ಪರಿಹಾರಕ್ಕೆ ಒತ್ತಾಯಿಸಿ ವಿಮಾನ ನಿಲ್ದಾಣ ಸಂತ್ರಸ್ತರಿಂದ ಹೋರಾಟ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸಲು ನಿವೇಶನ ಹಾಗೂ ಅಕ್ರಮ-ಸಕ್ರಮ ಜಾಗ ವಶಪಡಿಸಿಕೊಂಡವರಿಗೆ ಸೂಕ್ತ, ತುರ್ತು ಪರಿಹಾರ ನೀಡುವಂತೆ ಒತ್ತಾಯಿಸಿ ನೂರಾರು ಸಂತ್ರಸ್ತರು ನ. 26ರಂದು ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಪರಿಹಾರಕ್ಕೆ ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಸದರ ಮನೆಗೆ ಮುತ್ತಿಗೆ, ಪಂಜಿನ ಮೆರವಣಿಗೆ, ಸಾಮೂಹಿಕ ಆತ್ಮಹತ್ಯೆ ಹಾಗೂ ಮತ್ತಿತರ ಹೋರಾಟಗಳನ್ನು ಹಂತಹಂತವಾಗಿ ಕೈಗೊಳ್ಳುವುದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ. 26ರಂದು ಬೆಳಗ್ಗೆ 11ಕ್ಕೆ ಇಂದಿರಾಗಾಜಿನ ಮನೆಯಿಂದ ಪ್ರಾರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆ ಮಿನಿವಿಧಾನಸೌಧದಲ್ಲಿ ಅಂತ್ಯಗೊಳ್ಳುವುದು. ನಂತರ ಬೇಡಿಕೆ ಈಡೇರಿಕೆಗಾಗಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿವೇಶನ ಹಾಗೂ ಅಕ್ರಮ-ಸಕ್ರಮ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಈ ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈಗಿನ ಸರ್ಕಾರ ಈ ತೀರ್ಮಾನ ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.
ವಿಮಾನ ನಿಲ್ದಾಣಕ್ಕಾಗಿ ನಿವೇಶನ ಕಳೆದುಕೊಂಡವರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ ಮುಗಿಯುವುದರೊಳಗೆ ಪ್ರತ್ಯೇಕ ನಿವೇಶನ ಕಲ್ಪಿಸಬೇಕು ಹಾಗೂ ಮತ್ತಿತರ ಪರಿಹಾರ ಒದಗಿಸಬೇಕು ಎಂದರು.
ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಸಂಸದ ಪ್ರಹ್ಲಾದ ಜೋಶಿ ಈ ಹಿಂದೆ ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ. ಬೆರಳೆಣಿಕೆಯ ಸಂತ್ರಸ್ತರಿಗೆ ನೀಡಿರುವ ಪ್ರತ್ಯೇಕ ನಿವೇಶನ ಹಾಗೂ ಪರಿಹಾರವನ್ನು ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಒಕ್ಕೂಟದ ಉಪಾಧ್ಯಕ್ಷ ಎಸ್.ಎ. ಜಹಾಗೀರದಾರ, ಎಂ.ಜಿ. ರಾಯ್ಕರ್, ಎಚ್.ಜಿ. ಕುಲಕರ್ಣಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

