ಪಾಲಕರಿಗೆ ಯುನಿಫಾರ್ಮ್ ಖರೀದಿ ತಲೆಬಿಸಿ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 24
ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಗಿಟ್ಟಿಸಿಕೊಳ್ಳಬೇಕೆಂಬ ಧಾವಂತದಿಂದ ಇದೀಗ ಪಾಲಕರು ಪಾರಾಗಿದ್ದಾರೆ. ಶಾಲೆಗಳ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಪಠ್ಯಪುಸಕ್ತ ಹಾಗೂ ಯುನಿಫಾಮ್ ಖರೀದಿಯ ಚಿಂತೆಯಲ್ಲಿ ಪೋಷಕರು ಮುಳುಗಿದ್ದಾರೆ.
ಹೌದು, ಕೆಲ ಪ್ರತಿಷ್ಠಿತ ಶಾಲೆಗಳು ತಮ್ಮ ಶಾಲೆಗಳ ಯುನಿಫಾಮ್ ಹಾಗೂ ಪಠ್ಯಪುಸಕ್ತಗಳನ್ನು ಇಂತಹದ್ದೆ ಮಳಿಗೆಯಿಂದ ಖರೀದಿಸಬೇಕೆಂದು ಕಟ್ಟಪ್ಪಣೆ ಹೊರಡಿಸಿದ್ದು ಪಾಲಕರ ತಲೆ ಬಿಸಿ ಮಾಡಿದೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಾಲೆಯಲ್ಲಿ ಸೀಟ್ ಸಿಕ್ಕಿತ್ತಲ್ಲ ಎಂಬ ಸಂತಸ ಒಂದೆಡೆ ಇದ್ದರೆ ಮತ್ತೊಂದಡೆ ಆಯಾ ಶಾಲೆಗಳ ಪಠ್ಯಪುಸಕ್ತ ಆಯಾ ಮಳಿಗೆಗಳಿಂದಲ್ಲೇ ಕೇಳಿದಷ್ಟು ಹಣ ನೀಡಿ ಖರೀದಿಸಲು ಬಡ ಪಾಲಕರು ಒದಾಡ್ಡುವಂತಾಗಿದೆ.
ಯುನಿಫಾರ್ಮ್ ಬಂದಿಲ್ಲ!: ಮೇ 30ರಿಂದ ಬಹುತೇಕ ಆಂಗ್ಲ ಮಾಧ್ಯಮಗಳು ಆರಂಭಗೊಳ್ಳುತ್ತಿವೆ. ಕೆಲವಷ್ಟು ಶಾಲೆಗಳಲ್ಲಿ ಪಠ್ಯಪುಸಕ್ತ ತಾವೇ ವಿತರಿಸುತ್ತಿರುವುದು ಸ್ವಲ್ಪ ಮಟ್ಟಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ನಿರಾಳವಾಗಿಸಿದೆ. ಆದರೆ, ಸಮವಸ್ತ್ರ ಮಾತ್ರ ಕಡ್ಡಾಯವಾಗಿ ಎಲ್ಲರೂ ಆಯಾ ಶಾಲೆಗಳು ಸೂಚಿಸಿರುವ ಮಳಿಗೆಗಳಿಂದಲೇ ಖರೀದಿಸಬೇಕಾಗಿದೆ. ಆದರೆ, ಆಯಾ ಶಾಲೆಗಳ ಸಮವಸ್ತ್ರ ವಿತರಿಸುವ ಟೆಂಡರ್ ಪಡೆದಿರುವ ಮಳಿಗೆಗಳಲ್ಲಿ ಇನ್ನೂ ಸಮವಸ್ತ್ರ ಬಟ್ಟೆಯೇ ಸರಬರಾಜು ಆಗಿಲ್ಲ. ಇದರಿಂದಾಗಿ ನಿತ್ಯವೂ ಪಾಲಕರು ಬಟ್ಟೆ ಮಳಿಗೆಗಳಿಗೆ ಎಡತಾಕುವಂತಾಗಿದೆ. ಶಾಲೆ ಆರಂಭಕ್ಕೆ ಕೇವಲ 6 ದಿನಗಳ ಮಾತ್ರ ಬಾಕಿ ಉಳಿದಿವೆ. ಬಟ್ಟೆ ಖರೀದಿಸಿ ಮಕ್ಕಳಿಗೆ ಹೋಲಿಸಿಕೊಡುವುದು ಯಾವಾಗ ಎಂಬ ಚಿಂತೆ ಪಾಲಕರನ್ನು ಕಾಡತೊಡಗಿದೆ.
ಮೊದಲೇ ಬುಕ್ಕಿಂಗ್: ಆಯಾ ಶಾಲೆಗಳ ಸಮವಸ್ತ್ರಗಳು ಇನ್ನೂ ಸರಬರಾಜು ಆಗದೇ ಇರುವುದರಿಂದ ಪಾಲಕರು, ತಮ್ಮ ಮಕ್ಕಳ ಶಾಲಾ ಬಟ್ಟೆಗಳನ್ನು ಒಂದೇ ದಿನದಲ್ಲಿ ಹೋಲಿದು ಕೊಡುವಂತೆ ಈಗಲೇ ಟೇಲರ್ಗಳಲ್ಲಿ ಬುಕ್ಕಿಂಗ್ ಮಾಡುತ್ತಿರುವುದು ಕಂಡು ಬರತೊಡಗಿದೆ. ಈ ಬೆಳವಣಿಗೆ ಟೇಲರಿಂಗ್ ದಂಧೆಯಲ್ಲಿರುವವರ ಮೊಗದಲ್ಲಿ ಮಂದ ಹಾಸ ಮೂಡಿಸಿದೆ.
ಭರ್ಜರಿ ಮಾರಾಟ: ಶಾಲೆಗಳ ಆರಂಭಕ್ಕೆ ನಾಲ್ಕಾರು ದಿನಗಳ ಬಾಕಿ ಇರುವಾಗಲೇ ಮಹಾನಗರದ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ಕಂಡು ಬರುತ್ತಿದೆ. ಶಾಲಾ ಬ್ಯಾಗ್, ವಾಟರ್ ಬಾಟಲಿ, ಶೂಸ್ ಅಂಗಡಿಗಳಲ್ಲಿ ಪಾಲಕರು ಮಕ್ಕಳೊಂದಿಗೆ ಸರದಿಯಲ್ಲಿ ನಿಂತು ಖರೀದಿಸುತ್ತಿರುವುದು ಸಾಮಾನ್ಯವಾಗಿದೆ. ಬಿಸಿಲಿನ ಶೆಕೆಯಿಂದ ಅವಳಿನಗರದಲ್ಲಿ ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಮಂದವಾಗಿರುತ್ತಿದ್ದು ಸಂಜೆಯಿಂದ ರಾತ್ರಿಯವರೆಗೆ ಭರ್ಜರಿ ವಹಿವಾಟು ನಡೆಯುತ್ತಿದೆ ಎಂದು ದುರ್ಗದಬೈಲ್ ಪ್ರದೇಶದ ಬಟ್ಟೆ ವ್ಯಾಪಾರ ಶಾ ಮಾಣಿಕಲಾಲ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಪ್ರವೇಶ ಗೊಂದಲ: ಮಕ್ಕಳಿಗೆ ಉತ್ತಮ ಶಾಲೆಗಳಿಗೆ ಸೇರಿಸುವ ಮೂಲಕ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಪಾಲಕರು, ತಾವು ಅಪೇಕ್ಷಿಸಿದ ಶಾಲೆಗಳಲ್ಲಿ ಮಕ್ಕಳಿಗೆ ಸೀಟ್ ದೊರಕಿಸಿಕೊಡಲು ಈಗಲೂ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿದ್ದಾರೆ. ಕೆಲ ಪಾಲಕರಂತೂ ತಾವು ಹೊಂದಿರುವ ಪಾಲಿಟಿಕಲ್ ಪಾವರ್ ಉಪಯೋಗಿಸಿಕೊಳ್ಳಲು ಮಂತ್ರಿ ಹಾಗೂ ಶಾಸಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಆಯಾ ಶಾಲೆಗಳಲ್ಲಿ ಪ್ರವೇಶ ದೊರಕದೇ ಇದ್ದಲ್ಲಿ ತಮ್ಮ ಮಗುವಿನ ಒಂದು ವರ್ಷ ಅನಾಯಾಸವಾಗಿ ಹಾಳಾಗಲಿದೆ ಎಂಬ ದುಗುಡವೂ ಬಹುತೇಕ ಪಾಲಕರಿಗಿದೆ.
ಅಸೆಡ್ಡೆ ಭಾವನೆ: ಸರ್ಕಾರಿ ಶಾಲೆಗಳಲ್ಲಿ ಕಲೆಯುವ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪೈಪೋಟಿ ನೀಡುವಂತೆ ಇದೀಗ ಸರ್ಕಾರಿ ಶಾಲೆಗಳ ಕಲಿಕೆ ಗುಣಮಟ್ಟ ಸುಧಾರಿಸಲಾಗಿದೆ ಎಂದರೆ ತಪ್ಪಾಗಲಾರದು. ಆದರೆ, ಪಾಲಕರು ಮಾತ್ರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಆಂಗ್ಲ ಮಾಧ್ಯಮ ಶಾಲೆಗಳತ್ತಲೇ ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ.
ಖಾಸಗಿ ಶಾಲೆಗಳು ವಿಧಿಸುವ ದೊಡ್ಡ ಪ್ರಮಾಣ ಶುಲ್ಕ ಭರಿಸಲು ಪಾಲಕರು ಸಾಲಸೋಲಕ್ಕೂ ಮುಂದಾಗುತ್ತಿದ್ದಾರೆ. ಅದೇ ಸರ್ಕಾರಿ ಶಾಲೆಗಳಲ್ಲಿನ ಅತಿ ಕಡಿಮೆ ಶುಲ್ಕ ಭರಿಸಿ ಕನ್ನಡಪ್ರೇಮ ಮೆರೆಯಲು ಪಾಲಕರು ಮುಂದಾಗದೆ ಇರುವುದು ಆಂಗ್ಲ ಭಾಷೆ ಪ್ರೇಮ ನಮ್ಮ ಮೇಲೆ ಎಷ್ಟೊಂದು ಮಟ್ಟಿಗೆ ಪ್ರಭಾವ ಬೀರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆ ಏನೇ ಇರಲಿ, ಮತ್ತೆ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದು ಎಲ್ಲ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಗಮನಾರ್ಹ ಸಾಧನೆಗೈದು ಆಯಾ ಶಾಲೆ, ಕುಟುಂಬ, ನಾಡು ಹಾಗೂ ದೇಶಕ್ಕೆ ಅದ್ಭುತ್ ಕೊಡುಗೆ ನೀಡಲಿ ಎಂಬುದೇ 'ಕಪ್ರ' ಹಾರೈಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

