ಧಾರವಾಡ

ಕಾಂಗ್ರೆಸ್, ಬಿಜೆಪಿ ಸಾಧನೆ ಶೂನ್ಯ

Published On :

ಧಾರವಾಡ: ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿರುವ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಸಾಧನೆ ಶೂನ್ಯ ಎಂದು ಧಾರವಾಡ ಕ್ಷೇತ್ರ ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಅಭ್ಯರ್ಥಿಗಳ ಸಾಧನೆ ಇಲ್ಲದ್ದರಿಂದ ಈ ಬಾರಿ ಕ್ಷೇತ್ರದೆಲ್ಲೆಡೆ ಕಾಂಗ್ರೆಸ್, ಬಿಜೆಪಿ ವಿರೋಧಿ ಅಲೆ ಕಂಡುಬರುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು ಅಧಿಕಾರದ ಅಟ್ಟಹಾಸದಿಂದ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿರುವುದು ಪ್ರಚಾರದ ವೇಳೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ 40 ಸಾವಿರ ಮತಗಳನ್ನು ಪಡೆದು 10 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತೇನೆಂದು ಅಷ್ಟಗಿ ವಿಶ್ವಾಸ ವ್ಯಕ್ತಪಡಿಸಿದರು. ಸ್ಥಳೀಯ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಕ್ಷೇತ್ರದ ಹೊರಗಿನವರನ್ನು ತಿರಸ್ಕರಿಸಬೇಕಿದೆ. ಕ್ಷೇತ್ರದಲ್ಲಿ ಈವರೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಪೈಕಿ ಮೂವರು ಮಾತ್ರ ಕ್ಷೇತ್ರದವರು. ಉಳಿದೆಲ್ಲರೂ ಹೊರಗಿನವರು. ಇದರಿಂದ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ಕ್ಷೇತ್ರದವರೇ ಆದ ಅಭ್ಯರ್ಥಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.
ರೈತರ, ಬಡವರ, ಶೋಷಿತರ, ದೀನ ದಲಿತರ ಉದ್ಧಾರಕ್ಕಾಗಿ ಹಗಲಿರುಳು ದುಡಿಯಲು ಕಂಕಣ ಬದ್ಧವಾಗಿರುವ ತಮಗೆ ಕ್ಷೇತ್ರದ 54 ಹಳ್ಳಿಗಳು ಮತ್ತು ಪಾಲಿಕೆಯ ಎಂಟು ವಾರ್ಡ್‌ಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಯಡಿಯೂರಪ್ಪನವರ ಪ್ರಭಾವ ಹಾಗೂ ನನ್ನ ವೈಯಕ್ತಿಕ ವರ್ಚಸ್ಸು ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಹೇಳಿದರು.
ಕೆಜೆಪಿ ಕಾರ್ಯಕರ್ತರಿಗೆ ಅನಾಮಧೇಯ ವ್ಯಕ್ತಿಗಳು ದೂರವಾಣಿ ಮೂಲಕ ಮತ್ತು ನೇರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಚುನಾವಣೆ ಬಳಿಕ ದೂರು ಸಲ್ಲಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಸಂಗನಗೌಡ ರಾಮನಗೌಡ್ರ, ಮುಖಂಡರಾದ ನಿಜನಗೌಡ ಪಾಟೀಲ, ಕೆ.ಎಸ್. ದಂಡಿನ, ಶೇಖರ ಕವಳಿ, ಚಂದ್ರಗೌಡ ಭೂಮನಗೌಡ್ರ, ನಾಗೇಶ ದೊಡವಾಡ ಇದ್ದರು.

ಅಣ್ಣಿಗೇರಿ: ಪಕ್ಷೇತರ ಅಭ್ಯರ್ಥಿ ಕರಿಗಾರ ಪ್ರಚಾರ
ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಿವಾನಂದ ಕರಿಗಾರ ಕಾರ್ಯಕರ್ತರ ಪಡೆಯೊಂದಿಗೆ ಪಟ್ಟಣದ 23 ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮಾರುಕಟ್ಟೆ ಸಮೀಪದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು. ಹಣ, ಹೆಂಡ, ಸೀರೆ ಹಂಚುವ ಮೂಲಕ ಮತದಾರರನ್ನು ಮರುಳು ಮಾಡುವ ಅಭ್ಯರ್ಥಿಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ತಮ್ಮನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಹುಬ್ಬಳ್ಳಿ: ಚಿನ್ನಾಭರಣವಿದ್ದವ್ಯಾನಿಟಿ ಬ್ಯಾಗ್ ಕಳ್ಳತನ
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್‌ನ್ನು ಕಳ್ಳತನ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ವಿದ್ಯಾನಗರ ಅರಿಹಂತ, ಸಿದ್ಧೇಶ್ವರ ಪಾರ್ಕ್ ನಿವಾಸಿ ಡಾ. ಎನ್. ಸಂದ್ಯಾ ಸಿಎಲ್‌ಎನ್ ಪ್ರಸನ್ನ ಎಂಬುವರೆ ಚಿನ್ನಾಭರಣದ ಬ್ಯಾಗ್ ಕಳೆದುಕೊಂಡವರಾಗಿದ್ದಾರೆ. ಏ. 30 ರಂದು ಬೆಂಗಳೂರಿನ ಆನಂದರಾವ್ ಸರ್ಕಲ್‌ದಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದ ಡಾ. ಸಂದ್ಯಾ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 3 ಗ್ರಾಮ್ ಡೈಮಂಡ್ ಉಂಗುರ, 5 ಗ್ರಾಮ್‌ನ ಚಿನ್ನದ ಉಂಗುರ ಹಾಗೂ ಸುಮಾರು ರು. 25 ಸಾವಿರ ಮೌಲ್ಯದ ಹರಳಿನ ಉಂಗುರ ಮತ್ತು ರು. 1,500 ಗಳಿದ್ದ ಬ್ಯಾಗ್‌ನ್ನು ಯಾರೋ ಅಪರಿಚಿತರು ಅಪಹರಿಸಿದ್ದಾರೆ. ಈ ಕುರಿತಂತೆ ಡಾ. ಸಂದ್ಯಾ ವಿದ್ಯಾನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸ್ಥಿರಾಸ್ತಿ ಖೊಟ್ಟಿ ದಾಖಲೆ: ಪ್ರಕರಣ ದಾಖಲು
ಹುಬ್ಬಳ್ಳಿ: ಸ್ಥಿರಾಸ್ತಿಯ ಖೊಟ್ಟಿ ದಾಖಲೆ ಪತ್ರಗಳನ್ನು ಸೃಷ್ಟಿಸಲು ವಂಚಿಸಲು ಯತ್ನಿಸಿದ ಆರೋಪ ಮೇರೆಗೆ ಬೆಂಡಿಗೇರಿ ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಸಗಬ್ಬೂರಿನ ಗಿರೀಶ ಗಜಾನನ ಜೋಶಿ ಎಂಬುವರು ತಬೀಬಲ್ಯಾಂಡ್ ನಿವಾಸಿ ಶರೀಫ್ ಮಹ್ಮದ ಶೇಖ ಹಾಗೂ ವೀರಾಪುರ ಓಣಿಯ ಸಂಗಣ್ಣ ಬಸಪ್ಪ ಶಿವಸಂಗಪ್ಪ ಸಂಗಶೆಟ್ಟರ್ ಎಂಬುವರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿತರಿಬ್ಬರೂ ಹೊಸಗಬ್ಬೂರದಲ್ಲಿರುವ ತಮ್ಮ ಮಾಲಿಕತ್ವದ ಪಿಎಸ್ ನಂ. 19, 20, 21 ಹಾಗೂ 25ರಲ್ಲಿ ಪ್ಲಾಟ್ ನಂ. 40 ಮತ್ತು 59ನೇವುದಗಳ ಖೊಟ್ಟಿ ಖರೀದಿ ಸಂಚಗಾರ ಪತ್ರಗಳನ್ನು ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ. ಈ ಕುರಿತಂತೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ರಾಜ್ಯ ಮಟ್ಟದ ಚೆಸ್ ಟೂರ್ನಾಮೆಂಟ್
ಹುಬ್ಬಳ್ಳಿ: ಹುಬ್ಬಳ್ಳಿ ಚೆಸ್ ಆಕಾಡೆಮಿ ವತಿಯಿಂದ ಮೇ 5ರಂದು ಗೋಕುಲ್ ರಸ್ತೆಯ ಗ್ರೀನ್ ಗಾರ್ಡನ್‌ನಲ್ಲಿರುವ ಜೆ.ಕೆ. ಕಾಟ್ಕರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಬ್ಯುರೋದಲ್ಲಿ ರಾಜ್ಯಮಟ್ಟದ 14 ವರ್ಷದೊಳಗಿನವರ ಚೆಸ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಪಂದ್ಯಾವಳಿ ಸ್ವಿಸ್ ಲಿಗ್ ಮಾದರಿಯಲ್ಲಿ ಒಟ್ಟು 7 ರೌಂಡ್‌ಗಳನ್ನು ಚೆಸ್ ಟೂರ್ನಿ ಒಳಗೊಂಡಿದೆ ಎಂದು ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶ್ರೀಪಾದ ಕೆ.ವಿ. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗಾಗಿ 9886497747ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್‌ಗೆ ಮತ ಹಾಕಿ: ಸನದಿ
ನವಲಗುಂದ: ಬಿಜೆಪಿ-ಜೆಡಿಎಸ್‌ನವರ ಆಮಿಷಗಳಿಗೆ ಬಲಿಯಾಗಬೇಡಿ, ಸರ್ವರಿಗೂ ಸಮಬಾಳು-ಸಮಪಾಲು ಎಂಬುದು ಕಾಂಗ್ರೆಸ್ ಧೋರಣೆಯಾಗಿದ್ದು, ಎಲ್ಲ ಪಂಗಡದವರನ್ನು ಸಮನಾಗಿ ಕಾಣುವಂತ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರಿ ಎಂದು ಪ್ರೊ. ಐ.ಜಿ. ಸನದಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ಅವರು ಮಂಗಳವಾರ ಕ್ಷೇತ್ರದ ಕಿರೇಸೂರ, ಶಿರಗುಪ್ಪಿ, ಕುಸುಗಲ್ಲ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ಗಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ರೈತರು, ಅಲ್ಪಸಂಖ್ಯಾತರು ಸಾಕಷ್ಟು ನೋವು ಅನುಭವಿಸಿದ್ದಾರೆ. ಬೆಳೆದು ನಿಂತ ಬೆಳೆಗಳಿಗೆ ಸಕಾಲದಲ್ಲಿ ನೀರು ಹರಿಸಲಿಲ್ಲ. ದುರಾಡಳಿತ, ವಚನ ಭ್ರಷ್ಟತೆಯಿಂದಾಗಿ ಬೇಸತ್ತಿರುವ ಮತದಾರರು ಕಾಂಗ್ರೆಸ್‌ನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದರಿಂದ ವಿರೋಧ ಪಕ್ಷದವರಿಗೆ ಸೋಲು ಖಚಿತವಾಗಿ ಹತಾಶೆಗೊಂಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಮಾಡಳ್ಳಿ, ಪ್ರಚಾರ ಸಮಿತಿ ಅಧ್ಯಕ್ಷ ವಿ.ಡಿ. ಅಂದಾನಿಗೌಡರ, ಜಿಪಂ ಮಾಜಿ ಅಧ್ಯಕ್ಷ ಸುಭಾಸ ದ್ಯಾಮಕ್ಕನವರ, ತಾಲೂಕು ಅಧ್ಯಕ್ಷ ಆರ್.ಎಚ್. ಕೋನರಡ್ಡಿ, ಅಶೋಕ ಕುಸುಗಲ್ಲ, ಎಸ್.ಸಿ. ರೇಣುಕಮಠ, ರಜನಿಕಾಂತ ಭರಮಗೌಡರ, ಗೋಪಾಲರಡ್ಡಿ ನಲವಡಿ, ವೀರಣ್ಣ ಕಡದಳ್ಳಿ, ದೇವಪ್ಪ ಅಸುಂಡಿ, ಮಂಜು ಗಣಿ, ರಾಜೇಸಾಬ ಹಂಚಿನಾಳ, ಶಿವಾನಂದ ಭೂಮಣ್ಣವರ, ಈರಯ್ಯಾ ಹಿರೇಮಠ, ಮಲ್ಲಿಕಾರ್ಜುನ ಅಸುಂಡಿ ಇತರರು ಇದ್ದರು.

ಹುಣಸೀಮರದ ಮತ ಯಾಚನೆ
ಧಾರವಾಡ: ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಗುರುರಾಜ ಹುಣಶಿಮರದ ಇಲ್ಲಿನ 18 ಮತ್ತು 19ನೇ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ನಗರದ ಮಾಳಮಡ್ಡಿ, ಸಾರಸ್ವತ ಪುರ, ಗೌಳಿಗಲ್ಲಿ, ರೆಡ್ಡಿ ಕಾಲನಿ, ಖಾಜಿ ಬಿಲ್ಡಿಂಗ್, ಭವಾನಿ ನಗರ, ಮಂಜುನಾಥಪುರ, ಗೋಪಾಳಪುರದಲ್ಲಿ ಮತ ಯಾಚಿಸಿದರು. ರಫೀಕ ಮುಲ್ಲಾ, ಅಲ್ಲಾವುದ್ದೀನ್ ಅತ್ತಾರ, ಶಿವಪ್ಪ ಕತ್ತಿ, ಮಹಮ್ಮದಸಾಬ, ನಜಿವುಲ್ಲಾ ಜೋಡಿಹಾಳ, ರಾಧಾಬಾಯಿ ರಜಪೂತ, ರತ್ನವ್ವ ಕಬೀರಸಂತ, ಮಂಜುಳಾ ಪಂಡರಪುರ ಇದ್ದರು.

ಮತದಾನ: ನಿಷೇಧಾಜ್ಞೆ
ಹುಬ್ಬಳ್ಳಿ: ಮೇ 5ರಂದು ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಜತೆಗೆ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಮಹಾನಗರದಲ್ಲಿ ಮೇ 5ರ ಸಂಜೆ 5ರವರೆಗೆ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಆದೇಶ ಹೊರಡಿಸಿದ್ದಾರೆ. 48 ಗಂಟೆಗಳ ಕಾಲ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಸುತ್ತ 200 ಮೀಟರ್ ಆವರಣವನ್ನು ಹೊರತುಪಡಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಯುಕ್ತ ಪದ್ಮನಯನ ತಿಳಿಸಿದ್ದಾರೆ. ಈ ಆಜ್ಞೆ ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ತೆಗೆಯಿಸಲಾದ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಕಲಂ 188 ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಮಕೈಗೊಳ್ಳಲು ಆಯಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಗುಡಗೇರಿ: ಜೆಡಿಎಸ್ ಅಭ್ಯರ್ಥಿ ಎಂ.ಎಸ್ ಅಕ್ಕಿ ಮತ ಯಾಚನೆ
ಗುಡಗೇರಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎಸ್. ಅಕ್ಕಿ ಮಂಗಳವಾರ ಗುಡಗೇರಿ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು.  
ವೆಂಕನಗೌಡ ನಿಂಗೊಡ್ತಿ, ಡಿ.ಸಿ. ಬೆನಕಣ್ಣವರ, ಎಫ್.ಸಿ. ಮರಿಸಿದ್ದಪ್ಪನವರ, ಪಿ.ಬಿ. ಹಿರೇಗೌಡ್ರ, ನಿಂಗನಗೌಡ್ರ ದೊಡ್ಡಮನಿ, ಆರ್.ಜಿ. ಪಾಟೀಲ, ಬಿ.ಜಿ. ಪಾಟೀಲ, ಐ.ಸಿ. ಬೂದಿಹಾಳ, ರುದ್ರಪ್ಪ ಗಾಣಿಗೇರ, ಗುರುಪಾದ ಕಮ್ಮಾರ, ಸಿದ್ದಲಿಂಗಪ್ಪ ಕರೆಮ್ಮನವರ, ಹುತ್ತಪ್ಪ ಗಿರಿಮಲ್ಲ, ಸೋಮನಗೌಡ ಪಾಟೀಲ, ಬಸವರಾಜ ನಾಯ್ಕರ, ಬಸಲಿಂಗಪ್ಪ ಕೋರಿ, ನಿಂಗನಗೌಡ ದೊಡ್ಡಮನಿ, ಬಾಪು ಮರಿಸಿದ್ದಪ್ಪನವರ, ಈಶ್ವರಗೌಡ ಹಿರೇಗೌಡ್ರ, ಭರಮಪ್ಪ ತಿರ್ಲಾಪುರ, ವೆಂಕನಗೌಡ್ರ ಕರೆಮ್ಮನವರ, ಸೋಮಣ್ಣ ಕಾಕಂಬಿ, ಜಗದೀಶ ಧರೆಣ್ಣವರ, ಮಂಜು ಶಶಿಮಠ, ಸುರೇಶ ಮುಗಳಿ, ಪ್ರಕಾಶ ಪಾಟೀಲ, ದೇವಪ್ಪ ಹುಂಡೆಕಾರ, ಹನುಮಂತಗೌಡ್ರ ದ್ಯಾಮನಗೌಡ್ರ, ಉಮೇಶ ಮಲ್ಲಾಡದ, ಐ.ಡಿ. ಬಡ್ನಿ, ಶೇಖಪ್ಪ ಹರಕುಣಿ, ರಮೇಶ ಲಮಾಣಿ, ಕೋಟ್ರಯ್ಯ ಸ್ವಾಗ್ಯಾಳಮಠ. ಈರಪ್ಪ ತಳವಾರ, ರಾಮಣ್ಣ ಸಿರಂಜಿ, ಡಿ.ಜಿ. ಪಾಟೀಲ, ಪಿ.ಆರ್. ಕಾರಡಗಿ, ಹೊನ್ನಪ್ಪ ಕಟಗಿ, ಬಸಣ್ಣ ನಡುವಿನಮನಿ, ಬಾಬಣ್ಣ ಬೇಟದೂರು, ರೆಹಮಾನಸಾಬ ಕಿಲ್ಲೇದಾರ, ಸಿದ್ದನಗೌಡ ದೊಡ್ಡಮನಿ, ಶೇಖಣ್ಣ ಕಟಗಿ, ಬಾಪನಗೌಡ್ರ ರಂಗನಗೌಡ್ರ, ಚಮನಸಾಬ ಜಕಾತಿ, ಫಿರೋಜ್ ಕುರಟ್ಟಿ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅನೇಕರು ಕಾಂಗ್ರೆಸ್, ಬಿಜೆಪಿ, ಕೆಜೆಪಿ ತೊರೆದು ಜೆಡಿಎಸ್ ಸೇರಿದರು.

ಶಿರಿಯಣ್ಣವರ ಗೆಲ್ಲಿಸಿ: ಸಂಕೇಶ್ವರ
ನವಲಗುಂದ: ಡಾ. ಆರ್.ಬಿ. ಶಿರಿಯಣ್ಣವರ ಪರ ಕೆಜೆಪಿ ಧುರೀಣ ವಿಜಯ ಸಂಕೇಶ್ವರ ಪ್ರಚಾರ ನಡೆಸಿದರು. ಅವರು ಬುಧವಾರ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮಾಡುತ್ತಾ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಈಶ್ವರಚಂದ್ರ ಹೊಸಮನಿ, ವಿ.ಟಿ. ಕರಿಸಕ್ರಣ್ಣವರ, ಬಂಗಾರೇಶ ಹಿರೇಮಠ, ಅಶೋಕ ಮಜ್ಜಿಗುಡ್ಡ, ಕೆ.ಡಿ. ಆನೇಗುಂದಿ, ಬಸವರಾಜ ಹಳ್ಳದ, ಅನೀಲ ಶಿದ್ರಾಮಶೆಟ್ಟರ ಆನಂದ ಹವಳಕೋಡ ಪಾಲ್ಗೊಂಡಿದ್ದರು.

ಆಟೋರಿಕ್ಷಾ ಸಂಘ ಬೆಂಬಲ
ಧಾರವಾಡ: ಹು-ಧಾ ಪಶ್ಷಿಮ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರಿಗೆ ಇಲ್ಲಿನ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ. ಅಮೃತ ದೇಸಾಯಿ ಹಾಗೂ ಇಸ್ಮಾಯಿಲ್ ತಮಟಗಾರ ಅವರು ಯಾವುದೇ ಜಾತಿ ಮತ ಭೇದವಿಲ್ಲದೇ, ಸಂಘಕ್ಕೆ ಸಹಾಯ ನೀಡುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಬೆಂಬಲ ಸೂಚಿಸಲಾಗಿದೆ ಎಂದು ರಾಜ್ಯ ಆಟೋ ಜಂಟಿ ಕ್ರಿಯಾ ಸಮಿತಿ ಉಪಾಧ್ಯಕ್ಷ ಪ್ರೊ. ಎನ್.ಸಿ. ಶೇಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5ರ ಸಂತೆ, ಜಾತ್ರೆ ನಿಷೇಧ
ಧಾರವಾಡ: ರಾಜ್ಯ ವಿಧಾನಸಭೆಗೆ ಮೇ 5ರಂದು ಚುನಾವಣೆ ಜರುಗಲಿದ್ದು, ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಂದು ಜರುಗುವ ಸಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.