ಧಾರವಾಡ

ಅಕ್ರಮ ಖಾತ್ರಿ: ಶೌಚಾಲಯಕ್ಕೆ ಕತ್ರಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 23
ಸರ್ಕಾರ ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಆದರೆ, ಈ ಯೋಜನೆಗಳು ಮಾತ್ರ ಸಫಲವಾಗುತ್ತಿಲ್ಲ. ಯೋಜನೆ ವಿಫಲವಾಗಲು ಸರ್ಕಾರದ ನಿಯಮಗಳೇ ಅಡ್ಡಿಯಾಗಿವೆ ಎಂದರೆ ತಪ್ಪಾಗಲಾರದು.
ಸರ್ಕಾರ ಅಕ್ಟೋಬರ್ ತಿಂಗಳಲ್ಲಿ ಬಯಲು ಶೌಚ ಮುಕ್ತ ಕರ್ನಾಟಕಕ್ಕೆ ಆದೇಶ ಹೊರಡಿಸಿದೆ. ಅಂತೆಯೇ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗೆ ತಿಂಗಳಿಗೆ ಇಂತಿಷ್ಟು ಎಂದು ಟಾರ್ಗೆಟ್ ನೀಡಲಾಗಿದೆ. ಈ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ರು. 10 ಸಾವಿರ ಸಹಾಯಧನವನ್ನೂ ನೀಡುವುದಾಗಿ ತಿಳಿಸಿದೆ. ಶೌಚಾಲಯ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ರು. 4,500, ಕೇಂದ್ರ ಮತ್ತು ರಾಜ್ಯ ಸರ್ಕಾರ 4,700 ಅನುದಾನ ನೀಡುತ್ತವೆ. ಇನ್ನುಳಿದ ರು. 800 ಫಲಾನುಭವಿ ಭರಿಸಬೇಕು. ಸರಿ, ರು. 10 ಸಾವಿರಕ್ಕೆ ಫಲಾನುಭವಿ ಇನ್ನಷ್ಟು ದುಡ್ಡು ಹಾಕಿ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂದರೆ ಉದ್ಯೋಗ ಖಾತ್ರಿ ಅಡಿ ಪಾವತಿಸುವ ಹಣ ಸಿಗುವುದು ಕಷ್ಟವಾಗಿ ಪರಿಣಮಿಸಿದೆ.
ನಿಯಮ ಅಡ್ಡಿ: ಹೀಗೆ ಶೌಚಾಲಯ ನಿರ್ಮಿಸಿಕೊಳ್ಳಬೇಕಾದರೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಹೊಂದಿರುವ ನಾಲ್ವರು ಬೇಕೇ ಬೇಕು. ಎಲ್ಲ ಗ್ರಾಮಗಳಲ್ಲಿ ಜಾಬ್ ಕಾರ್ಡ್ ಹೊಂದಿರುವ ಅನೇಕ ಕಾರ್ಮಿಕರಿದ್ದಾರೆ. ಆದರೆ, ಅವರ್ಯಾರೂ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಲು ಬರುವುದಿಲ್ಲ.
ಈ ವರ್ಷ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಉತ್ತಮ ಬೆಳೆ ಬಂದಿದೆ. ಹೀಗಾಗಿ, ಕೃಷಿ ಚಟುವಟಿಕೆಯಲ್ಲಿ ಕಾರ್ಮಿಕರು ತೊಡಗಿಕೊಂಡಿದ್ದು, ಆಯಾ ಗ್ರಾಮದ ಸಂತೆ ದಿನದಂದು ಕೂಲಿ ಪಾವತಿಯಾಗುತ್ತದೆ. ಅದೇ ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಗಾಗಿ ತಿಂಗಳಾನುಗಟ್ಟಲೇ ಕಾಯಬೇಕು. ಇದರಿಂದಾಗಿ ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ, ಗ್ರಾಮೀಣ ಜನರಿಗೆ ಶೌಚಾಲಯ ಕನಸಿನ ಮಾತಾಗಿದೆ.
ಕೈ ಸೇರದ ಸಹಾಯಧನ: ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದರೆ ಫಲಾನುಭವಿ ಕುಟುಂಬದ ಸದಸ್ಯರೇ ಕೆಲಸ ಮಾಡಿ ಕೊನೆಗೆ ಖಾತ್ರಿ ಅಡಿ ಬರುವ ರು. 4,500 ಪಡೆಯಲು ಜಾಬ್ ಕಾರ್ಡ್ ಹೊಂದಿದವರ ಮನೆ ಬಾಗಿಲಿಗೆ ಅಲೆದಾಡಬೇಕಾಗಿದೆ. ಹಣ ಬಂದ ಮೇಲೆ ಜಾಬ್ ಕಾರ್ಡ್ ಹೊಂದಿದ ಮೂವರಿಗೆ ಕನಿಷ್ಠ ಎಂದರೆ ರು. 600 ರಿಂದ ರು. 800 ಕೊಡಲೇಬೇಕು. ಅಂದಾಗ ಮಾತ್ರ ಅವರು ಮಿಕ್ಕ ಹಣ ಕೊಡುತ್ತಾರೆ. ಇಲ್ಲದಿದ್ದರೆ ಆ ಹಣ ಗೋವಿಂದನ ಪಾದ ಸೇರಿದಂತೆ.
ತಲುಪದ ಟಾರ್ಗೆಟ್: ಧಾರವಾಡ ಜಿಲ್ಲೆಯ ಶಿರೂರಿನಲ್ಲಿ ಈ ಟಾರ್ಗೆಟ್ ಅವಧಿಯಲ್ಲಿ 62, ತಿರ್ಲಾಪುರದಲ್ಲಿ ಕೇವಲ 57 ಶಿರಕೋಳದಲ್ಲಿ 60, ಮುಗದ 73 ಶೌಚಾಲಯಗಳು ನಿರ್ಮಾಣವಾಗಿವೆ. ಇನ್ನು ಎಲ್ಲ ಗ್ರಾಪಂಗಳಲ್ಲಿಯೂ ಅಂಕಿ-ಸಂಖ್ಯೆ ಇದಕ್ಕಿಂತ ಹೆಚ್ಚಿಲ್ಲ. ಬಹುತೇಕ ಗ್ರಾಪಂಗಳು ಶೇ. 50ರಷ್ಟು ಟಾರ್ಗೆಟ್ ತಲುಪಿಲ್ಲ.
ಏಜೆನ್ಸಿಗಳ ಕಾರ್ಬಾರು: ಈ ರಗಳೇ ಅರಿತಿರುವ ಕೆಲವರು ಏಜೆನ್ಸಿಗಳನ್ನು ಹುಟ್ಟುಹಾಕಿದ್ದಾರೆ. ಈ ಏಜೆನ್ಸಿಗಳು ಜಾಬ್ ಕಾರ್ಡ್ ಹೊಂದಿರುವ ಎಲ್ಲರೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಅವರ ಜಾಬ್ ಕಾರ್ಡ್ ಪಡೆಯುವ ಈ ಏಜೆನ್ಸಿಯವರು ಬೇರೆ ಕಾರ್ಮಿಕರನ್ನು ಬಳಸಿ ಕೆಲಸ ಮಾಡಿಸುತ್ತಾರೆ. ಇನ್ನು ಮನೆ ಸದಸ್ಯರು ಶೌಚಾಲಯ ನಿರ್ಮಿಸಲು ಗುಂಡಿ ತೋಡಿಕೊಟ್ಟರೆ ಮಿಕ್ಕ ಕಾಮಗಾರಿ ಈ ಏಜೆನ್ಸಿ ಪೂರ್ಣಗೊಳಿಸುತ್ತದೆ. ಅಂತೂ ಶೌಚಾಲಯ ನಿರ್ಮಾಣವಾಯ್ತು ಎಂದು ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ರು. 10,000 ಸಾವಿರ ಸಹಾಯಧನದಲ್ಲಿ ಇವರು ಬಳಸುವುದು ರು. 6ರಿಂದ 7 ಸಾವಿರ ಮಾತ್ರ.
ಇನ್ನೊಂದೆಡೆ ಸರ್ಕಾರ ನೀಡಿದ ಟಾರ್ಗೆಟ್ ಮುಟ್ಟುವ ಆತುರದಲ್ಲಿ ಏಜೆನ್ಸಿಗಳು ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿವೆ. ಇದರಿಂದ ಟಾರ್ಗೆಟ್ ಏನೋ ತಲುಪಬಹುದು. ಹೀಗೆ, ನಿರ್ಮಿಸಿದ ಶೌಚಾಲಯ ತಿಂಗಳೊಳಗೆ ಕುಸಿಯುವುದು ಗ್ಯಾರಂಟಿ. ಹೀಗಿದ್ದಾಗ, ಯಾರು ತಾನೇ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಾರೆ?



-ಮಹಮ್ಮದ ರಫೀಕ್ ಬೀಳಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.