ಧಾರವಾಡ

ಸುದ್ದಿ ಸಂಕ್ಷೇಪ

Published On :

ಪರಮೇಶ್ವರಗೆ ಸೂಕ್ತ ಸ್ಥಾನ ನೀಡಿ
ಧಾರವಾಡ:
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲು ಕಾರಣರಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕೆಪಿಸಿಸಿ ಕಿಸಾನ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ ಅವರು, ಪರಮೇಶ್ವರಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಅಭಿವೃದ್ಧಿ ಸಾಕ್ಷಿಯಾಗಬೇಕು. ಇದರಿಂದ ದಲಿತ ಮುಖಂಡರಿಗೆ ಸ್ಥಾನ ನೀಡಿದಂತಾಗುತ್ತದೆ ಎಂದು ಸಮಿತಿ ರಾಜ್ಯ ಸಂಚಾಲಕ ದೇವಾನಂದ ರತ್ನಾಕರ, ಉಪಾಧ್ಯಕ್ಷ ಡಾ. ಆನಂದಕುಮಾರ, ಸುಭಾಸ ತಳಕೇರಿ, ನಂದಕುಮಾರ ಪಾಟೀಲ, ಸತೀಶ ಬ್ಯಾಳಿ, ದಾವಲಸಾಬ ಕಾದ್ರವಳ್ಳಿ, ಮೋಹನ ಬ್ಯಾಳಿ, ಎಚ್.ಜಿ. ಮೋಹನ ಒತ್ತಾಯಿಸಿದ್ದಾರೆ.

ಇಂದು ಶತಮಾನೋತ್ಸವ
ಧಾರವಾಡ:
ಇಲ್ಲಿನ ಕೆಲಗೇರಿ ರಸ್ತೆಯ ಮಾಧ್ವ ವಿದ್ಯಾಪೀಠದಲ್ಲಿ ಮೇ 17ರ ಶುಕ್ರವಾರ ಬೆಳಗ್ಗೆ 9ಕ್ಕೆ ಶ್ರೀ ವಿದ್ಯಾಮಾನ್ಯ ತೀರ್ಥರ ಶತಮಾನೋತ್ಸವ ಮತ್ತು ಹದಿಮೂರನೆಯ ಮಹಾಸಮಾರಾಧನೆ ಹಮ್ಮಿಕೊಳ್ಳಲಾಗಿದೆ. ಉಡುಪಿ ವಿದ್ಯೇಶತೀರ್ಥರು ಸಮಾರಂಭ ಉದ್ಘಾಟಿಸುತ್ತಾರೆ. 10ಕ್ಕೆ ಸ್ತ್ರೀ-ಪುರುಷರಿಗೆ ಪ್ರತ್ಯೇಕ ಧಾರ್ಮಿಕ ಶಿಕ್ಷಣ ಶಿಬಿರ, ಸಂಜೆ 4.30ರಿಂದ 5.30ರ ವರೆಗೆ ಭಜನಾ ಮಂಡಳಿಗಳಿಂದ ಭಜನೆ, 5.30ಕ್ಕೆ ಆಯಾಜಿತ ಧೀರೇಂದ್ರಾಚಾರ್ಯರಿಂದ ಪ್ರವಚನ, 7ಕ್ಕೆ ಪಂ. ವಲ್ಲಭ ಮುಳಗುಂದ ಅವರಿಂದ ಸಂಗೀತ ಸಂಧ್ಯಾ ಹಾಗೂ 8ಕ್ಕೆ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹ.ವೆಂ. ಕಾಖಂಡಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರ
 ಧಾರವಾಡ: 
ವ್ಯಾಸಂಗಕ್ಕಾಗಿ ದೂರದ ಊರುಗಳಿಂದ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಮೇಘಣ್ಣವರ ಹೇಳಿದ್ದಾರೆ.  ನಗರದಲ್ಲಿ ಆರಂಭವಾದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರ ಬೆಳಗಾವಿ ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲಾ ಹಿಂದುಳಿದ ಅ ವರ್ಗಗಳ ಅಧಿಕಾರಿ ಕೆ.ಎಚ್. ಚನ್ನೂರ, ಎಸ್.ಪಿ. ಸಜ್ಜನ ವಂದಿಸಿದರು. ಆರ್.ಐ. ಶೇಖ ನಿರೂಪಿಸಿದರು. ತರಬೇತಿಯು ಸಾಧನಕೇರಿಯಲ್ಲಿನ ಡಾ. ದ.ರಾ. ಬೇಂದ್ರೆ ಭವನದಲ್ಲಿ ಮೇ 25ರ ವರೆಗೆ ನಡೆಯಲಿದೆ.

ಮಹಿಳೆ ಆತ್ಮಹತ್ಯೆ
ಧಾರವಾಡ:
ಕಳೆದ ಹಲವು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬ ಕೆಲಗೇರಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಲಗೇರಿ ನಿವಾಸಿ ಮಲ್ಲವ್ವ ವೀರಪ್ಪ ಕಲ್ಲಗನೂರ (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಎರಡು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಈಕೆ ಹಲವಾರು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಳು. ಆದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಬುಧವಾರ ಸಂಜೆ ವಾಯು ವಿಹಾರಕ್ಕೆಂದು ಹೋಗಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಪಘಾತ: ಬಾಲಕ ಸಾವು
ಧಾರವಾಡ: 
ಇಲ್ಲಿನ ಮೆಹಬೂಬನಗರದ ಒಡೆಯರ ಪ್ಲಾಟ್ ಬಳಿ ಬಾಲಕನ ಮೇಲೆ ಟಾಟಾ ಏಸ್ ವಾಹನ ಹಾಯ್ದು ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಸಮೀರ ಬಾಬಾಜಾನ ಬೀಡಿ(4) ಮೃತಪಟ್ಟ ಬಾಲಕ. ರಸ್ತೆ ದಾಟುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ವಾಹನ ಚಾಲಕನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.