ಸ್ಥಳೀಯ ಸಂಸ್ಥೆ ಗದ್ದುಗೆಗೆ ಮಹಿಳೆಯರು?
ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 21
ಕಳೆದ ಮಾರ್ಚ್ನಲ್ಲಿ ಚುನಾವಣೆ ನಡೆದ 208 ಸ್ಥಳೀಯ ಸಂಸ್ಥೆಗಳಲ್ಲಿನ ಅರ್ಧಕ್ಕೂ ಹೆಚ್ಚು ಮೇಯರ್-ಉಪಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಮಹಿಳೆಯರ ಪಾಲಾಗಲಿವೆಯೇ...?
ಇಂತಹದೊಂದು ಕುತೂಹಲ ಇದೀಗ ಸ್ಥಳೀಯ ಸಂಸ್ಥೆಗಳ ಪುರಪಿತೃರಲ್ಲಿ ಮೂಡತೊಡಗಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಚ್ಚು ಆಸಕ್ತರಾಗಿರುವುದು ಬಹಿರಂಗ ಸತ್ಯ. ಇದನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ಉದ್ದೇಶಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಸಂಸ್ಥೆಗಳ ಮೇಯರ್-ಉಪಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸ್ಥಾನ ನೀಡಲು ಹೊರಟಿದೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗಳ ಕಾರ್ಯದರ್ಶಿಗಳು ಬುಧವಾರ (ಮೇ 22) ಬೆಂಗಳೂರಿನಲ್ಲಿ ಜಂಟಿ ಸಭೆ ನಡೆಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು. ಅನಂತರ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವರ ಸಲಹೆ ಪಡೆದುಕೊಂಡು ಒಂದಿಷ್ಟು ಬದಲಾವಣೆಯ ನಂತರ ಮೀಸಲಾತಿ ಪಟ್ಟಿ ಅಂತಿಮಗೊಳ್ಳಲು ಮುಖ್ಯಮಂತ್ರಿಯವರ ಬಳಿ ತೆರಳುವುದು.
ಮುಖ್ಯಮಂತ್ರಿಯವರು ಸೂಚಿಸುವ ಬದಲಾವಣೆ ನಂತರ ಸ್ಥಳೀಯ ಸಂಸ್ಥೆಗಳ ಮೀಸಲಾತಿಯ ಅಂತಿಮ ಪಟ್ಟಿ ಬಹಿರಂಗಗೊಳ್ಳುವುದು. ಮೀಸಲಾತಿಯ ಗೆಜೆಟ್ ಅಧಿಸೂಚನೆ ಸೇರಿದಂತೆ ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಒಂದು ವಾರದ ಕಾಲಾವಕಾಶ ಬೇಕಿರುವುದರಿಂದ ಇನ್ನೂ ಒಂದು ವಾರದೊಳಗೆ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳ ಮೂಲಗಳು ತಿಳಿಸಿವೆ.
ನಿರೀಕ್ಷೆಯಂತೆ 208 ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ ಶೇ. 50ರಷ್ಟು ಮೀಸಲಾತಿ ಮಹಿಳೆಯರಿಗೆ ಘೋಷಣೆಗೊಂಡಲ್ಲಿ 7 ಮಹಾನಗರ ಪಾಲಿಕೆಗಳಲ್ಲಿ 4 ಮಹಾನಗರ ಪಾಲಿಕೆಗಳಲ್ಲಿನ ಮೇಯರ್ ಗೌನ್ ಮಹಿಳೆಯರು ತೊಡುವುದು ನಿಶ್ಚಿತ. ಇದೇ ರೀತಿ 43 ನಗರಸಭೆಗಳಲ್ಲಿನ 22 ನಗರಸಭೆಗಳ ಅಧ್ಯಕ್ಷ ಹುದ್ದೆ ಮಹಿಳೆಯರ ಪಾಲಾಗುವುದು ಶತಸ್ಸಿದ್ಧ.
ಇನ್ನೂ 93 ಪುರಸಭೆಗಳಲ್ಲಿನ 46 ಪುರಸಭೆಗಳು ಹಾಗೂ 65 ಪಟ್ಟಣ ಪಂಚಾಯಿತಿಗಳಲ್ಲಿನ 33 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳು ಮಹಿಳಾ ಸದಸ್ಯರಿಗೆ ಒಲಿಯುವುದು ಗ್ಯಾರಂಟಿ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ, ಪ. ಜಾತಿ ಮಹಿಳೆ, ಪ. ಪಂಗಡ ಮಹಿಳೆ, ಹಿಂದುಳಿದ ವರ್ಗ ಮಹಿಳೆ, ಹಿಂದುಳಿದ ವರ್ಗ (ಅ) ಮಹಿಳೆ, ಹಿಂದುಳಿದ ವರ್ಗ (ಬಿ) ಮಹಿಳೆ ಮೀಸಲಾತಿಯಡಿ ಗೆಲುವು ಸಾಧಿಸಿರುವ ಮಹಿಳೆಯರಿಗೆ ಈಗ ಭಾಗ್ಯ ತೆರೆದಂತಾಗಿದೆ.
ಅದರಲ್ಲಿಯೂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿರುವ ಪಕ್ಷದ ಮಹಿಳಾ ಸದಸ್ಯರಿಗಂತೂ ಲಕ್ಕೋ ಲಕ್.
ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳಲ್ಲಿನ ಮೇಯರ್ ಅಥವಾ ಅಧ್ಯಕ್ಷ ಸ್ಥಾನಗಳು ಪುರುಷ ಸದಸ್ಯರ ಪಾಲಾಗುವುದು ಖಚಿತವಾದರೂ, ಅಂತಹ ಸ್ಥಳೀಯ ಸಂಸ್ಥೆಗಳಲ್ಲಿನ ಉಪ ಮೇಯರ್ ಹಾಗೂ ಉಪಾಧ್ಯಕ್ಷ ಸ್ಥಾನಗಳು ಮಹಿಳಾ ಸದಸ್ಯರಿಗೇ ಒಲಿಯುವ ಅವಕಾಶಗಳು ಹೆಚ್ಚಿವೆ.
ಹೀಗಾಗಿ ಮಹಿಳೆಯರಿಗೆ ಮೇಯರ್ ಹಾಗೂ ಅಧ್ಯಕ್ಷ ಸ್ಥಾನಗಳು ಕೈತಪ್ಪುವ ಸ್ಥಳೀಯ ಸಂಸ್ಥೆಗಳಲ್ಲಿ ಉಪ ಮೇಯರ್ ಮತ್ತು ಉಪಾಧ್ಯಕ್ಷ ಸ್ಥಾನಗಳು ಒಲಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಾರಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

