ಜಿಮ್ಖಾನ ಮೈದಾನ: ವಾದ ಆಲಿಸಿದ ಡಿಸಿ
ಹುಬ್ಬಳ್ಳಿ: ದೇಶಪಾಂಡೆ ನಗರದಲ್ಲಿರುವ ಕರ್ನಾಟಕ ಜಿಮ್ಖಾನ ಮೈದಾನಕ್ಕೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಬುಧವಾರ ಭೇಟಿ ನೀಡಿ ಉದ್ಭವವಾಗಿರುವ ವಿವಾದದ ಕುರಿತು ಉಭಯ ಬಣಗಳ ವಾದ ಆಲಿಸಿದರು.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ತಾವು ಈ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಶುಕ್ಲಾ, ಉಭಯ ಬಣಗಳು ನೀಡಿರುವ ದಾಖಲೆ ಪಡೆದಿದ್ದೇನೆ. ಅಲ್ಲದೆ, ಎರಡೂ ಬಣಗಳ ವಾದ ಆಲಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಇಷ್ಟರಲ್ಲಿಯೇ ವರದಿ ನೀಡುತ್ತೇನೆಂದು ಮಾಧ್ಯಮಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ಎರಡೂ ಬಣಗಳೊಂದಿಗೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದರು. ಕ್ಲಬ್ ಬಚಾವೋ ಸಮಿತಿಯ ಸದಸ್ಯರು ಮೈದಾನದಲ್ಲಿ ತಲೆ ಎತ್ತಿರುವ ಕಟ್ಟಡ ಅಕ್ರಮವಾಗಿದೆ. ಎಲ್ಲ ನೀತಿ ನಿಯಮ ಗಾಳಿಗೆ ತೂರಿ ಕಟ್ಟಡ ಕಟ್ಟಲಾಗಿದೆ. ಹುಡಾ ಅನುಮತಿಯನ್ನೂ ಜಿಮಖಾನ್ ಕ್ಲಬ್ ಸದಸ್ಯರು ಪಡೆದಿಲ್ಲ ಎಂದು ಸಂಗತಿಯನ್ನು ದಾಖಲೆ ಸಮೇತ ಪ್ರಸ್ತುತ ಪಡಿಸಿದರು. ಈ ಸಮಯದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇವರೊಟ್ಟಿಗೆ ಸಿಬಿಎಲ್ ಹೆಗಡೆ, ಮನೋಜ ಹಾನಗಲ್, ಡಾ. ಮಹೇಶ ನಾಲವಾಡ ಶರದ್ ಭಗತ್, ಅಮೃತ ಇಜಾರೆ ಇದ್ದರು.
ಇದೇ ವೇಳೆ ಜಿಮ್ಖಾನಾ ಕ್ಲಬ್ ಸದಸ್ಯರಾದ ರಮೇಶ ಶೆಟ್ಟಿ, ವೀರಣ್ಣ ಸವಡಿ, ಡಾ. ಸುಭಾಶ ಜೋಶಿ, ನಂದಕುಮಾರ, ಜಯರಾಮ ಶೆಟ್ಟಿ ತಾವು ಕಾನೂನು ಉಲ್ಲಂಘಿಸಿಲ್ಲ. ಸುಖಾಸುಮ್ಮನೇ ತಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಕೆಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಒಪ್ಪಿಸುವ ಮೂಲಕ ಹೇಳಿಕೆ ನೀಡಿದರು. ಒಂದು ಹಂತದಲ್ಲಿ ರಮೇಶ ಶೆಟ್ಟಿ ಈ ವಿಷಯವಾಗಿ ತಮಗೆ ಬ್ಲಾಕ್ಮೇಲೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಮೈದಾನ ಬಚಾವೋ ಸಮಿತಿಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಸಮಯ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಶುಕ್ಲಾ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಎರಡೂ ಬಣಗಳ ಹೇಳಿಕೆ ದಾಖಲಿಸಿ ಹೊರಟು ಹೋದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

