ಧಾರವಾಡ

ಧಾರವಾಡದಲ್ಲಿ ವಾರಕ್ಕೊಮ್ಮೆ ನೀರು!

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 26
ನೀರಿಗಾಗಿ ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದೆ. ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಕಣ್ಮರೆಯಾಗಿದೆ.
ಮಲೆನಾಡಿನ ಸೆರಗಿನಲ್ಲಿರುವ ಧಾರವಾಡ ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ. ಇಲ್ಲೂ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ತಗ್ಗುತ್ತಿದ್ದು, ನಗರಗಳು ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲೂ ಹನಿ ನೀರಿಗಾಗಿ ಪರದಾಟ ಶುರುವಾಗಿದೆ. ದಿನಕ್ಕೆ ಅಥವಾ ಎರಡು ದಿನಕ್ಕೊಮ್ಮೆ ನಲ್ಲಿಯಲ್ಲಿ ಸುರಿಯುತ್ತಿದ್ದ ನೀರು ಈಗ ವಾರದ ಅತಿಥಿ. ಧಾರವಾಡ ಹಾಗೂ ಹುಬ್ಬಳ್ಳಿ ನಗರಗಳ ಜನತೆ ಹೇಗೂ ದೂರದ ಸವದತ್ತಿಯ ಮಲಪ್ರಭೆಯಿಂದ ಜೀವಜಲ ಪಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಕಿತ್ತಾಟ ಶುರುವಾಗಿದೆ. ಕೆಲ ಗ್ರಾಮಗಳಲ್ಲಿ ಸಾವಕಾಶವಾಗಿ ಪ್ರತಿಭಟನೆಗಳು (ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ, ಮನಸೂರು) ಆರಂಭವಾಗಿವೆ. ಗ್ರಾಮಗಳಲ್ಲಿ ಜಲಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದು, ಮಳೆಯ ಬರುವಿಕೆಗಾಗಿ ಜನತೆ ಹಾತೊರೆಯುತ್ತಿದ್ದಾರೆ. ಬೇಗನೆ ಮಳೆಯಾಗದಿದ್ದರೆ ಗ್ರಾಮೀಣ ಜನತೆ ತೀವ್ರ ಜಲಕ್ಷಾಮ ಅನುಭವಿಸುವುದರಲ್ಲಿ ಸಂದೇಹವಿಲ್ಲ.
ಎಲ್ಲೆಲ್ಲಿ ಹಾಹಾಕಾರ: ಜಿಲ್ಲೆಯ ನವಲಗುಂದ ತಾಲೂಕು ಹೊರತು ಪಡಿಸಿ ನಾಲ್ಕೂ ತಾಲೂಕುಗಳು ಕೊಳವೆ ಬಾವಿ ನೆಚ್ಚಿಕೊಂಡಿವೆ. ಆದರೆ, ಕಳೆದ ಎರಡು ವರ್ಷಗಳಿಂದ ಬರಗಾಲದ ಪರಿಣಾಮ ನಾಲ್ಕು ತಾಲೂಕುಗಳಲ್ಲಿ ಕೊಳವೆ ಬಾವಿ ಕೈಕೊಟ್ಟಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನವಲಗುಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕೆರೆಗಳಿದ್ದು, ಈ ಕೆರೆಗಳಿಗೆ ಮಲಪ್ರಭಾ ಕಾಲುವೆ ಮೂಲಕ ನೀರು ಹರಿಸಿ ಇಲ್ಲಿಯ ಜನರನ್ನು ಸದ್ಯಕ್ಕೆ ಸಂತೈಸಲಾಗಿದೆ. ಆದರೆ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ತಾಲೂಕುಗಳ ಹಾಗೂ ಧಾರವಾಡ ತಾಲೂಕಿನ ಅಳ್ನಾವರ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಬಾಯಿ ಬಾಯಿ ಬಿಡುತ್ತಿದ್ದಾರೆ. ಕುಂದಗೋಳ ಹಾಗೂ ಧಾರವಾಡ ತಾಲೂಕಿನ ತಲಾ 14 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಗತಿಯಲ್ಲಿದ್ದು, ಶಾಶ್ವತ ಕುಡಿಯುವ ನೀರು ಈ ತಾಲೂಕುಗಳ ಜನತೆಗೆ ಕನಸಿನ ಮಾತಾಗಿದೆ.
ರು. ಸಾವಿರಕ್ಕೆ ಟ್ಯಾಂಕ್ ನೀರು: ಕುಂದಗೋಳ ತಾಲೂಕಿನ ಸಂಶಿ ಜಿಪಂ ವ್ಯಾಪ್ತಿಯ ಯರಿನಾರಾಯಣಪುರ, ಯರಗುಪ್ಪಿ, ಚಾಕಲಬ್ಬಿ ಸೇರಿದಂತೆ 17 ಗ್ರಾಮಗಳಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು,ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮದ ಕೆಲ ಕುಟುಂಬಗಳಿಗೆ ಟ್ಯಾಂಕರ್ ನೀರು ಸಾಲದ್ದರಿಂದ ದೂರದ ಕುಂದಗೋಳ ಹಾಗೂ ಹುಬ್ಬಳ್ಳಿ ಪಟ್ಟಣಗಳಿಗೆ ಹೋಗಿ ಒಂದು ಟ್ಯಾಂಕರ್‌ಗೆ  ರು. 1 ಸಾವಿರ ತೆತ್ತು ನೀರು ತರುತ್ತಿದ್ದಾರೆ. ಧಾರವಾಡ ತಾಲೂಕಿನ ಅಳ್ನಾವರ ಪೂರ್ತಿ ಮಲೆನಾಡು ಪ್ರದೇಶ. ಆದರೆ, ಈ ಬಾರಿ ಈ ಪಟ್ಟಣಕ್ಕೆ ನೀರುಣಿಸುವ ಡೌಗಿ ನಾಲಾ ಹಾಗೂ ಹುಲಿಕೇರಿ ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಕಲಘಟಗಿ ತಾಲೂಕುಗಳ ಜನತೆ ಸಂಪೂರ್ಣ ಕೊಳವೆ ಬಾವಿ ನೆಚ್ಚಿದ್ದು, ಈಗ ಕೊಳವೆ ಬಾವಿ ಕೈಕೊಟ್ಟಿವೆ. ಎಷ್ಟು ಆಳ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕ ನೀರು ಕುಡಿಯಲು ಅಯೋಗ್ಯ. ಸೂಳಿಗಟ್ಟಿ ಗ್ರಾಮ ಪಂಚಾಯ್ತಿ ಕಂದಲಿ ಗ್ರಾಮದಲ್ಲಿ ಕೊಳವೆ ಬಾವಿ ಕೆಟ್ಟು ಜನತೆ ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಇನ್ನು ಮೊಸಳಿಕಟ್ಟಿ, ಮಡಕಿಹೊನ್ನಳ್ಳಿ, ಬಮ್ಮಿಗಟ್ಟಿ, ಹುಲ್ಲಂಬಿ ಗ್ರಾಮಗಳಲ್ಲಿ ನೀರಿಗೆ ಪರದಾಟ. ನೀರಿಲ್ಲದ್ದರಿಂದ ಅಶುದ್ಧ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾದ ಘಟನೆಗಳು ಇಲ್ಲಿ ಹೊಸತೇನಲ್ಲ.
ಕೊಳವೆ ಬಾವಿ ನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಿ ನೀರು ಸರಬರಾಜು ಮಾಡುವ ಧಾರವಾಡದ ಅನೇಕ ಗ್ರಾಮಗಳಲ್ಲಿ ಟ್ಯಾಂಕ್ ಸ್ವಚ್ಚತೆ ಮಾಡದ್ದರಿಂದ ಹತ್ತಾರು ಜನರಿಗೆ ವಾಂತಿ-ಬೇಧಿ ಶುರುವಾದ ಉದಾಹರಣೆಗಳು ಆಗಿವೆ. ತಡಕೋಡ ಗ್ರಾಮದಲ್ಲಿ ಇತ್ತೀಚೆಗೆ ಜಾತ್ರಾ ಸಂದರ್ಭದಲ್ಲಿ ಅಶುದ್ಧ ನೀರು ಸೇವಿಸಿ ಓರ್ವ ವೃದ್ಧ ಮೃತನಾಗಿದ್ದಲ್ಲದೇ, ಮಕ್ಕಳು ಹಾಗೂ ಮಹಿಳೆಯರು ಆಸ್ಪತ್ರೆ ಸೇರಬೇಕಾಯಿತು.
ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಬರಗಾಲದ ಛಾಯೆ ಇದ್ದು, ಈ ಬಾರಿ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರುವುದು ಗ್ಯಾರಂಟಿ. ಇದಕ್ಕಿಂತ ಹೆಚ್ಚಾಗಿ ದನಕರುಗಳಿಗೆ ಹಾಗೂ ನಿತ್ಯ ಬಳಕೆಗೆ ನೀರಿಲ್ಲ. ಜಿಲ್ಲಾಡಳಿತ ಪ್ರತಿ ವರ್ಷ ನೀರಿನ ವಿಷಯದಲ್ಲಿ ತಾತ್ಕಾಲಿಕ ಪರಿಹಾರ ನೀಡುತ್ತಿದೆಯೇ ಹೊರತು ಶಾಶ್ವತ ಪರಿಹಾರ ನೀಡುವಲ್ಲಿ ಹಿಂದೆ ಬೀಳುತ್ತಿರುವುದು ಬೇಸರದ ಸಂಗತಿ.

ನವಲಗುಂದ ತಾಲೂಕಿನ ಎಲ್ಲ ಗ್ರಾಮಗಳ ಕೆರೆಗಳಿಗೆ ಮಲಪ್ರಭಾ ಕಾಲುವೆ ಮೂಲಕ ಜೂನ್ ಅಂತ್ಯದ ವರೆಗೂ ಸಾಕಾಗುವಷ್ಟು ನೀರು ಹರಿಸಲಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಮಂಟೂರು ಕೆರೆಯಲ್ಲಿ ಮಲಪ್ರಭಾ ನೀರು ಹರಿಸಿ 10 ಗ್ರಾಮಗಳ ಬವಣೆ ತೀರಿಸಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಕೊಳವೆ ಬಾವಿ ನೀರು ಅನಿವಾರ್ಯವಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮಾರ್ಚ್ ತಿಂಗಳಲ್ಲಿ ಸರ್ಕಾರದಿಂದ ಬಂದ ತಲಾ 60 ಲಕ್ಷ ಬಳಸಿಕೊಂಡು ಒಟ್ಟು 69 ಕೊಳವೆ ಬಾವಿ ಕೊರೆಯಿಸಲಾಗಿದೆ. ಕೊಳವೆ ಬಾವಿಗಳ ನೀರಿನ ಅಧಿಕ ಬಳಕೆಯಿಂದ ಅಂತರ್ಜಲ ಮಟ್ಟ ಕುಸಿದ ಕಾರಣ ಇಲ್ಲಿ ಕೈ ಪಂಪ್ ಮೂಲಕವೇ ನೀರು ಕೊಡಲಾಗುತ್ತಿದೆ. ಕುಂದಗೋಳ 15 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅತೀ ತೊಂದರೆ ಇರುವ ಯರಿನಾರಾಯಣಪುರ ಹಾಗೂ ಕಿರೇಸೂರಗಳಲ್ಲಿ ಸದ್ಯದಲ್ಲಿಯೇ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಯಾಗಲಿದೆ. ಧಾರವಾಡ ತಾಲೂಕಿನ ಅಳ್ನಾವರ ಹಾಗೂ ದೇವರ ಹುಬ್ಬಳ್ಳಿಯಲ್ಲಿ ನೀರಿನ ಸಮಸ್ಯೆ ಕೇಳಿ ಬಂದಿದ್ದು, ಅಲ್ಲಿಯೂ ಪರಿಹಾರ ಕಂಡುಕೊಳ್ಳಲಾಗಿದೆ.
- ಪಿ.ಎ. ಮೇಘಣ್ಣವರ (ಜಿಪಂ ಸಿಇಓ)
ಭೂಮಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ಅದು ಸಿಗದೆ ಹೋಗುತ್ತದೆ, ಬರಗಾಲ ಹೆಚ್ಚಾಗುತ್ತದೆ. ಧಾರವಾಡದಲ್ಲಿ ಪ್ರತಿ ವರ್ಷ ಅಂದಾಜು 800 ಮಿ.ಮೀ. ಮಳೆಯಾಗುತ್ತದೆ. ಈ ನೀರನ್ನು ಯಾರೊಬ್ಬರೂ ಸರಿಯಾಗಿ ಹಿಡಿದಿಟ್ಟುಕೊಳ್ಳದೇ ಶೇ. 80ರಷ್ಟು ನೀರು ಪೋಲಾಗಿ ಹೋಗುತ್ತಿದೆ. ಈ ಕಾರಣದಿಂದ ಎಲ್ಲೆಡೆ ನೀರಿಗೆ ಹಾಹಾಕಾರ ಎದ್ದಿದೆ. ಅಲ್ಲದೇ, ಕೊಳವೆ ಬಾವಿ ಕೊರೆಯಿಸಿ ನೀರು ತೆಗೆಯುವುದೇ ಮುಖ್ಯವಲ್ಲ. ಅಂತರ್ಜಲ ಮಟ್ಟ ಹೆಚ್ಚಿಸಬೇಕಿದೆ. ಮಳೆನೀರು ಸಂಗ್ರಹ ಮತ್ತು ಛಾವಣಿ ನೀರು ಸಂಗ್ರಹ ಮಾಡಬೇಕು. ಕೇವಲ ನೀರಿನ ಸಂಗ್ರಹವೇ ಜಲಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆ ಗಮನ ಕೊಡಬೇಕು. ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕ ಜಲ ಸರಬರಾಜು ವ್ಯವಸ್ಥೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು, ನೀರು ಬಳಕೆಯ ಬಗ್ಗೆ ನಿರಂತರವಾಗಿ ಜನಜಾಗೃತಿ ಮಾಡುವುದು ಈಗ ಮಾಡಬೇಕಾದ ಅಗತ್ಯ.
- ಪ್ರಕಾಶ ಭಟ್, ಜಲತಜ್ಞ, ಧಾರವಾಡ

 ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.