ಪಾಲಿಕೆಗೆ ನಿದ್ರೆ: ನಾಗರಿಕರೇ ರಸ್ತೆ ನಿರ್ಮಿಸಿದರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 4
ಮಹಾನಗರ ಪಾಲಿಕೆ ಅಧಿಕಾರಿ ವರ್ಗ ಗಡದ್ದಾಗಿ ನಿದ್ದೆಗೆ ಶರಣಾಗಿದೆ. ಇದಕ್ಕೆ ತಾಜಾ ಉದಾಹರಣೆ ಕಳೆದ ಹಲವಾರು ತಿಂಗಳಿಂದ ಧೂಳು ತಿನ್ನಿಸುತ್ತಿರುವ ಪಾಲಿಕೆಯ ಬೇಜವಾಬ್ದಾರಿಗೆ ಬೇಸತ್ತು ತಾವೇ ಸ್ವತಃ ರಸ್ತೆ ನಿರ್ಮಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹುಬ್ಬಳ್ಳಿ ಮೂರುಸಾವಿರ ಮಠದ ಹತ್ತಿರ ಇರುವ ತಾಡಪತ್ರಿ ಓಣಿಯ ನಿವಾಸಿಗಳು ಮತ್ತು ವ್ಯಾಪಾರಿಗಳು ತಮ್ಮ ಜೇಬಿನಿಂದ ಹಣ ಹಾಕಿ ರಸ್ತೆ ರಿಪೇರಿ ಮಾಡಿಸಿಕೊಂಡು ಧೂಳಿನಿಂದ ಸ್ವಲ್ಪ ಮುಕ್ತಿ ಪಡೆದಿದ್ದಾರೆ. ಈ ಕುರಿತು ನಿವಾಸಿಗಳನ್ನು ಕೇಳಿದರೆ ಒಂದು ವರ್ಷದ ಹಿಂದೆ ಕುಡಿಯುವ ನೀರಿನ ಪೈಪ್ಲೈನ್ ಹಾಳಾಗಿದ್ದಕ್ಕೆ ರಸ್ತೆ ಅಗೆದಿದ್ದ ಜಲ ಮಂಡಳಿ ಮತ್ತೆ ರಿಪೇರಿ ಮಾಡುವ ಗೋಜಿಗೆ ತಲೆ ಹಾಕಿರಲಿಲ್ಲ. ರಸ್ತೆಗಳನ್ನು ಸರಿಯಾಗಿಟ್ಟುಕೊಳ್ಳಬೇಕಿದ್ದ ಪಾಲಿಕೆಗೂ ಕೆಲಸ ಬೇಡವಾಗಿತ್ತು. ಆದರೂ ಪಟ್ಟು ಬಿಡದೇ ಪೈಪ್ಲೈನ್ ರಿಪೇರಿ ಮಾಡಿದ್ದ ಗುತ್ತಿಗೆದಾರರನ್ನು ಹಿಡಿದು ರಸ್ತೆ ರಿಪೇರಿ ಮಾಡಿಸಿಕೊಂಡಿದ್ದರು. ಆದರೆ ಆಗಿದ್ದೇನು? ಕೆಲವೇ ದಿನಗಳಲ್ಲಿ ರಸ್ತೆ ಕಿತ್ತೊಯಿತು. ಮಳೆಗಾಲದಲ್ಲಿ ರಾಡಿ ಸಹಿಸಿಕೊಂಡಿದ್ದ ಇಲ್ಲಿನ ನಿವಾಸಿಗಳಿಗೆ ಧೂಳಿನ ಸಹವಾಸ ಸಾಕು ಸಾಕಾಗಿದೆ.
ರಸ್ತೆ ರಿಪೇರಿ ಮಾಡಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ, ವಾರ್ಡ್ ಸದಸ್ಯ ಡಿ.ಕೆ. ಚವ್ಹಾಣ ಮನವಿ ಮಾಡಿಕೊಂಡರೂ ಉಪಯೋಗವಾಗಲಿಲ್ಲ. ಇವರನ್ನು ನೆಚ್ಚಿಕೊಂಡು ಕುಳಿತರೇ ಏನೂ ಆಗಲಿಕ್ಕಿಲ್ಲ ಎಂದು ತೀರ್ಮಾನಕ್ಕೆ ಬಂದ ತಾಡಪತ್ರಿಯ ಓಣಿಯ ಹಿರಿಯರು ಸುತ್ತಲಿನ ನಿವಾಸಿಗಳು ಮತ್ತು ವ್ಯಾಪಾರಿಗಳಿಂದ ದೇಣಿಗೆ ಸಂಗ್ರಹಿಸಿ ದೀಪಾವಳಿ ಮುನ್ನಾದಿನವೇ 30 ಅಡಿ ಉದ್ದದ ರಸ್ತೆಗೆ ಸಿಮೆಂಟ್ ಹಾಕಿ ದುರಸ್ತಿ ಮಾಡಿದ್ದಾರೆ.
ಮನವಿಗಳ ಮಹಾಪೂರ: ತಾಡಪತ್ರಿ ಓಣಿಯಲ್ಲಿ ಧೂಳಿನ ಸಮಸ್ಯೆ ವಿಪರೀತವಾಗಿದ್ದು, ಬಟ್ಟೆಗಳನ್ನು ಆವರಿಸುತ್ತಿರುವ ಧೂಳಿನಿಂದಾಗಿ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಅಲ್ಲದೇ ಆರೋಗ್ಯದ ಸಮಸ್ಯೆ ಕೂಡ ಕಾಡುತ್ತಿದೆ ಎಂದು ನಿವಾಸಿಗಳು ಪಾಲಿಕೆ ಅಧಿಕಾರಿಗಳಿಗೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಈಗ ಮಾಡೋಣ, ನಾಳೆ ಮಾಡೋಣ, ಸ್ವಲ್ಪ ದಿನ ತಡೀರಿ ಈ ಮಾತುಗಳನ್ನು ಕೇಳಿದ್ದೆ ಬಂತು ವಿನಃ ಪಾಲಿಕೆ ಅಧಿಕಾರಿಗಳು ರಸ್ತೆ ರಿಪೇರಿ ಹೋಗಲಿ ಅತ್ತ ಕಣ್ಣು ಕೂಡ ಹಾಕದಿರುವುದೇ ತಾಡಪತ್ರಿ ಓಣಿಯ ಹಿರಿಯರಿಗೆ ಬೇಸರ ತರಿಸಿದ್ದಂತೂ ನಿಜ. ಪಾಲಿಕೆ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಬಗ್ಗೆ ಹೇಳಿದ್ದು ಅಲ್ಲದೇ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೂ ಅನುಭವಿಸುತ್ತಿರುವ ಧೂಳಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಕೂಡ ಪಾಲಿಕೆ ಅಧಿಕಾರಿಗಳಿಗೆ ಹೇಳಿ ರಿಪೇರಿ ಮಾಡಿಸೋಣ ಎಂದಿದ್ದಾರೆ. ಅವರ ಮಾತಿಗೂ ಅಧಿಕಾರಿ ವರ್ಗ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲದಿರುವುದು ವಿಪರ್ಯಾಸದ ಸಂಗತಿ.
ಸಹವಾಸ ಬೇಡ: ಕಳೆದ ಒಂದೂವರೆ ವರ್ಷದ ಹಿಂದೆ ರಿಪೇರಿಗೆ ಅಗೆದ ರಸ್ತೆ ಸದ್ಯಕ್ಕಂತೂ ದುರಸ್ತಿಯಾಗಲಿಕ್ಕಿಲ್ಲ ಎಂದು ಅರಿತ ನಿವಾಸಿಗಳು, ಅಂದಾಜು ಎರಡೂವರೆ-ಮೂರು ಸಾವಿರ ವೆಚ್ಚ ಮಾಡಿ, ಸಿಮೆಂಟ್ ಹಾಕಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಧೂಳಿನ ಸಮಸ್ಯೆ ಕಡಿಮೆಯಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ ಊಟವಾಲೆ, ದೀಪಾವಳಿ ನಿಮಿತ್ತ ರಸ್ತೆ ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಧೂಳಿನ ಸಮಸ್ಯೆ ಕೊನೆಗಾಣಿಸಬೇಕು ಎಂದು ಓಣಿಯ ಹಿರಿಯರೊಂದಿಗೆ ಸೇರಿಕೊಂಡು ಸಿಮೆಂಟ್, ಮರಳು ತರಿಸಿ ರಿಪೇರಿ ಮಾಡಿದೇವು. ನಾನೇ ಇಬ್ಬರು ಕಾರ್ಮಿಕರನ್ನು ಮತ್ತು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ನಾಲ್ವರನ್ನು ಕೆಲಸಕ್ಕೆ ನಿಯೋಜಿಸಿದ್ದರಿಂದ ರಸ್ತೆ ರಿಪೇರಿ ಕಂಡಿದೆ ಎಂದು ಹೇಳಿದರು.
ಪಾಲಿಕೆಗೆ ನಿದ್ದೆ ಸಂಭ್ರಮ
ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎನ್ನುವಂತೆ ಪಾಲಿಕೆಗೆ ಅಧಿಕಾರಿ ವರ್ಗಕ್ಕೆ ಕೆಲಸ ಬೇಡವಾಗಿತ್ತು. ಅದಕ್ಕೆ ತಕ್ಕಂತೆ ಪಾಲಿಕೆಯಲ್ಲೂ ಜನಪ್ರತಿನಿಧಿಗಳು ಇಲ್ಲ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಇದಕ್ಕೆ ಕಿರೀಟವಿಟ್ಟಂತೆ ಪಾಲಿಕೆಗೆ ಐಎಎಸ್ ಅಧಿಕಾರಿ ಬೇಕು ಎಂದು ಗೊಗರೆದಿದ್ದವರಿಗೆ ಯಾಕಾದರೂ ಬೇಕಪ್ಪಾ ಐಎಎಸ್ ಅಧಿಕಾರಿ ಎನ್ನುವಂತಾಗಿದೆ. ಏಕೆಂದರೆ ಸದ್ಯ ಕಮಿಷನರ್ ಆಗಿರುವ ರಮಣದೀಪ್ ಚೌಧರಿ ಅವರಿಗೆ ಪಾಲಿಕೆಯ ಅಧಿಕಾರಿಗಳ ಕೆಲಸಕ್ಕೆ ಬೇಸತ್ತಿದ್ದಾರೋ ಏನೋ ಗೊತ್ತಿಲ್ಲ. ಅಧಿಕಾರ ಸ್ವೀಕರಿಸಿದ ಎರಡು ದಿನಗಳಲ್ಲೇ ನಗರ ಪ್ರದಕ್ಷಿಣೆ ಮಾಡಿದ ಕಮಿಷನರ್ ಇದೀಗ ತಮ್ಮ ಕಚೇರಿ, ಮೀಟಿಂಗ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿನಃ ಅವಳಿ ನಗರದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಚುನಾಯಿತ ಪಾಲಿಕೆ ಸದಸ್ಯರಿಗೂ ರಮಣದೀಪ್ ಚೌಧರಿ ಅವರ ಕಾರ್ಯಶೈಲಿ ಇಷ್ಟವಾಗುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

