ಧಾರವಾಡ: ಬಿಜೆಪಿ ಭದ್ರಕೋಟೆ ಛಿದ್ರ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 8
ಬಿಜೆಪಿಯ ಭದ್ರಕೋಟೆ ಛಿದ್ರವಾಗಿದೆ!
ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ತೀವ್ರ ಮುಖಭಂಗಕ್ಕೀಡಾಗಿದೆ. 6 ಕ್ಷೇತ್ರಗಳ ಈ ಭದ್ರಕೋಟೆಯನ್ನು ಮತದಾರ ಈ ಎಲೆಕ್ಷನ್ದಲ್ಲಿ ಛಿದ್ರ ಮಾಡಿದ್ದಾನೆ.
ನಿರ್ಗಮಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ತವರು ಜಿಲ್ಲೆ ಧಾರವಾಡದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
2008ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದ ಬಿಜೆಪಿ, ಈ ಬಾರಿ ಕೇವಲ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸುವಲ್ಲಿ ತಿಣುಕಾಡಿತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜಗದೀಶ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಈ ಬಾರಿ ಗೆಲವು ಸಾಧಿಸಿದ್ದಾರೆ.
ಕೈಬಿಟ್ಟ ಕಮಲದ ಸ್ಥಾನಗಳು: 2008ರ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. ಮಿಕ್ಕುಳಿದ ಕುಂದಗೋಳ, ನವಲಗುಂದ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಐದು ವರ್ಷಗಳ ಆಡಳಿತ ನಡೆಸಿದ್ದ ಬಿಜೆಪಿ, ಜಿಲ್ಲೆಯ ಮಟ್ಟಿಗೆ ಈ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಲ್ಲೂ ಕಮಲ ಅರಳಿಸುವ ಸಾಧ್ಯತೆ ಇತ್ತು. ಕಳೆದ ಬಾರಿಯ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ಬಿಜೆಪಿ ಪಾಲಿಗೆ ದೂರ ಉಳಿಯಿತಲ್ಲದೆ, ಇದ್ದ ಸ್ಥಾನಗಳನ್ನೂ ಉಳಿಸಿಕೊಳ್ಳುವುದು ಅಸಾಧ್ಯವಾಯಿತು.
ಉದುರಿದ ಕಮಲ ದಳ'ಪತಿ'ಗಳು: ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ಬಿಜೆಪಿಯ ಸೀಮಾ ಮಸೂತಿ ಧಾರವಾಡ ಕ್ಷೇತ್ರದಲ್ಲಿ, ವೀರಭದ್ರಪ್ಪ ಹಾಲಹರವಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ, ಜಗದೀಶ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ, ಶಂಕರ ಪಾಟೀಲ ಮುನೇನಕೊಪ್ಪ ನವಲಗುಂದದಲ್ಲಿ ಈ ಬಾರಿಯೂ ಸ್ಪರ್ಧಿಸಿದ್ದರು. ಇವರಲ್ಲಿ ಈ ಬಾರಿ ಗೆಲವು ಸಾಧಿಸಿದ್ದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜಗದೀಶ ಶೆಟ್ಟರ್ ಅವರೊಬ್ಬರೇ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದಿದ್ದ ಚಂದ್ರಕಾಂತ ಬೆಲ್ಲದ ರಾಜಕೀಯ ನಿವೃತ್ತಿ ಪಡೆದಿದ್ದರಿಂದ ಅವರ ಪುತ್ರ ಅರವಿಂದ ಬೆಲ್ಲದ ಸ್ಪರ್ಧಿಸಿ, ಜಯ ಸಾಧಿಸಿದರು.
ಇನ್ನು ಕಲಘಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈರೇಶ ಸಾಲಗಾರ ಸೋಲನುಭವಿಸಿದರು. ಕಾಂಗ್ರೆಸ್ನ ಸಂತೋಷ ಲಾಡ್ ಈ ಬಾರಿಯೂ ಗೆಲವು ಸಾಧಿಸಿದರು. ಕುಂದಗೋಳ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ಎಸ್.ಐ. ಚಿಕ್ಕನಗೌಡ್ರ ಈ ಬಾರಿ ಕೆಜೆಪಿಯಿಂದ ಚುನಾವಣಾ ಕಣಕ್ಕಿಳಿದಿದ್ದರಿಂದ ಬಿಜೆಪಿ ಎಂ.ಆರ್. ಪಾಟೀಲ ಅವರನ್ನು ಕಣಕ್ಕಿಳಿಸಿತ್ತಾದರೂ ಕಾಂಗ್ರೆಸ್ನ ಸಿ.ಎಸ್. ಶಿವಳ್ಳಿ ಜಯ ಸಾಧಿಸಿದರು.
ಬಿಜೆಪಿಯ ಸೀಮಾ ಮಸೂತಿ ಪ್ರತಿನಿಧಿಸಿದ್ದ ಧಾರವಾಡ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ನ ವಿನಯ ಕುಲಕರ್ಣಿ, ವೀರಭದ್ರಪ್ಪ ಹಾಲಹರವಿ ಪ್ರತಿನಿಧಿಸಿದ್ದ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ ಪ್ರತಿನಿಧಿಸಿದ್ದ ನವಲಗುಂದದಲ್ಲಿ ಜೆಡಿಎಸ್ನ ಎನ್.ಎಚ್. ಕೋನರಡ್ಡಿ, ಎಸ್.ಐ. ಚಿಕ್ಕನಗೌಡ್ರ ಪ್ರತಿನಿಧಿಸಿದ್ದ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಿ.ಎಸ್. ಶಿವಳ್ಳಿ ಗೆಲವು ಸಾಧಿಸಿದರು.
ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರವೊಂದರಲ್ಲಿಯೇ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಈ ಬಾರಿ ಕಲಘಟಗಿ ಸೇರಿದಂತೆ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ್ ಜೋಶಿ ಪಾಲಿಗೆ ಪ್ರತಿಷ್ಠೆಯಾಗಿದ್ದ ಧಾರವಾಡ ಜಿಲ್ಲೆಯ ಕ್ಷೇತ್ರಗಳಲ್ಲಿನ ಚುನಾವಣಾ ಫಲಿತಾಂಶ ತೀವ್ರ ಮುಖಭಂಗವನ್ನುಂಟು ಮಾಡಿದೆ.
ಮೂಲಸೌಕರ್ಯಕ್ಕೆ ಆದ್ಯತೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜನರು ಅನೇಕ ರೀತಿಯ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಬಡವರಿಗೆ ಆಶ್ರಯ ಮನೆಗಳನ್ನು ವಿತರಿಸಿಲ್ಲ. ಕ್ಷೇತ್ರದ ಬಡವರಿಗೆ ಆಶ್ರಯ ಯೋಜನೆಗಳನ್ನು ವಿತರಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಕೇಂದ್ರ ಮತ್ತು ರಾಜ್ಯದ ವಿವಿಧ ಜನಪರ ಯೋಜನೆಗಳನ್ನು ಕ್ಷೇತ್ರದಲ್ಲಿ ಪರಿಣಾಮಕಾರಿ ಜಾರಿ ನನ್ನ ಮೊದಲ ಪ್ರಾಶಸ್ತ್ಯ. ಫಲಿತಾಂಶದ ಬಗ್ಗೆ ಹೇಳುವುದಾದರೆ ಗೆಲವು ನನ್ನದು ಎನ್ನುವುದು ಮೊದಲೇ ಖಚಿತವಾಗಿತ್ತು. ರಾಜ್ಯದಲ್ಲಿನ ಕಾಂಗ್ರೆಸ್ ಅಲೆ ಮತ್ತು ನನ್ನ ಸಾಮಾಜಿಕ ಸೇವೆ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು.
- ಪ್ರಸಾದ್ ಅಬ್ಬಯ್ಯ,
ಶಾಸಕ, ಹುಬ್ಬಳ್ಳಿ-ಧಾರವಾಡ ಪೂರ್ವ
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

