ಧಾರವಾಡ

ಅಪಾಯ ಆಹ್ವಾನಿಸುತ್ತಿವೆ ಮ್ಯಾನ್‌ಹೋಲ್

Published On :

ವಿಶೇಷ ವರದಿ
ಹುಬ್ಬಳ್ಳಿ:
ಮೃತ್ಯುಕೂಪದಂತಿರುವ ತೆರೆದ ಮ್ಯಾನ್‌ಹೋಲ್‌ಗಳು...ವಾಹನ-ಜನದಟ್ಟಣೆಯ ಪ್ರಮುಖ ರಸ್ತೆಗಳು ಅಪಾಯಕಾರಿ... ಮ್ಯಾನ್‌ಹೋಲ್‌ಗಳಿಗೆ ಹಾಕಿದ ಕಳಪೆ ಮುಚ್ಚಳಿಕೆ...ಸಮಸ್ಯೆಗೆ ಸ್ಪಂದಿಸದ ಮಹಾನಗರ ಪಾಲಿಕೆ...
ಹುಬ್ಬಳ್ಳಿಯ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ನಿತ್ಯ ಕಾಣುವ ದುರಂತ ಇದು. ಬೈಕ್ ಸವಾರರು, ಪಾದಚಾರಿಗಳು, ಬಿಡಾಡಿ ನಾಯಿ-ದನಗಳು ತೆರೆದ ಮ್ಯಾನ್‌ಹೋಲ್‌ಗಳಲ್ಲಿ ಬಿದ್ದು ಕೈ-ಕಾಲುಗಳಿಗೆ ಗಾಯ ಮಾಡಿಕೊಳ್ಳುವುದು ಹಾಗೂ ಕೆಲ ಬಾರಿ ಪ್ರಾಣಕ್ಕೂ ಕುತ್ತು ಬಂದಿದ್ದು ಸಾಮಾನ್ಯ ಸಂಗತಿ. ಮಹಾನಗರ ಪಾಲಿಕೆ ಸಹ 'ನಿತ್ಯ ಸಾಯುವವರಿಗೆ ಅಳುವವರು ಯಾರು?' ಎಂಬಂತೆ ಜನಸಾಮಾನ್ಯರ ಈ ಕಷ್ಟಕ್ಕೆ ಸ್ಪಂದಿಸುವುದನ್ನೇ ಮರೆತುಬಿಟ್ಟಿದೆ.
ಮ್ಯಾನ್‌ಹೋಲ್‌ಗಳು ತೆರೆದ ಸ್ಥಿತಿಯಲ್ಲಿರಬಾರದೆಂಬ ನಿಯಮವಿದ್ದರೂ ಇಂಥ ಹಲವಾರು ನಿಯಮ ಗಾಳಿಗೆ ತೂರಿರುವ ಪಾಲಿಕೆ ಆಡಳಿತ, ಕಣ್ಣಿದ್ದೂ ಕುರುಡನಂತೆ ಬೇಜವಾಬ್ದಾರಿಯಿಂದ ವರ್ತಿಸುವುದು ಜನರಲ್ಲಿ ಅಸಮಾಧಾನಕ್ಕೆಡೆ ಮಾಡಿದೆ. ಇನ್ನೂ ಕೆಲವೆಡೆ ಮ್ಯಾನ್‌ಹೋಲ್‌ಗಳಿಗೆ ಹಾಕಿದ ಮುಚ್ಚಳಿಕೆ ಕಳಪೆ ಗುಣಮಟ್ಟದಿಂದ ಕೂಡಿದ್ದು, ಯಾವುದೇ ಸಮಯದಲ್ಲಿ ಮುಚ್ಚಳಿಕೆ ಮುರಿಯುವ ಸ್ಥಿತಿಯಲ್ಲಿದೆ. ಮಳೆಯಾದರಂತೂ ಮ್ಯಾನ್‌ಹೋಲ್ ಯಾವುದು? ರಸ್ತೆ ಯಾವುದು? ತಿಳಿಯುವುದಿಲ್ಲ. ಕೆಲವೆಡೆ ಚರಂಡಿ ಮೇಲ್ಭಾಗ ಒಡೆದಿದ್ದು, ಮ್ಯಾನ್‌ಹೋಲ್‌ಗಳಂತೆ ಅಪಾಯ ಕೈಬೀಸಿ ಕರೆಯುವಂತಿವೆ. ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಿಕೆ ಹಾಕುವ ಜತೆಗೆ ಒಡೆದಿರುವ ಚರಂಡಿ ಮೇಲ್ಭಾಗವನ್ನೂ ಮುಚ್ಚುವ ಕೆಲಸವಾಗಬೇಕಿದೆ.

ಗಿರಿಕಿ ಹೊಡೆದು ಬಿದ್ದೀರಿ ಜೋಕೆ...
1. ಗಿರಣಿಚಾಳದ ಮುಖ್ಯ ರಸ್ತೆ ಪಕ್ಕದ ಈ ತೆರೆದ ಮ್ಯಾನ್‌ಹೋಲ್ ಅಪಾಯಕ್ಕೆ ಕೈಬೀಸಿ ಕರೆಯುವಂತಿದೆ. ವಾಹನ ದಟ್ಟಣೆ ಈ ಪ್ರದೇಶದಲ್ಲಿ ತುಸು ಹೆಚ್ಚು. ಬೈಕ್ ಸವಾರರೇನಾದರೂ ನಿರ್ಲಕ್ಷ್ಯ ತೋರಿದರೆ ಮುಗುಚಿ ಬೀಳುವುದು ಶತಸಿದ್ಧ. ರಾತ್ರಿ ಸಮಯದಲ್ಲಿ ಇಲ್ಲಿ ಸಮರ್ಪಕ ವಿದ್ಯುತ್ ದೀಪವೂ ಇಲ್ಲದ ಕಾರಣ ಈ ಹೊತ್ತಿನಲ್ಲಿ ಅಪಾಯ ಇನ್ನೂ ಹೆಚ್ಚು. ಪಾದಚಾರಿಗಳಂತೂ ತುಸು ಯಾಮಾರಿದರೂ ಸಾಕು, ನೇರ ಪಾತಾಳ ತಲುಪಿದಂತೆಯೇ. ಸುತ್ತಲಿನ ಪ್ರದೇಶದಲ್ಲಿನ ಮಕ್ಕಳಿಗಂತೂ ಈ ಮ್ಯಾನ್‌ಹೋಲ್ ಹೆಚ್ಚು ಅಪಾಯಕಾರಿ.

ಕೇಶ್ವಾಪುರ ರಸ್ತೆಯಲ್ಲಿ ಹುಷಾರ್...
2. ಕೇಶ್ವಾಪುರದ ರಮೇಶ ಭವನ ಬಳಿ ಒಳಚರಂಡಿಗೆ ಹಾಕಿದ ಈ ಮುಚ್ಚಳಿಕೆ ಇದ್ದೂ ಇಲ್ಲದಂತಿದೆ. ಮ್ಯಾನ್‌ಹೋಲ್‌ಗಳಿಗೆ ಹಾಕುವ ಮುಚ್ಚಳಿಕೆ ಗುಣಮಟ್ಟ ಎಂಥದ್ದೆಂಬುದು ಇದನ್ನು ನೋಡಿದರೆ ಅರಿವಾಗುತ್ತದೆ. ಇಂಥ ಮುಚ್ಚಳಿಕೆ ಮ್ಯಾನ್‌ಹೋಲ್‌ಗಳಿಗೆ ಹಾಕಿದರೂ ಯಾವುದೇ ಪ್ರಯೋಜನವಿಲ್ಲ. ತೆರೆದ ಮ್ಯಾನ್‌ಹೋಲ್‌ಗೂ ಈ ಮ್ಯಾನ್‌ಹೋಲ್‌ಗೂ ಯಾವುದೇ ವ್ಯತ್ಯಾಸ ಇಲ್ಲದಂತಿದೆ. ಈ ಕಳಪೆ ಗುಣಮಟ್ಟದ ಮುಚ್ಚಳಿಕೆ ಆಡಳಿತ ವರ್ಗದಲ್ಲಿರುವ ಭ್ರಷ್ಟಾಚಾರಕ್ಕೂ ಕನ್ನಡಿ ಹಿಡಿದಂತಿದೆ.

ವಿದ್ಯಾನಗರ ಎಚ್ಚರ ತಪ್ಪಿದ್ರೆ ಅವಾಂತರ
3. ವಿದ್ಯಾನಗರ ಪಿ.ಸಿ. ಜಾಬಿನ್ ಕಾಲೇಜ್ ಬಳಿಯ ಮ್ಯಾನ್‌ಹೋಲ್ ಕಿತ್ತುಹೋಗಿದ್ದು, ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಸಂಚಾರಕ್ಕೆ ಕುತ್ತು ತರುವಂತಿದೆ. ರಾತ್ರಿ ಸಮಯದಲ್ಲಿ ಸಂಚರಿಸುವ ಬೈಕ್ ಸವಾರರು ರಸ್ತೆ ಪಕ್ಕ ಹೋದಲ್ಲಿ ಗಾಲಿ ಈ ತೆರೆದ ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಬೀಳುವುದು ಗ್ಯಾರಂಟಿ. ಬೈಕ್‌ನ ವೇಗ ಹೆಚ್ಚಿದ್ದರೆ ಪ್ರಾಣಕ್ಕೂ ಅಪಾಯವಾಗಬಹುದು. ಕಾರು, ಲಾರಿ, ಬಸ್‌ಗಳಿಗೂ ಇಲ್ಲಿ ಅಪಾಯ ತಪ್ಪಿದ್ದಲ್ಲ. ಪಾದಚಾರಿಗಳಂತೂ ರಸ್ತೆಗಿಳಿದರೆ ಇಂಥ ಕಿತ್ತುಹೋಗಿರುವ ಮ್ಯಾನ್‌ಹೋಲ್ ಅವರ ಪ್ರಾಣಕ್ಕೂ ಕುತ್ತು ತರಬಹುದೆಂಬುದನ್ನು ತಳ್ಳಿ ಹಾಕುವಂತಿಲ್ಲ.

ಮ್ಯಾನ್‌ಹೋಲ್ ಕಳಪೆ ಸ್ವಾಮಿ...

4. ಯಾವುದೇ ಸಮಯದಲ್ಲಿ ಮುರಿದುಬೀಳಬಹುದಾದಂಥ ಮ್ಯಾನ್‌ಹೋಲ್‌ಗಳ ಕಳಪೆ ಗುಣಮಟ್ಟದ ಮುಚ್ಚಳಿಕೆ ವಿದ್ಯಾನಗರದ ಉದ್ದಗಲಕ್ಕೂ ಇವೆ. ಯಾವುದಾದರೂ ಬಸ್, ಲಾರಿ ಅಥವಾ ಇನ್ನಿತರ ಭಾರಿ ವಾಹನಗಳು ಇಂಥ ಮ್ಯಾನ್‌ಹೋಲ್‌ಗಳ ಮೇಲೆ ಚಲಿಸಿದರೆ ಇದರ ಮುಚ್ಚಳಿಕೆ ಮುರಿದುಬೀಳುವುದರಲ್ಲಿ ಸಂದೇಹವಿಲ್ಲ. ಇಂಥ ಮ್ಯಾನ್‌ಹೋಲ್‌ಗಳು ಹುಬ್ಬಳ್ಳಿ ಅನೇಕ ಬಡಾವಣೆಗಳಲ್ಲಿ ಕಾಣಿಸುತ್ತವೆ. ಈ ಮ್ಯಾನ್‌ಹೋಲ್‌ಗಳ ಮುಚ್ಚಳಿಕೆ ಸಂಪೂರ್ಣ ಮುರಿದುಹೋಗಿ, ಯಾವುದೇ ಸಮಯದಲ್ಲಿ ಅಪಾಯ ಆಹ್ವಾನಿಸಬಹುದು.

ಕೊಪ್ಪಿಕರ ರಸ್ತೆ ಅಪಾಯಕರ
5. ಕೊಪ್ಪಿಕರ ರಸ್ತೆಯಲ್ಲಿರುವ ಈ ಮ್ಯಾನ್‌ಹೋಲ್ ಸುತ್ತಲೂ ಹಾಕಿರುವ ಸಿಮೆಂಟ್ ಯಾವುದೇ ಸಂದರ್ಭ ಕಿತ್ತುಹೋಗಬಹುದು. ಸಿಮೆಂಟ್ ಕಿತ್ತುಹೋದ ನಂತರ ಮುಚ್ಚಳಿಕೆಗೂ ಅಪಾಯ ತಪ್ಪಿದ್ದಲ್ಲ. ನಂತರ ಮುಚ್ಚಳಿಕೆಯೂ ಮುರಿದು, ಮ್ಯಾನ್‌ಹೋಲ್ ತೆರೆದುಕೊಳ್ಳುವುದು ಖಚಿತ. ಮ್ಯಾನ್‌ಹೋಲ್ ತೆರೆದುಕೊಂಡಲ್ಲಿ ಮತ್ತೆ ಮುಚ್ಚಳಿಕೆ ಹಾಕಲು ಪಾಲಿಕೆಗೆ ಅದೆಷ್ಟು ದಿನಗಳು ಬೇಕಾಗುತ್ತವೆಯೋ ಗೊತ್ತಿಲ್ಲ. ಸದಾ ಜನನಿಬಿಡ ಹಾಗೂ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಾದರೂ ಮ್ಯಾನ್‌ಹೋಲ್‌ಗಳನ್ನು ಸಮರ್ಪಕವಾಗಿರಬೇಕೆಂಬ ಜವಾಬ್ದಾರಿ ಪಾಲಿಕೆಗೆ ಇಲ್ಲ.

ಲ್ಯಾಮಿಂಗ್‌ಟನ್ ರಸ್ತೆ ಬಂತು ತಡೀರಿ
6. ಲ್ಯಾಮಿಂಗ್‌ಟನ್ ರಸ್ತೆಯ ಈ ಮ್ಯಾನ್‌ಹೋಲ್‌ನಲ್ಲಿ ಬೀಳಲು ಸಾಧ್ಯವಿಲ್ಲವಾದರೂ ವೇಗವಾಗಿ ಸಂಚರಿಸುವ ಬೈಕ್ ಸವಾರರ ಬೈಕ್ ಇಲ್ಲಿ ಇಳಿದರೆ ಡಾಂಬರ್ ರಸ್ತೆ ಮೇಲೆ ಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇಂಥ ಮುಚ್ಚಿಯೂ ಮುಚ್ಚದಂತಿರುವ ಮ್ಯಾನ್‌ಹೋಲ್ ಅನೇಕ ಬಡಾವಣೆಗಳಲ್ಲಿವೆ. ಸಾರ್ವಜನಿಕರು ಅದರಲ್ಲಿಯೂ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶದಲ್ಲಿ ಸಂಚರಿಸುತ್ತಾರೆ. ಕಣ್ತಪ್ಪಿನಿಂದಾಗಿ ವಿದ್ಯಾರ್ಥಿಗಳ ಕಾಲು ಈ ಮ್ಯಾನ್‌ಹೋಲ್‌ನಲ್ಲಿ ಸಿಲುಕಿದರೆ ಗಾಯವಾಗುವುದು ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.