ಧಾರವಾಡ

ಬಿಜೆಪಿಗೂ ಮುತಾಲಿಕಗೂ ಸಂಬಂಧವಿಲ್ಲ

Published On :

ಹುಬ್ಬಳ್ಳಿ: 'ರಾಷ್ಟ್ರಕ್ಕೆ ಮೋದಿ ರಾಜ್ಯಕ್ಕೆ ಮುತಾಲಿಕ' ಎಂಬ ಕರಪತ್ರಗಳನ್ನು ಮನೆಮನೆಗೆ ಹಂಚುವ ಮೂಲಕ ಶ್ರೀರಾಮ ಸೇನೆ ಕಾರ್ಯಕರ್ತರು ಸಾರ್ವಜನಿಕರು ಹಣ ಕೀಳುತ್ತಿದ್ದು, ಅಂಥ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೂ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಅವರಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಶ್ರೀರಾಮ ಸೇನೆ ಕಾರ್ಯಕರ್ತರು ಬಿಜೆಪಿ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರಿಗೆ ಸಾರ್ವಜನಿಕರು ಹಣ ನೀಡಬಾರದು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ನ. 17ರಂದು ನಡೆಯುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಗಾಗಿ ಸಾರ್ವಜನಿಕರಿಂದ ರು. 10 ಸಂಗ್ರಹಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಬಿಜೆಪಿ ಸಾರ್ವಜನಿಕರಿಂದ ಯಾವುದೇ ರೀತಿಯ ಹಣ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಮೋದ ಮುತಾಲಿಕ ನೇತೃತ್ವದ ಶ್ರೀರಾಮ ಸೇನೆ ಕಾರ್ಯಕರ್ತರು ಸಾರ್ವಜನಿಕರಿಂದ ಬಿಜೆಪಿ ಹೆಸರಿನಲ್ಲಿ ಮಾಡುತ್ತಿರುವ ಹಣ ವಸೂಲಿಯ ವಿವರಗಳನ್ನು ತಮ್ಮ ಪಕ್ಷದ ರಾಷ್ಟ್ರ ಮತ್ತು ರಾಜ್ಯಮಟ್ಟದ ಮುಖಂಡರಿಗೆ ಸಲ್ಲಿಸಲಾಗುವುದು. ನರೇಂದ್ರ ಮೋದಿ ಹಾಗೂ ಅವರ ಆಪ್ತರಿಗೂ ಈ ವಿವರಗಳನ್ನು ಕಳುಹಿಸಲಾಗುವುದು ಎಂದರು. ಪ್ರಮೋದ ಮುತಾಲಿಕ ಹಾಗೂ ಅವರ ಬೆಂಬಲಿಗರು ತಮ್ಮ ಸಂಘಟನೆ ನೇತೃತ್ವದಲ್ಲಿ ನಡೆಸುತ್ತಿರುವ ಹಿಂದೂ ಜಾಗೃತ ಸಮಾವೇಶಕ್ಕೆ ಬಿಜೆಪಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವುದು ಖಂಡನೀಯ. ಶ್ರೀರಾಮ ಸೇನೆ ಕಾರ್ಯಕರ್ತರು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಹು-ಧಾದಿಂದ 10 ಸಾವಿರ ಜನ: ಬೆಂಗಳೂರಿನಲ್ಲಿ ನ. 17ರಂದು ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದಿಂದ 10 ಸಾವಿರ ಜನರು ಹೆಸರು ನೋಂದಾಯಿಸಿದ್ದಾರೆ. ಸಮಾವೇಶಕ್ಕೆ ಹೆಚ್ಚು ಜನ ಸೇರುವುದರಿಂದ ನೋಂದಣಿ ಕಾರ್ಯ ಸ್ಥಗಿತಗೊಳಿಸುವಂತೆ ಪಕ್ಷದ ರಾಜ್ಯ ಮುಖಂಡರು ಸೂಚನೆ ನೀಡಿದ್ದಾರೆ. ಹೀಗಾಗಿ, ನೋಂದಣಿ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದರು.
ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ತಲಾ 23 ಬೋಗಿಗಳುಳ್ಳ ಎರಡು ವಿಶೇಷ ರೈಲುಗಳು ಹೊರಡಲಿವೆ. ಈ ರೀತಿಯ ಒಟ್ಟು 14 ವಿಶೇಷ ರೈಲುಗಳು ರಾಜ್ಯದ ವಿವಿಧ ಪ್ರದೇಶದಿಂದ ಬೆಂಗಳೂರಿಗೆ ಹೊರಡಲಿವೆ. ರ್ಯಾಲಿಯ ಜಾಗೃತಿಗಾಗಿ ಹುಬ್ಬಳಿಯಲ್ಲಿ ನ. 10ರಂದು ಬೆಳಗ್ಗೆ 10.30ಕ್ಕೆ ದುರ್ಗದಬೈಲ್ ಹಾಗೂ ಬೆಳಗ್ಗೆ 11ಕ್ಕೆ ಶಿರೂರು ಪಾರ್ಕ್‌ನಿಂದ ಬೈಕ್ ರ್ಯಾಲಿ ನಡೆಸಲಾಗುತ್ತಿದೆ. ನ. 15ರಂದು ಬಿಜೆಪಿ ಯುವ ಮೋರ್ಚಾದ 50 ಕಾರ್ಯಕರ್ತರು ಬೆಂಗಳೂರಿನವರೆಗೆ ಬೈಕ್ ರ್ಯಾಲಿ ನಡೆಸಲಿದ್ದಾರೆ ಎಂದು ಲಿಂಗರಾಜ ಪಾಟೀಲತಿಳಿಸಿದರು.
ಬೆಂಗಳೂರಿನ ರ್ಯಾಲಿ ಮುಗಿದ ನಂತರ ನ. 20 ರಿಂದ 28ರವರೆಗೆ ಅವಳಿ ನಗರದಲ್ಲಿ ಮತದಾರರ ನೋಂದಣಿ ಅಭಿಯಾನ 'ಬಲಿಷ್ಠ ಭಾರತಕ್ಕಾಗಿ ನೀವೂ ಮತದಾರರಾಗಿ' ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಚೇರಿ, ಕಾರ್ಯಕರ್ತರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿಗಳು ಲಭ್ಯವಿದ್ದು, ಅರ್ಹರು ಅರ್ಜಿ ಭರ್ತಿ ಮಾಡಬೇಕು. ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಿಚ್ಛಿಸುವವರು, ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವವರು ಸದುಪಯೋಗ ಪಡೆದುಕೊಳ್ಳಬೇಕು.
-ಲಿಂಗರಾಜ ಪಾಟೀಲ, ಅಧ್ಯಕ್ಷರು,
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.