ಡೊನೇಷನ್ ಹಾವಳಿಗೆ ಬ್ರೇಕ್ ಹಾಕೋರಾರು?
ಹುಬ್ಬಳ್ಳಿ: ಈಗೇನಿದ್ದರೂ ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ಹಬ್ಬದ ಸಂಭ್ರಮ !!
ಹೌದು, ಪಿಯುಸಿ ಮತ್ತು ಪದವಿ ಕಾಲೇಜುಗಳಿಗೆ ಪ್ರವೇಶ ಪ್ರಾರಂಭಗೊಂಡಿದ್ದು, ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಡೊನೇ ಷನ್ ಹಾಗೂ ಪರಿಚಯ ಪುಸ್ತಕ ಮಾರಾಟದ ನೆಪದಲ್ಲಿ ವಿದ್ಯಾರ್ಥಿಗಳ ಪಾಲಕರ ಸುಲಿಗೆಗೆ ನಿಂತಿವೆ. ತಮ್ಮ ಕಾಲೇಜಿನ ಮಾಹಿತಿ ಇರುವ ಪರಿಚಯ ಪುಸ್ತಕವನ್ನು ಉಚಿತವಾಗಿ ನೀಡಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿಯಮ ಇದೆ. ಆದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಈ ಪರಿಚಯ ಪುಸ್ತಕವನ್ನು ಕನಿಷ್ಠ ರು. 50 ರಿಂದ ಗರಿಷ್ಠ ರು. 500-600ರವರೆಗೂ ಮಾರಾಟ ಮಾಡುತ್ತಿವೆ. ಈ ಪರಿಚಯ ಪುಸ್ತಕವನ್ನು ಪ್ರವೇಶ ಪತ್ರದ ಜೊತೆಗೆ ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕೆಂಬ ಅಲಿಖಿತ ನಿಯಮವೂ ಕೆಲ ಕಾಲೇಜುಗಳಲ್ಲಿದೆ ಎಂಬುದು ವಿದ್ಯಾರ್ಥಿಗಳು, ಪಾಲಕರ ಆರೋಪ. ಪರಿಚಯ ಪುಸ್ತಕಕ್ಕೆ ನೀಡಿದ ಶುಲ್ಕದ ರಸೀದಿ ನೀಡುವಂತೆ ಒತ್ತಾಯಿಸಿದರೆ ಬಿಳಿ ಕಾಗದದ ಮೇಲೆ ಪಡೆದ ಮೊತ್ತ ಬರೆದುಕೊಡುತ್ತಿರುವ ಘಟನೆಗಳೂ ಕೆಲ ಕಾಲೇಜುಗಳಲ್ಲಿ ಸಂಭವಿಸಿವೆ.
ಇನ್ನೂ ಡೊನೇಷನ್ ವಿಷಯಕ್ಕೆ ಬಂದರೆ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಪಾಲಕರನ್ನು ಹಗಲು ದರೋಡೆ ಮಾಡುತ್ತಿರುವುದು ಸಾಮಾನ್ಯದ ಸಂಗತಿಯಂತಾಗಿದೆ. ಪದವಿ ಕಾಲೇಜುಗಳಿಗಿಂತಲೂ ಪದವಿಪೂರ್ವ ಕಾಲೇಜುಗಳಲ್ಲಿ ಡೊನೇಷನ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ಹೆಚ್ಚಾಗಿದೆ.
ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳಿಗೆ ಪ್ರತ್ಯೇಕ ಡೊನೇಷನ್ ಮೊತ್ತವನ್ನು ಕೆಲ ಕಾಲೇಜುಗಳು ನಿಗದಿಗೊಳಿಸಿವೆ. ಕೆಲವೆಡೆಯಂತೂ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಶೇಕಡವಾರು ಅಂಕ ಹಾಗೂ ಆತ ಪದವಿಪೂರ್ವ ಶಿಕ್ಷಣದಲ್ಲಿ ಆಯ್ದುಕೊಳ್ಳುವ ಕೋರ್ಸ್ನ ಆಧಾರದ ಮೇಲೆ ಡೊನೇಷನ್ ನಿಗದಿಯಾಗುತ್ತದೆ.
ಅಂಕದ ಆಧಾರದ ಮೇಲೆ ಡೊನೇಷನ್ ನಿಗದಿ: ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕ ಪಡೆದು, ವಿಜ್ಞಾನ ವಿಭಾಗ ಆಯ್ದುಕೊಳ್ಳಬೇಕಿದ್ದರೆ ಆತ ರು. 40 ಸಾವಿರಕ್ಕೂ ಹೆಚ್ಚಿನ ಮೊತ್ತದ ಡೊನೇಷನ್ ನೀಡಲೇಬೇಕು. ಕೆಲವೆಡೆಯಂತೂ ಕಾಲೇಜುಗಳ ಪ್ರತಿಷ್ಠೆಯ ಆಧಾರದ ಮೇಲೂ ಡಡೊನೇಷನ್ ಮೊತ್ತ ನಿಗದಿಯಾಗುತ್ತದೆ. ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 90 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ಕನಿಷ್ಟ ರು. 30 ರಿಂದ 35 ಸಾವಿರ ಡೊನೇಷನ್ ನೀಡಲೇಬೇಕು.
ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ದುಕೊಳ್ಳಬೇಕಾದರೆ ಹೆಚ್ಚಿನ ಡೊನೇಷನ್ ನೀಡಬೇಕು. ವಾಣಿಜ್ಯ ವಿಭಾಗಕ್ಕೆ ಮಧ್ಯಮ ಮೊತ್ತದ ಹಾಗೂ ಕಲಾ ವಿಭಾಗಕ್ಕೆ ಕಡಿಮೆ ಮೊತ್ತದ ಡೊನೇಷನ್ ಕೆಲ ಕಾಲೇಜುಗಳಲ್ಲಿ ನಿಗದಿಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ವಿಜ್ಞಾನ ಅಥವಾ ವಾಣಿಜ್ಯ ವಿಭಾಗ ಆಯ್ದುಕೊಳ್ಳಲಿಚ್ಛಿಸುವ ಬಡ ವಿದ್ಯಾರ್ಥಿಗಳೇನಕರು ಹೆಚ್ಚಿನ ಮೊತ್ತದ ಡೊನೇಷನ್ ನೀಡಲಾಗದೆ ಕಲಾ ವಿಭಾಗ ಆಯ್ದುಕೊಳ್ಳುತ್ತಿರುವುದು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ.
ರಾಜ್ಯದೆಲ್ಲೆಡೆ ಹಾವಳಿ: ಈ ಡೊನೇಷನ್ ಪಿಡುಗು ಯಾವುದೇ ಒಂದು ನಗರ ಅಥವಾ ಪಟ್ಟಣದ ಕಾಲೇಜುಗಳಿಗೆ ಸೀಮಿತವಾಗಿಲ್ಲ. ಬಹುತೇಕ ಎಲ್ಲ ಪಟ್ಟಣಗಳಲ್ಲಿ ಡೊನೇಷನ್ ಹಾವಳಿ ಸಾಮಾನ್ಯವಾದಂತಾಗಿದೆ. ಇನ್ನೂ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ದಾವಣಗೆರೆ, ತುಮಕೂರು, ಗುಲ್ಬರ್ಗಾಗಳಂತಹ ಮಹಾನಗರಗಳಲ್ಲಿನ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದೇ ಕಷ್ಟಸಾಧ್ಯ.
ಕಾಲೇಜುಗಳಲ್ಲಿ ಡೊನೇಷನ್ ಪಡೆದುಕೊಳ್ಳುವುದು ಮುಚ್ಚು ಮರೆಯಾಗಿಯೇನೂ ನಡೆಯುತ್ತಿಲ್ಲ. ಬಹಿರಂಗವಾಗಿಯೇ ಅನೇಕ ಕಾಲೇಜುಗಳು ಡೊನೇಷನ್ ಪಡೆಯುತ್ತಿವೆ. ಆದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನೇಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿದ್ದರೂ, ಡೊನೇ ಷನ್ ಹಣ ನೀಡಲು ಸಾಧ್ಯವಾಗದೇ ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ. ಇನ್ನಾದ ರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಡೊನೇಷನ್ ಪಡೆಯುವ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿಯುವುದು ತಪ್ಪುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

