲಿ ಬಾಂಬ್ ಹುದಗಿಡಿಸಲಾಗಿದೆ...!
ಇಂಥದೊಂದು ಅನಾಮಧೇಯ ಕರೆ ಪೊಲೀಸ್ ಕಂಟ್ರೋಲ್ ರೂಮ್ಗೆ ಬಂದಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದೇ ತಡ ಮಂಗಳವಾರ ಸಂಜೆಯಿಂದ ರಾತ್ರಿವರೆಗೂ ಸ್ಟೇಶನ್ ರಸ್ತೆ, ಮರಾಠಾಗಲ್ಲಿ, ದುರ್ಗದಬೈಲ್, ಶಾ ಬಝಾರ್ಗಳಲ್ಲಿ ಗೊಂದಲದ ವಾತಾವರಣ ಉಂಟಾಗಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪ್ರಾಣಭೀತಿಯಲ್ಲಿ ಅತ್ತಿಂದಿತ್ತ ಓಡಾಡಿದರು.
ಪೊಲೀಸ್ ಕಂಟ್ರೋಲ್ ರೂಮ್ಗೆ ಬಂದ ಮಾಹಿತಿಯನ್ನು ದೃಢಪಡಿಸಿಕೊಳ್ಳಲು ತಕ್ಷಣ ಕಾರ್ಯತತ್ಪರರಾದ ಡಿಸಿಪಿ ಶ್ರೀನಾಥ ಜೋಶಿ, ಎಸಿಪಿ ಎಂ.ಜಿ. ದೇಸೂರ, ಎ.ಆರ್. ಬಡಿಗೇರ್, ಶಹರ ಠಾಣೆ ಇನ್ಸ್ಪೆಕ್ಟರ್ ಎಸ್.ಎಂ. ಸಂದಿಗವಾಡ ಹಾಗೂ ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ, ಇಡೀ ವಾಣಿಜ್ಯ ಸಂಕೀರ್ಣವನ್ನು ತಮ್ಮ ಸುರ್ಪದಿಯಲ್ಲಿ ತೆಗೆದುಕೊಂಡರು. ನೆಲ ಮಹಡಿ ಸೇರಿದಂತೆ ನಾಲ್ಕು ಮಹಡಿಗಳಲ್ಲಿನ ಪ್ರತಿಯೊಂದು ಅಂಗಡಿಗಳಲ್ಲಿ ಇಂಚಿಂಚು ಜಾಲಾಡಿದ ಪೊಲೀಸರು, ಯಾವುದೇ ರೀತಿಯ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗದೆ ಇರುವುದನ್ನು ಖಚಿತಪಡಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಾಂಬ್ ಪತ್ತೆ ಮಾಡುವ ಪೊಲೀಸರ ಕಾರ್ಯಕ್ಕೆ ಸಹಕರಿಸಲು ತರಿಸಲಾಗಿದ್ದ ಶ್ವಾನಗಳು ಸಹ ಸುಮಾರು ನಾಲ್ಕೈದು ನೂರು ಅಂಗಡಿಗಳ ಒಳಹೊಕ್ಕು ಸ್ಫೋಟಕ ಸಾಮಗ್ರಿಗಾಗಿ ತೀವ್ರ ಶೋಧ ನಡೆಸಿದರು.
ಆತಂಕದಲ್ಲಿ ಜನತೆ: ಹರ್ಷಾ ವಾಣಿಜ್ಯ ಮಳಿಗೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆಯಿಂದ ಮಹಾನಗರದ ಜನತೆ ಬೇಸ್ತು ಬೀಳುವಂತಾಯಿತು. ಅತಿ ದೊಡ್ಡ ವಾಣಿಜ್ಯ ಸಂಕೀರ್ಣವಾಗಿದ್ದರಿಂದ ಯಾವೊಂದು ಮೂಲೆಯಲ್ಲಿ ಸ್ಫೋಟಕ ಹುದಗಿಸಿಟ್ಟಿರಬಹುದೇ ಎಂಬ ಸಂಶಯ ತನಿಖಾಧಿಕಾರಿಗಳಿಂದ ಹಿಡಿದು ಶ್ರೀಸಾಮಾನ್ಯರಿಗೂ ಕಾಡಿತು.
ಮಾಧ್ಯಮಗಳಿಗೆ ಈ ವಿಷಯ ತಿಳಿಯುತ್ತಿದಂತೆಯೇ ಘಟನೆಯ ಸತ್ಯಾಸತ್ಯತೆ ತಿಳಿಯಲು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿದಾಗ, ವಾಣಿಜ್ಯ ಕಟ್ಟಡದ ನೆಲ ಮಹಡಿ ಹಾಗೂ ಒಂದನೇ ಮಹಡಿಯಲ್ಲಿನ ಪ್ರತಿಯೊಂದು ಅಂಗಡಿಗಳನ್ನು ಜಾಲಾಡಲಾಗಿದ್ದು ಯಾವುದೇ ರೀತಿಯ ಸ್ಫೋಟಕ ಸಾಮಗ್ರಿ ಪತ್ತೆಯಾಗಿಲ್ಲ. ಇನ್ನುಳಿದ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ ನಂತರವಷ್ಟೇ ಈ ಕುರಿತಂತೆ ಪ್ರತಿಕ್ರಿಯಿಸಲು ಸಾಧ್ಯ ಎಂದು ಉತ್ತರಿಸಿದರು.
ಜನಜಂಗುಳಿ: ಹರ್ಷಾ ವಾಣಿಜ್ಯ ಮಳಿಗೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಖಚಿತಪಡಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ಕಾರ್ಯತತ್ಪರರಾಗಿದ್ದ ಸಂದರ್ಭ ಸಾರ್ವಜನಿಕರು ಆತಂಕ ಹಾಗೂ ಕುತೂಹಲದಿಂದ ವಾಣಿಜ್ಯ ಕಟ್ಟಡ ಸುತ್ತಮುತ್ತಲು ಸೇರಿದ್ದರು.
ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಮಧ್ಯೆಯೂ ಅನೇಕ ರೀತಿಯ ಗಾಳಿ ಸುದ್ದಿಗಳು ಹರಡಿದ ಪರಿಣಾಮ ಜನತೆ ಮತ್ತಷ್ಟು ಗಲಿಬಿಲಿಗೆ ಒಳಗಾದರು. ಎರಡನೇ ಮಹಡಿಯ ಅಂಗಡಿಯೊಂದರಲ್ಲಿ ಸ್ಫೋಟಕ ಕಚ್ಚಾ ಸಾಮಗ್ರಿಗಳು ಪತ್ತೆಯಾಗಿವೆಯಂತೆ ಎಂಬಂಥ ವದಂತಿಗಳಿಗೆ ಕಮ್ಮಿ ಇರಲಿಲ್ಲ.
ಅಂಗಡಿ-ಮುಂಗಟ್ಟು ಬಂದ್: ವಾಣಿಜ್ಯ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ತಿಳಿದಿದ್ದೇ ತಡ ಅಲ್ಲಿನ ವ್ಯಾಪಾರಿಗಳು ಅಂಗಡಿ-ಮುಂಗಟ್ಟು ಬಂದ್ ಮಾಡಿದರು. ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದಾಗ ಕೆಲ ಅಂಗಡಿಗಳು ತೆರೆದುಕೊಂಡಿದ್ದವಾದರೂ ನಂತರ ಅವುಗಳ ಮಾಲೀಕರು ಬಂದ್ ಮಾಡಿ ಅಲ್ಲಿಂದ ಕಾಲ್ಕಿತ್ತಿದರು.
ಕಂಟ್ರೋಲ್ ರೂಮ್ಗೆ!: ಸಮಾಜ ಘಾತಕ ಶಕ್ತಿಗಳು ಸಮಾಜದಲ್ಲಿ ಅಶಾಂತಿ ಹಾಗೂ ಭಯಭೀತಿ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ವರೆಗೂ ವಿವಿಧ ಶಾಲಾ ಕಾಲೇಜ್ಗಳನ್ನು ಬಳಸಿಕೊಳ್ಳುತ್ತಿದ್ದರು ಎಂಬುದು ಗಮನಾರ್ಹ. ಆಯಾ ಶಾಲಾ-ಕಾಲೇಜ್ಗಳಿಗೆ ದೂರವಾಣಿ ಕರೆ ಮಾಡಿ ನಿಮ್ಮ ಶಾಲೆ ಅಥವಾ ಕಾಲೇಜ್ನಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಸುದ್ದಿ ಹರಿಬಿಟ್ಟು ಜನತೆಗೆ ಹಾಗೂ ಪೊಲೀಸ್ ಇಲಾಖೆಯ ಸಂಯಮವನ್ನು ಪರೀಕ್ಷೆಗೆ ಒಳಪಡಿಸುತ್ತ ಬಂದಿದ್ದಾರೆ. ಆದರೆ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸಮಾಜ ಘಾತಕರು ಪೊಲೀಸ್ ಕಂಟ್ರೋಲ್ ರೂಮ್ಗೆ ಹುಸಿ ಬಾಂಬ್ ಕರೆ ಮಾಡಿದ್ದನ್ನು ಇಲಾಖೆ ತೀರಾ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರಲಾರಂಭಿಸಿವೆ.
ಹರ್ಷಾ ಕಾಂಪ್ಲೆಕ್ಸ್ನಲ್ಲಿ ಯಾವುದೇ ರೀತಿಯ ಸ್ಫೋಟಕ ಪತ್ತೆಯಾಗಿಲ್ಲ ಎಂಬುದು ಸಂತಸದ ವಿಚಾರವಾದರೂ ಪೊಲೀಸ್ ಕಂಟ್ರೋಲ್ ರೂಮ್ಗೆ ಇಂತಹ ಕರೆ ಮಾಡಿ ಮಹಾನಗರದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಲು ಯತ್ನಿಸಿದ ಅನಾಮಧೇಯ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಸಮಾಜಘಾತಕರು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಸಮಾಜ ಸ್ವಾಸ್ಥ್ಯ ಹದಗೆಡಿಸಲು ಯತ್ನಿಸಿದರೆ ಅಚ್ಚರಿಪಡಬೇಕಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

