ಜಾತ್ಯತೀತ ಚಿಂತನೆ ಅಳವಡಿಸಿಕೊಳ್ಳಿ
ಧಾರವಾಡ: ಈ ನಾಡು ಕಂಡ ದಾಸಶ್ರೇಷ್ಠ ಕನಕದಾಸರು. ಜಾತಿ-ವಿಜಾತಿ, ಉಚ್ಛ-ನೀಚಗಳ ವಿರುದ್ಧ ಬಂಡೆದ್ದು, ಕುಲದ ನೆಲೆಯನ್ನು ಪ್ರಶ್ನಿಸಿ, ಸಮಾಜಕ್ಕೆ ಸಮಾನತೆಯ ಸಂದೇಶ ನೀಡಿದವರು. ಅಂಥ ಮಹಾನ್ ಮಾನವತಾವಾದಿಯ ಜಾತ್ಯತೀತ ಚಿಂತನೆ ಗೌರವಿಸಿ ಪ್ರತಿಯೊಬ್ಬರೂ ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಾತ್ಯತೀತತೆ ಬಗ್ಗೆ ಸಂಕಲ್ಪ ಮಾಡಬೇಕು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸಲಹೆ ನೀಡಿದ್ದಾರೆ.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ 'ಕನಕದಾಸರ 526 ನೇ ಜಯಂತ್ಯುತ್ಸವ ಹಾಗೂ ಮೆರವಣಿಗೆ' ಉದ್ಘಾಟಿಸಿ ಅವರು ಮಾತನಾಡಿದರು.
ಕನಕರು ಬಾಳಿದ 15-16 ನೇ ಶತಮಾನದ ಮಧ್ಯ ಕಾಲೀನ ಸಮಾಜ, ಮೇಲು ಕೀಳು ಹಾಗೂ ದಟ್ಟ ಜಾತೀಯತೆಯ ಕಾಲವಾಗಿದ್ದರಿಂದ ಕನಕರು ತಮ್ಮ ದಾಸರ ಪದ ಮತ್ತು ಕೀರ್ತನೆಗಳ ಮೂಲಕ ಈ ಜಾಡ್ಯಗಳನ್ನು ವಿರೋಧಿಸಿ, ಅಂತರಂಗ ಶುದ್ಧಿಗೆ ಕರೆ ನೀಡಿ, ಸಮಾಜದಲ್ಲಿ ಸೌಹಾರ್ದ, ಸಮನ್ವಯತೆಯನ್ನು ಪ್ರತಿಪಾದಿಸಿದ್ದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಬಾಳಿ ಬದುಕಿ, ಜೀವನದಲ್ಲಿ ಮಹತ್ಸಾಧನೆಗೈದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ದಾರ್ಶನಿಕರನ್ನು ಒಂದೊಂದು ವರ್ಗಕ್ಕೆ ಸೀಮಿತಗೊಳಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಸಂಕೀರ್ಣಗೊಳಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಕದಾಸರ ಜಾತಿ ಮೂಲ ಕೆಣಕಿ, ಅವರನ್ನು ವಿವಾದದ ವಸ್ತುವಾಗಿಸದೆ, ಅವರ ಬದುಕಿನ ಮೌಲ್ಯಗಳಿಂದ ನಮ್ಮ ಸಮಾಜದ ಮತ್ತು ರಾಜಕೀಯ ಮುಖಂಡರು ಸೌಹಾರ್ದದ ಅಭಿಪ್ರೇರಣೆ ಪಡೆಯಬೇಕು ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
'ಕನಕದಾಸರು ಮತ್ತು ವರ್ಗ ಸಂಘರ್ಷ' ಎಂಬ ವಿಷಯ ಕುರಿತು ಮಾತನಾಡಿದ ಕರ್ನಾಟಕ ವಿವಿ ಹಾವೇರಿ ಸ್ನಾತಕೋತ್ತರ ಕೇಂದ್ರದ ಅಧ್ಯಾಪಕ ಡಾ. ಮುದೇನೂರ ನಿಂಗಪ್ಪ, ಕತ್ತಲೆಯುಗವೆಂದೇ ಗುರುತಿಸಲಾಗಿರುವ 15-16 ನೇ ಶತಮಾನದ ಕಾಲಘಟ್ಟದಲ್ಲಿ ಬಾಳಿದ ಕನಕರು ಊಳಿಗ ಮಾನ್ಯ ವ್ಯವಸ್ಥೆಯನ್ನು ಕಣ್ಣಾರೆ ಕಂಡು ನೊಂದವರು. ಆ ಕಾಲದ ಸಾಮಾಜಿಕ ಸಂಗತಿಗಳು ಅಂದು ವೈಚಾರಿಕ ನೆಲೆಯಲ್ಲಿ ಯಾರೂ ಗುರುತಿಸದ ಕಾಲವಾಗಿದ್ದರಿಂದ, ಆ ಕಾಲದ 50-60 ದಾಸರು ಮತ್ತು ಅಂದಿನ ಆಳರಸರ ಆಳ್ವಿಕೆ ಮಧ್ಯೆಯೂ ಕನಕರು ಅಸಮಾನತೆಯ ವಿರುದ್ಧ ಬಂಡೆದ್ದುದು ವಿಶೇಷ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಸವ, ಕನಕರಾದ ವಿಭೂತಿ ಪುರುಷರನ್ನು ನಮ್ಮವರೆಂಬ ಸಂಕೀರ್ಣ ದೃಷ್ಟಿಕೋನದಿಂದ ನೋಡುವ ಮನೋಭಾವದಿಂದ ಹೊರ ಬರಬೇಕು ಎಂದು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಗಣ್ಯರನ್ನು ವಿನಂತಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ್ ಸ್ವಾಗತಿಸಿದರು. ಆಕಾಶವಾಣಿ ಉದ್ಘೋಷಕಿ ಮಾಯಾ ಚಿಕ್ಕೆರೂರ ಅವರು ನಿರೂಪಿಸಿದರು. ನಾಗರಾಜ ಗುರಿಕಾರ ವಂದಿಸಿದರು.
ಕನಕ ಜಯಂತಿ ರಜೆ ದಿನ ಹಿಂಪಡೆಯಿರಿ: ಡಾ. ವಾಲೀಕಾರ
ಎಲ್ಲ ದಾರ್ಶನಿಕರ ಜಯಂತಿಗೆ ರಜೆ ಘೋಷಿಸಿದ ಸರ್ಕಾರಕ್ಕೆ, ಕನಕ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಬೇಕು ಎಂದು ಯಾರೂ ಕೇಳಿರಲಿಲ್ಲ. ಆದರೂ ಸರ್ಕಾರ ರಜೆ ಘೋಷಿಸಿತು. ಆದರೆ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುವರ್ಣ ಅವಕಾಶವಿದ್ದು, ರಜೆ ದಿನ ಹಿಂಪಡೆದು ಕೆಲಸದ ದಿನದಂದೇ ಕನಕ ಜಯಂತಿ ಆಚರಿಸುವಂತೆ ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಆಗ್ರಹಿಸಿದರು. ಕವಿವಿ ಕನಕ ಅಧ್ಯಯನ ಪೀಠದ ಕನಕ ಸಭಾಭವನದಲ್ಲಿ ಹಮ್ಮಿಕೊಂಡ ದಾಸವರೇಣ್ಯ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಕದಾಸರ ಜಯಂತಿಯಂದು ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು ಕನಕದಾಸರ ತತ್ವ-ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕದಾಸರ ಜಯಂತಿ ಪ್ರಯುಕ್ತ ಪ್ರಸ್ತುತ ಜಾರಿಯಲ್ಲಿದ್ದ ರಜೆ ರದ್ದುಪಡಿ ಮಾಡಬೇಕು ಎಂದರು.
ಮನಸೂರೆಗೊಂಡ ಮೆರವಣಿಗೆ...
ಕಾರ್ಯಕ್ರಮ ನಂತರ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಆರಂಭಗೊಂಡ ಮೆರವಣಿಗೆ, ಕೆಸಿಸಿ ಬ್ಯಾಂಕ್, ಬೀರದೇವರ ದೇವಸ್ಥಾನ, ಮೇದಾರ ಓಣಿ, ಭೂಸಪ್ಪ ಸರ್ಕಲ್ ಮೂಲಕ ಹೊರಟು, ಟಿಕಾರೆ ರಸ್ತೆಯಲ್ಲಿ ಸಾಗಿ ಜ್ಯುಬಿಲಿ ಸರ್ಕಲ್ವರೆಗೆ ಬಂದು ಕೊನೆಗೊಂಡಿತು. ಮೆರವಣಿಗೆಯಲ್ಲಿ ಭಾರತ ಪ್ರೌಢಶಾಲೆ, ಕೆಎನ್ಕೆ ಬಾಲಕಿಯರ ಪ್ರೌಢಶಾಲೆ, ಹಿಂದುಳಿದ ವರ್ಗಗಳ ಇಲಾಖೆಗಳ ಕನಕರ ಕುರಿತ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಈ ಮೆರವಣಿಗೆಯ ಮುಂದೆ ಗಾಂಭೀರ್ಯದಿಂದ ಸಾಗುತ್ತಿದ್ದ ಆನೆಯ ಮೇಲೆ ಅಂಬಾರಿ ಇರಿಸಿ, ಕನಕದಾಸರ ಭಾವಚಿತ್ರ ಇರಿಸಲಾಗಿತ್ತು.
15 ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ಮೆರವಣಿಗೆಯನ್ನು ಅರ್ಥಪೂರ್ಣಗೊಳಿಸಿದವು. ಈ ಮೆರವಣಿಗೆಯಲ್ಲಿ ಧಾರವಾಡ ತಂಡಗಳ ಜೊತೆಗೆ ಹಾವೇರಿ ಜಿಲ್ಲೆಯ ಡೊಳ್ಳು ತಂಡಗಳೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕರಡಿ ಮಜಲು (ಮರೇವಾಡ), ಡೊಳ್ಳು (ಹೂವಿನ ಶಿಗ್ಲಿ ಆನವಟ್ಟಿ), ಜಗ್ಗಲಗಿ (ಸೂರಶೆಟ್ಟಿಕೊಪ್ಪ) ಜಾಂಜ್ಮೇಳ (ಶೆರೇವಾಡ, ಮರಕಟ್ಟಿ), ಗೊಂಬೆ ಕುಣಿತ, (ಕೇಶ್ವಾಪುರ) ಹಾಗೂ ಸಮರ ಕಲೆ (ಹುಬ್ಬಳ್ಳಿ) ತಂಡಗಳು ಜನರ ಮನಸೂರೆಗೊಂಡವು.
ಜಿಪಂ ಉಪಾಧ್ಯಕ್ಷ ಫಕೀರಪ್ಪ ಜಕ್ಕಣ್ಣವರ, ಜಿಪಂ ಮಾಜಿ ಅಧ್ಯಕ್ಷ ಸಿ.ಎನ್. ಶ್ಯಾಗೋಟಿ, ಜಿಪಂ ಸದಸ್ಯೆ ಪ್ಯಾಟಿ, ಯಲ್ಲಮ್ಮ ನಾಯ್ಕರ, ಡಾ. ಲೋಹಿತ್ ನಾಯ್ಕರ್, ಡಿಸಿ ಸಮೀರ್ ಶುಕ್ಲ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಮತ್ತು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನಕ ಜಯಂತಿ ಸಂದರ್ಭದಲ್ಲಿ ರಾಜ್ಯ ವಾರ್ತಾ ಇಲಾಖೆ ಕನಕದಾಸರ ಕುರಿತು ಪ್ರಕಟಿಸಿದ ಭಿತ್ತಿಪತ್ರವನ್ನು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

