22ರಂದು ಕೃಷಿ ವಿವಿ 26ನೇ ಘಟಿಕೋತ್ಸವ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 19
ಕೃಷಿ ವಿವಿಯ 26ನೇ ಘಟಿಕೋತ್ಸವವನ್ನು ಮಾ. 22ರಂದು ಏರ್ಪಡಿಸಲಾಗಿದೆ ಎಂದು ವಿವಿಯ ಕುಲಪತಿ ಡಾ ಆರ್.ಆರ್. ಹಂಚಿನಾಳ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಪದವಿ ಹಾಗೂ ಇತರೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಹೈದರಾಬಾದಿನ ಅಂತಾರಾಷ್ಟ್ರೀಯ ಅರೆ-ಶುಷ್ಕ ವಲಯ ಬೆಳೆಗಳ ಸಂಶೋಧನಾ ಸಂಸ್ಥೆ ಮಹಾ ನಿರ್ದೇಶಕ ಡಾ ವಿಲಿಯಂ ಧರ್ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಭಾಗವಹಿಸುತ್ತಾರೆ ಎಂದರು.
ಕೇಂದ್ರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ನಿವೃತ್ತ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕರೂ ಆದ ಡಾ ಆರ್.ಎಸ್. ಪರೋಡಾ ಹಾಗೂ ಆಫ್ರಿಕಾ, ನೈರೋಬಿ ಮತ್ತು ಕೀನ್ಯಾದಲ್ಲಿ ಅರೆ-ಶುಷ್ಕ ವಲಯ ಬೆಳೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಕೃಷಿ ತಜ್ಞ ಡಾ ರಿಚರ್ಡ್ ಜೋನ್ಸ್ ಅವರಿಗೆ ಪ್ರಸಕ್ತ ವರ್ಷದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಈ ಬಾರಿ 42 ಪಿಎಚ್ಡಿ, 275 ಸ್ನಾತಕೋತ್ತರ ಹಾಗೂ 247 ಸ್ನಾತಕ ಸೇರಿ ಒಟ್ಟು 564 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ ಎಂದು ಡಾ ಹಂಚಿನಾಳ ಹೇಳಿದರು.
ಬಿಜಾಪುರ ಕೃಷಿ ಕಾಲೇಜಿನ ಅನಿಲ ಪಪ್ಪಾಚನ್ ಪ್ರಸಕ್ತ ವರ್ಷ 12 ಬಂಗಾರದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದು ಚಿನ್ನದ ಹುಡುಗ ಎನಿಸಿದ್ದಾರೆ. ನಾಲ್ಕು ವರ್ಷದ ಸ್ನಾತಕ ಬಿಎಸ್ಸಿ ಪದವಿಯಲ್ಲಿ 9.34 ಅಂಕ ಪಡೆದಿದ್ದಾರೆ.
ಧಾರವಾಡ ಕೃಷಿ ಕಾಲೇಜಿನ ಪ್ರಿಯಾಂಕಾ ಸ್ಥಾತಕ ಪದವಿಯಲ್ಲಿ ಹಾಗೂ ಕಿರಣಕುಮಾರ ಪಾಟೀಲ ಸ್ನಾತಕೋತ್ತರ ಪದವಿಯಲ್ಲಿ ತಲಾ ಆರು ಚಿನ್ನದ ಪದಕ ಪಡೆಯಲಿದ್ದಾರೆ. ಗ್ರಾಮೀಣ ಗೃಹ ವಿಜ್ಞಾನ ಕಾಲೇಜಿನ ರಂಜಿತಾ ಸ್ನಾತಕ ಪದವಿಯಲ್ಲಿ ಐದು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಸ್ವೀಕರಿಸಲಿದ್ದಾರೆ.
ಒಟ್ಟು 13 ಅಭ್ಯರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತಿದೆ ಎಂದರು.
ರಜತ ಮಹೋತ್ಸವ: ಅಂದು ಸಂಜೆ 4.30ಕ್ಕೆ ವಿವಿಯ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉದ್ಘಾಟಿಸುತ್ತಾರೆ. ಸಿಎಂ ಶೆಟ್ಟರ್ ಅತಿಥಿಗಳಾಗಿದ್ದು, ಕೃಷಿ ಸಚಿವ ಉಮೇಶ ಕತ್ತಿ ಅಧ್ಯಕ್ಷತೆ ವಹಿಸುತ್ತಾರೆ. ತಳಿ ಅಭಿವೃದ್ಧಿ, ಬೀಜೋತ್ಪಾದನೆ, ಕ್ಷೇತ್ರಾಭಿವೃದ್ಧಿಯಲ್ಲಿ ಅತ್ಯುತ್ತಮ ಕಾರ್ಯ ಮಾಡಿದ್ದು, ಈ ಸಾಧನೆಗೆ ಕೇಂದ್ರ ಸರ್ಕಾರ ಕಳೆದ ವರ್ಷ ರು. 50 ಕೋಟಿ ಅನುದಾನ ಘೋಷಿಸಿತ್ತು. ಯೋಜನೆಗಳ ರೂಪುರೇಷೆ ನೋಡಿ ಪ್ರಸ್ತುತ ರು. 15.37 ಕೋಟಿ ಬಿಡುಗಡೆ ಮಾಡಿದೆ ಎಂದು ಡಾ ಹಂಚಿನಾಳ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ ಎಚ್.ಎಸ್. ವಿಜಯಕುಮಾರ, ವಿಸ್ತರಣಾ ನಿರ್ದೇಶಕ ಡಾ ಎಲ್. ಕೃಷ್ಣಾ ನಾಯಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

