ಧಾರವಾಡ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರ್ಯಾಲಿ

Published On :

ಕನ್ನಡಪ್ರಭ  ವಾರ್ತೆ, ಹುಬ್ಬಳ್ಳಿ, ಮೇ 23
ಮಹಿಳಾ ಅತ್ಯಾಚಾರ ತಡೆ ಜಾಗೃತಿಗಾಗಿ ನಗರದ 99 ಕೆನಾನ್ಸ್ ಮೋಟರ್ ಸೈಕಲ್ ಕ್ಲಬ್‌ಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಮೇ 23ರಿಂದ ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿರುವ ಈ ರ್ಯಾಲಿ, ಜೂ. 6ರಂದು ಕಾಶ್ಮೀರದ ಕಾರ್ದುನ್‌ಲಾ ತಲುಪುತ್ತದೆ. ಜೂ. 14ಕ್ಕೆ ಅಮೃತಸರದಲ್ಲಿ ರ್ಯಾಲಿ ಕೊನೆಗೊಳ್ಳುತ್ತದೆ ಎಂದು ಕ್ಲಬ್ ಅಧ್ಯಕ್ಷ ಸಂಜೀವ ಭಾಟಿಯಾ ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕನ್ಯಾಕುಮಾರಿಯಿಂದ ನಾಲ್ವರು ಬೈಕ್ ಸವಾರರು ರ್ಯಾಲಿ ಪ್ರಾರಂಭಿಸಿದ್ದು, ರ್ಯಾಲಿ ಮೇ 25ರ ಸಂಜೆ ಹುಬ್ಬಳ್ಳಿ ತಲುಪುತ್ತದೆ. ಮೇ 26ರಂದು ಬೆಳಗ್ಗೆ 9.30ಕ್ಕೆ ಲ್ಯಾಮಿಂಗ್ಟನ್ ರಸ್ತೆಯ ಹೊಟೇಲ್ ಪಂಜುರ್ಲಿಯಲ್ಲಿ ಮಹಿಳಾ ಅತ್ಯಾಚಾರ ತಡೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಅದೇ ದಿನ ಬೆಳಗ್ಗೆ 10.30ಕ್ಕೆ ರ್ಯಾಲಿಗೆ ಮರು ಚಾಲನೆ ನೀಡಲಾಗುವುದು. ಹುಬ್ಬಳ್ಳಿಯಿಂದ ಹೆಚ್ಚುವರಿಯಾಗಿ 10 ಜನ ಬೈಕ್ ಸವಾರರು ರ್ಯಾಲಿಯಲ್ಲಿ ಪಾಲ್ಗೊಳ್ಳುವರು. ನ್ಯಾಯಾಧೀಶರಾದ ಎಸ್.ಜೆ. ಕೃಷ್ಣ, ಬಸವರಾಜ ಚನ್ನಿಗಟ್ಟಿ ರ್ಯಾಲಿಗೆ ಚಾಲನೆ ನೀಡುವರು. ವುಮೆನ್ಸ್ ಕಾಲೇಜಿನ ಪ್ರಾಚಾರ್ಯೆ ಅನುರಾಧಾ ಹೊಸಕೋಟಿ, ಅಕ್ಕಮಹಾದೇವಿ ಮಾಗಡಿ, ಎಸ್.ವೈ. ಕೋನರಡ್ಡಿ, ಎಸ್.ಎಸ್. ಪವಾಡಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.
ಮುಂಬಯಿ ಹಾಗೂ ದಿಲ್ಲಿಯಿಂದಲೂ ತಲಾ 6 ಜನ ಬೈಕ್ ಸವಾರರು ರ್ಯಾಲಿಯಲ್ಲಿ ಸೇರ್ಪಡೆಗೊಳ್ಳುವರು. ಕನ್ಯಾಕುಮಾರಿಯಿಂದ ಹೊರಟಿರುವ ರ್ಯಾಲಿ ಕೊಚ್ಚಿ, ಕ್ಯಾಲಿಕಟ್, ಕಾಸರಗೋಡ, ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪೂನಾ, ಠಾಣೆ, ಸೂರತ್, ಬರೋಡಾ, ಉದಯಪುರ, ಅಜ್ಮೀರ, ಜಯಪೂರ, ಹೊಸದಿಲ್ಲಿ, ಚಂಡಿಘಡ, ಮನಾಲಿ, ಸಾರ್ಚು, ಲೇಹ ಮಾರ್ಗವಾಗಿ ಕಾರದುಂಗಲಾ ತಲುಪುವುದು. ಮರಳಿ ಲೇಹ ಮೂಲಕ ಕಾರ್ಗಿಲ್, ಶ್ರೀನಗರ, ಜಮ್ಮು, ಪಠಾಣಕೋಟ ಮೂಲಕ ಅಮೃತಸರ ತಲುಪುವುದು. ಜೂ. 18ಕ್ಕೆ ಮುಂಬಯಿಗೆ ಹಾಗೂ ಜೂ. 20ಕ್ಕೆ ಹುಬ್ಬಳ್ಳಿಗೆ ಮರಳಲಾಗುವುದು.
ರ್ಯಾಲಿಯ ಒಟ್ಟು ಮಾರ್ಗ 6 ಸಾವಿರ ಕಿ.ಮೀ.ನಷ್ಟಿದ್ದು, ನಿತ್ಯ 8-10 ತಾಸುಗಳವರೆಗೆ 300-350 ಕಿ.ಮೀ. ದೂರ ಕ್ರಮಿಸಲಾಗುವುದು ಎಂದು ಭಾಟಿಯಾ ವಿವರಿಸಿದರು.
ರ್ಯಾಲಿ ಮಾರ್ಗ ಮಧ್ಯದ ಪ್ರಮುಖ ಸ್ಥಳಗಳಲ್ಲಿ ಅತ್ಯಾಚಾರ ತಡೆ ಕುರಿತು ಜಾಗೃತಿ ಮೂಡಿಸಲು ಸಭೆ ನಡೆಸಲಾಗುವುದು ಹಾಗೂ ಕರಪತ್ರ ಹಂಚಲಾಗುವುದು ಎಂದು ತಿಳಿಸಿದರು. ಕ್ಲಬ್ ಪದಾಧಿಕಾರಿಗಳಾದ ಶ್ರೀನಿವಾಸ ಘೋಕಡೆ, ಪುರುಷೋತ್ತಮ ಕಾಮತ, ಗುರು ಸಾಲಿಮಠ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.