ರೈತಾಭಿವೃದ್ಧಿಗಿವೆ ನೂರೆಂಟು ಯೋಜನೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 8
ತಾನು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯದಿರುವುದು, ಕೃಷಿ ಕೂಲಿ ಕಾರ್ಮಿಕರ ಕೊರತೆ ಹಾಗೂ ಹವಾಮಾನ ವೈಪರೀತ್ಯದಂತಹ ಹತ್ತಾರು ಕಾರಣಗಳು ದಿನದಿಂದ ದಿನಕ್ಕೆ ರೈತರನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡುತ್ತಿವೆ. ಇದು ಆಹಾರೋತ್ಪಾದನೆ ಮೇಲೆ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನಗಿಂತಲೂ ಪ್ರಸ್ತುತ ಕೃಷಿ ಹಾಗೂ ರೈತರಿಗೆ ತುಂಬ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರಿಗೆ ಕೃಷಿಯಲ್ಲಿ ಮತ್ತಷ್ಟು ಆಸಕ್ತಿ ಬರುವಂತೆ ಜಾಗೃತವಾಗಿದೆ. ನೂತನ ಯೋಜನೆಗಳಿಂದ ರೈತ ಆಶಾದಾಯಕ ಜೀವನ ನಡೆಸಲು ಅನುಕೂಲವಾಗಿದ್ದು, ಯೋಜನೆಗಳು ಆತನಿಗೆ ಸರಿಯಾದ ಸಮಯಕ್ಕೆ ತಲುಪಬೇಕಷ್ಟೇ.
ರಾಷ್ಟ್ರೀಯ ಆಹಾರ ಭದ್ರತಾ ಮಿಷನ್:ಈ ಯೋಜನೆಯಡಿ ಮೂಲ ಹಾಗೂ ಪ್ರಮಾಣಿತ ಬೀಜೋತ್ಪಾದನೆಗಾಗಿ ಪ್ರತಿ ಕ್ವಿಂಟಾಲ್ಗೆ ಒಂದು ಸಾವಿರ ರುಪಾಯಿ ಪ್ರೋತ್ಸಾಹಧನ ಸಿಗಲಿದೆ. ತಂತ್ರಜ್ಞಾನ ಅಳವಡಿಕೆಗಾಗಿ ರೈತರ ಹೊಲಗಳಲ್ಲಿ ಪ್ರಾತ್ಯಕ್ಷಿಕೆಗಳ ಏರ್ಪಾಟು, ತುಂತುರು ನೀರಾವರಿ ಘಟಕ, ಒಕ್ಕಣೆ ಯಂತ್ರ, ರೋಟೋವೇಟರ್, ಡೀಸೆಲ್ ಪಂಪ್ಸೆಟ್, ನೀರಾವರಿ ಪೈಪುಗಳು, ಸಸ್ಯ ಸಂರಕ್ಷಣಾ ಉಪಕರಣ, ಔಷಧಿಗಳ ಹಾಗೂ ಕೃಷಿ ಉಪಕರಣಗಳ ಪೂರಕೆ ಮಾಡುವುದಲ್ಲದೇ, ಶೇ. 50ರ ರಿಯಾಯ್ತಿ ದರದಲ್ಲಿ ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ಇದರಡಿ ಎಲ್ಲ ರೈತರಿಗೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆ ಹಾಗೂ ಎಲ್ಲ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಬಿತ್ತನೆ ಬೀಜಗಳನ್ನು ಮುಂಗಾರು, ಹಿಂಗಾರು ಹಂಗಾಮುಗಳಲ್ಲಿ ರಿಯಾಯ್ತಿ ದರದಲ್ಲಿ ಒದಗಿಸಲಾಗುತ್ತಿದೆ. ರಿಯಾಯ್ತಿ ದರದಲ್ಲಿ ಟ್ರ್ಯಾಕ್ಟರ್ ಚಾಲಿತ ಸುಧಾರಿತ ಕೃಷಿ ಉಪಕರಣಗಳು, ಡಿಸೇಲ್ ಪಂಪ್ಸೆಟ್ ಹಾಗೂ ಪವರ್ ಟಿಲ್ಲರ್ ಪೂರೈಸಲಾಗುವುದು. ಹೈಟೆಕ್ ಕೃಷಿ ಯಂತ್ರೋಪಕರಣಗಳು, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ರಿಯಾಯ್ತಿ ದರದಲ್ಲಿ ಒದಗಿಸುವುದು. ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಒಕ್ಕಣೆ ಕಣ ನಿರ್ಮಾಣ, ಟರ್ಪಾಲಿನ್, ಸಂಸ್ಕರಣಾ ಯಂತ್ರೋಪಕರಣಗಳನ್ನು ಶೇ. 50ರ ರಿಯಾಯ್ತಿ ದರದಲ್ಲಿ ಒದಗಿಸಲಾಗುವುದು.
ವಿಶೇಷ ಘಟಕ ಯೋಜನೆ: ಎಸ್ಸಿ-ಎಸ್ಟಿ ಪಂಗಡದವರ ಆರ್ಥಿಕ ಸ್ಥಿತಿ ಸುಧಾರಿಸಲು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಯೋಜನೆ ಅನುಷ್ಠಾನವಾಗಿದೆ. ಶೇ. 100ರ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ, ಸಸ್ಯ ಸಂರಕ್ಷಣಾ ಪೂರೈಕೆ. ಶೇ. 90ರ ಸಹಾಯಧನದಲ್ಲಿ ಧಾನ್ಯ ಸಂಗ್ರಹಣಾ ಕಣಜಗಳ ಪೂರೈಕೆ. ಶೇ. 90ರ ರಿಯಾಯ್ತಿ ದರದಲ್ಲಿ ಆಧುನಿಕ ಕೃಷಿ ಉಪಕರಣಗಳ ಪೂರೈಕೆ. ಶೇ. 90ರ ಸಹಾಯಧನದಲ್ಲಿ ಡೀಸೆಲ್, ಸೀಮೆಎಣ್ಣೆ ಪಂಪ್ಸೆಟ್, ಲಘು ನೀರಾವರಿ ಘಟಕ, ಒಕ್ಕಣೆ ಕಣ ನಿರ್ಮಾಣ ಮಾಡಿಕೊಡಲಾಗುವುದು.
ಸಸ್ಯ ರಕ್ಷಣಾ: ವಿವಿಧ ಕೃಷಿ ವಲಯದಲ್ಲಿ ಬಾಧಿಸುವ ಕೀಟರೋಗ,ಕಳೆಗಳ ನಿರ್ವಹಣೆಗೆ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಶೇ. 50ರ ರಿಯಾಯ್ತಿಯಲ್ಲಿ ಪೀಡೆನಾಶಕಗಳ ವಿತರಣೆ, ಸಸ್ಯ ಸಂರಕ್ಷಣಾ ಉಪಕರಣ ವಿತರಣೆ, ಸುಧಾರಿತ ಧಾನ್ಯ ಸಂಗ್ರಹಣಾ ಪೆಟ್ಟಿಗೆ ವಿತರಿಸಲಾಗುತ್ತಿದೆ.
ರೈತನಿಗೆ ಸಿಗುವ ಪರಿಹಾರಗಳು: ಅನೇಕ ಸಂದರ್ಭಗಳಲ್ಲಿ ರೈತರಿಗೆ ಪರಿಹಾರ ಹಾಗೂ ಸಹಾಯಧನ ದೊರೆಯುತ್ತದೆ. ಸರ್ಕಾರ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಅಧಿಕೃತ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ, ರೋಗಬಾಧೆ ಇತ್ಯಾದಿ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿ ಸಾಲದ ಹೊರೆಯಿಂದ ಆತ್ಯಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಸಹಾಯಧನ ಬರುತ್ತದೆ. ಹಾವು ಕಡಿತದಿಂದ ಇಲ್ಲವೇ ತೆಂಗು, ಅಡಕೆ ಮರಗಳಿಂದ ಬಿದ್ದು ಹಾಗೂ ಇತರೆ ಕೃಷಿ ಸಂಬಂಧಿತ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಒಂದು ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು. ಬೆಂಕಿ ಆಕಸ್ಮಿಕಗಳಿಂದ ಹುಲ್ಲು, ಬಣವೆ ನಷ್ಟವಾದ ಪ್ರಕರಣಗಳಲ್ಲಿ 10 ಸಾವಿರದ ವರೆಗೆ ಪರಿಹಾರ ದೊರೆಯುತ್ತದೆ.
ಇನ್ನೂ ಇವೆ ಯೋಜನೆಗಳು...
ಕೊಯ್ಲೋತ್ತರ ತಂತ್ರಜ್ಞಾನ ಯೋಜನೆ ಅಡಿ ಶೇ. 50ರ ರಿಯಾಯ್ತಿ ದರದಲ್ಲಿ ಒಕ್ಕಣೆ ಕಣಗಳ ನಿರ್ಮಾಣ, ತಾಡಪಲ್ಗಳ ವಿತರಣೆ
- ಆಹಾರ ಸಂಸ್ಕರಣಾ ಯೋಜನೆಯಡಿ ರಿಯಾಯ್ತಿ ದರದಲ್ಲಿ ಹಿಟ್ಟಿನ ಖಾರ ಕುಟ್ಟುವ ಯಂತ್ರ ಹಾಗೂ ಶ್ಯಾವಿಗೆ ತಯಾರಿಕಾ ಯಂತ್ರಗಳ ಪೂರೈಕೆ
- ಹನಿ ನೀರಾವರಿ ಯೋಜನೆಯಡಿ ಶೇ. 90ರ ಸಹಾಯಧನದಲ್ಲಿ ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕಗಳ ಪೂರೈಕೆ
- ಐಸೋಪಾಮ್ ಯೋಜನೆ ಅಡಿ ಗೋವಿನ ಜೋಳ, ಶೇಂಗಾ, ಸೋಯಾ ಅವರೆ ಬೆಳೆಗಳ ದೊಡ್ಡ ಪ್ರಮಾಣ ಪ್ರಾತ್ಯಕ್ಷಿಕೆ ಹಾಗೂ ಜೈವಿಕ ಗೊಬ್ಬರ ಮತ್ತು ಲಘು ಪೋಷಕಾಂಶಗಳ ವಿತರಣೆ
- ಮಣ್ಣಿನ ಸತ್ವ ಹೆಚ್ಚಿಸಲು ರಿಯಾಯ್ತಿ ದರದಲ್ಲಿ ಜಿಪ್ಸಂ, ಕೃಷಿ ಸುಣ್ಣ, ಲಘು ಪೋಷಕಾಂಶಗಳು, ಜೈವಿಕ, ಎರೆಹುಳು ಗೊಬ್ಬರ ಪೂರೈಕೆ.
- ಸುವರ್ಣ ಭೂಮಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಪರಿಕರಗಳನ್ನು 10 ಸಾವಿರ ನೇರವಾಗಿ ಬ್ಯಾಂಕಿಗೆ ಹಾಕುವುದು.
- ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಮೂಲಕ ರೈತರು ರು. 1 ಲಕ್ಷದೊಳಗೆ ಪಡೆದ ಬೆಳೆಸಾಲವನ್ನು ನಿಗದಿಪಡಿಸಿದ ಅವಧಿಯೊಳಗೆ ಮರುಪಾವತಿ ಮಾಡಿದ ರೈತರಿಗೆ ಶೇ. 3ರ ಬಡ್ಡಿದರದಲ್ಲಿ ಸಾಲ.
- ಬೆಳೆವಿಮಾ ಯೋಜನೆ ಅಡಿ ರಾಷ್ಟ್ರೀಯ ಕೃಷಿ ವಿಮಾ, ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಿದೆ. ಈ ಮೂಲಕ ರೈತರು ಹವಾಮಾನ ವೈಪರೀತ್ಯಗಳಿಂದಾದ ನಷ್ಟ ತುಂಬಿಕೊಳ್ಳಬಹುದು.
ರೈತ ಸಹಾಯವಾಣಿ ಕೇಂದ್ರ
ರೈತರಿಗೆ ಸರ್ಕಾರದಿಂದ ಅನೇಕ ಯೋಜನೆಗಳಿದ್ದು, ಅವರು ಪ್ರಯೋಜನ ಪಡೆಯಬೇಕಷ್ಟೇ. ಅಲ್ಲದೆ, ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ನೇರವಾಗಿ ಮಾಹಿತಿ ನೀಡುವ ಉದ್ದೇಶದಿಂದ ರೈತ ಸಹಾಯವಾಣಿ ಇದೆ. ಕೃಷಿ ಬಗ್ಗೆ ತಾಂತ್ರಿಕ ಹಾಗೂ ಸಂಬಂಧಿಸಿದ ಇತರೆ ವಿಷಯಗಳ ಕುರಿತು ಬಿಎಸ್ಸೆನ್ನೆಲ್ ಉಚಿತ ಕರೆ 18004253553 ಮಾಡಬಹುದು. ಬೆಳಿಗ್ಗೆ 7ರಿಂದ ರಾತ್ರಿ 9ರ ವರೆಗೆ ಈ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, 24 ಗಂಟೆ ವಿಸ್ತರಿಸುವ ಉದ್ದೇಶದಿಂದ ವೈಯ್ಸ್ ರೆಕಾರ್ಡಿಂಗ್ ವ್ಯವಸ್ಥೆ ಸಹ ಇದೆ.
- ಸಂಗಮೇಶ ಗಡಾದ
ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಧಾರವಾಡ
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

