ಮುಂಡಗೋಡ ಗ್ರಾಮದೇವಿ ಜಾತ್ರೆ ಸಂಪನ್ನ
ಕನ್ನಡಪ್ರಭ ವಾರ್ತೆ, ಮುಂಡಗೋಡ, ಮಾ. 27
ಮುಂಡಗೋಡ ಗ್ರಾಮದೇವಿ ಶ್ರೀ ಮಾರಿಕಾಂಬಾ (ದ್ಯಾಮವ್ವ) ಜಾತ್ರಾ ಮಹೋತ್ಸವ ಸರ್ವ ಸಂಪನ್ನಗೊಂಡಿದೆ. ಮಾ. 19ರಿಂದ ಪ್ರಾರಂಭಗೊಂಡು 9 ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು.
ಒಂದು ತಿಂಗಳಿಂದ ಜಾತ್ರಾ ಕಮಿಟಿ, ದೇವಾಲಯ ಕಮಿಟಿ ಹಾಗೂ ಗ್ರಾಮಸ್ಥರು ಜಾತ್ರಾ ಸಿದ್ಧತೆ ಮತ್ತು ಜಾತ್ರಾ ಕಾರ್ಯ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ನಡೆಸಲಾಗುವ ಜಾತ್ರೆ ನಿಮಿತ್ತ 5 ಹೊರಬೀಡು ಕೂಡ ಆಚರಿಸಿ ಸಂಪನ್ನಗೊಳಿಸಲಾಯಿತು. ತದನಂತರ ಜಾತ್ರೆ ತಯಾರಿ ನಡೆಸಿ ಈಗ ಜಾತ್ರಾ ಸಮಾರಂಭ ಕೂಡ ಯಶಸ್ವಿಗೊಳಿಸಲಾಯಿತು. ಹಿಂದೆಂದೂ ಕಾಣದಷ್ಟು ಜನ ಈ ಬಾರಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಸಂಜೆಯಾಗುತ್ತಿದ್ದಂತೆ ಸಹಸ್ರ ಸಹಸ್ರ ಸಂಖ್ಯೆಯ ಜನರು ದೇವಿಯ ಗದ್ದುಗೆ ಸುತ್ತ ಜಾತ್ರಾ ಸ್ಥಳದಲ್ಲಿ ನೆರೆದಿದ್ದರು.
ಜಾತ್ರೆಯ ಕೊನೆಯ ದಿನ ಬುಧವಾರ ಸಂಜೆ ದೇವಿಯ ವಿಸರ್ಜನಾ ಕಾರ್ಯಕ್ರಮ ಕೂಡ ಭಾರಿ ವಿಜೃಂಬಣೆಯಿಂದ ನಡೆಯಿತು. ದೇವಿಯ ಗದ್ದುಗೆಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿದ ದೇವಿಯ ವಿಸರ್ಜನಾ ಮೆರವಣಿಗೆ ಡೊಳ್ಳು ಮಜಲು ಸೇರಿದಂತೆ ಹಲವು ವಾದ್ಯ ಮೇಳದೊಂದಿಗೆ ಸಾಗಿತು. ಮಧ್ಯ ರಾತ್ರಿ ವೇಳೆಗೆ ಇಲ್ಲಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಬಳಿ ಇರುವ ದೇವಿಯ ಪಾದಗಟ್ಟೆಯಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ವಿಸರ್ಜನಾ ಕಾರ್ಯಕ್ರಮ ನೆರವೇರಿಸಲಾಯಿತು. ದೇವಿಯ ವಿಸರ್ಜನೆ ನಂತರ ಜಾತ್ರಾ ಮಹೋತ್ಸವದ ವೇಳೆಯಲ್ಲಿದ್ದ ಜನರ ಹುಮಸ್ಸು ಸಂಪೂರ್ಣ ಕಮರಿಹೋಯಿತು. ನಿರಂತರ 9 ದಿನಗಳ ಕಾಲ ದೂರ ದೂರದ ಊರಿನಿಂದ ಸಂಬಂಧಿಕರನ್ನು ಕರೆಸಿ ಗ್ರಾಮದೇವಿಯ ಜಾತ್ರೆಯ ಮೆರಗು ತೋರಿಸುತ್ತಿದ್ದ ಮುಂಡಗೋಡ ಜನರಿಗೆ 9 ದಿನ ಹೇಗೆ ಕಳೆಯಿತು ಎಂಬುವುದು ಸಹ ಗೊತ್ತಾಗಲಿಲ್ಲ. ಎಲ್ಲ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಿ ಜಾತ್ರಾ ಸಮಾರಂಭದ ಕಡೆಯೇ ಮನಸ್ಸು ಕೇಂದ್ರಿಕರಿಸಿ ನಿತ್ಯ ಜಾತ್ರೆಯನ್ನು ಸವಿಯುತ್ತಿದ್ದ ಜನರಿಗೆ ದೇವಿಯ ವಿಸರ್ಜನೆ ಬಳಿಕ ನೀರವ ಮೌನ ಆವರಿಸಿದಂತೆ ಕಂಡು ಬರುತ್ತಿತ್ತು. ದೂರದ ಊರಿಂದ ಜಾತ್ರಾ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದವರು ಈಗ ಊರಿಗೆ ಮರಳುತ್ತಿದ್ದಾರೆ. ಒಟ್ಟಾರೆ ಪಟ್ಟಣದಲ್ಲಿ ಜಾತ್ರೆಯ ಜ್ವರ ಆವರಿಸಿದ್ದಂತೂ ಸತ್ಯ. ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜ ಸೇರಿದಂತೆ ಬಣ್ಣ ಬಣ್ಣದ ಬಂಟಿಂಗ್ಸ್ ಅಳವಡಿಸಲಾಗಿತ್ತು. ಜಾತ್ರಾ ಶುಭ ಹಾಗೂ ಸ್ವಾಗತ ಕೋರುವ ನೂರಾರು ಕಟೌಟ್ಗಳನ್ನು ಅಳವಡಿಸಲಾಗಿತ್ತು. ಈಗ ಅವುಗಳ ತೆರವು ಕಾರ್ಯ ಆರಂಭವಾಗುತ್ತಿದೆ.
-ಸಂತೋಷ ದೈವಜ್ಞ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

