ಧಾರವಾಡ

ಅವಳಿ ನಗರಕ್ಕೆ ರು. 200 ಕೋಟಿ ಬರಲೇ ಇಲ್ಲ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 25
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರು. 200 ಕೋಟಿಗಳ ಕಾಮಗಾರಿಯಾಗಿದೆ...
ಇದು ಬಿಜೆಪಿ ಶಾಸಕ, ಸಚಿವರು ಹೇಳಿಕೊಂಡ ಮಾತು. ಆದರೆ ವಾಸ್ತವವೇ ಬೇರೆ ಇದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ ಸಂಪೂರ್ಣ ರು. 200 ಕೋಟಿ ಬಿಡುಗಡೆ ಆಗೇ ಇಲ್ಲ. ಹೌದು, ಆರ್‌ಟಿಐ ಕಾರ್ಯಕರ್ತ ಹಾಗೂ ವಕೀಲರೂ ಆಗಿರುವ ಮೋಹನ ಮಾಳಿಗೇರ ಮಾಹಿತಿ ಹಕ್ಕಿನಡಿ ಪಡೆದುಕೊಂಡಿರುವ ಮಾಹಿತಿಯಿಂದ ಈ ಸಂಗತಿ ಬಯಲಾಗಿದೆ.
ಯಡಿಯೂರಪ್ಪ ಕಾಲದಲ್ಲಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಹು-ಧಾ ಅವಳಿ ನಗರದ ಅಭಿವೃದ್ಧಿಗೆ ಹೆಚ್ಚಿನ ಆಸ್ಥೆ ವಹಿಸಿದ್ದರು. ಶರವೇಗದಲ್ಲಿ ಹು-ಧಾ ಅಭಿವೃದ್ಧಿಯಾಗಬೇಕೆಂಬ ಇಚ್ಛೆಯಿಂದ ಮೊದಲ ಹಂತದಲ್ಲಿ 2010-11ನೇ ಸಾಲಿನಲ್ಲಿ ರು. 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಎರಡನೇ ಹಂತದಲ್ಲಿ 2011-12ನೇ ಸಾಲಿನಲ್ಲಿ ಕೇವಲ ರು. 42.44 ಕೋಟಿ ಮಾತ್ರ ಬಿಡುಗಡೆಯಾಗಿದೆ. ಆದರೆ, ಬಿಜೆಪಿ ಮುಖಂಡರ ವ್ಯಾಖ್ಯಾನವೇ ಬೇರೆಯಿತ್ತು. ಎರಡೂ ಹಂತದಲ್ಲಿ ರು. 200 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ರು. 100 ಕೋಟಿಯಲ್ಲಿ ಆಗಿದ್ದೇನು?: ಮೊದಲ ಹಂತದಲ್ಲಿ 100 ಕೋಟಿ ಬಿಡುಗಡೆಯಾಗಿತ್ತು. ಈ ಅನುದಾನ ಬಿಡುಗಡೆಯಾಗಿದ್ದೇ ತಡ ಹು-ಧಾ ಚಿತ್ರಣವೇ ಬದಲಾಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆ ನಿಟ್ಟಿನಲ್ಲಿ ಕೆಲಸಗಳೂ ನಡೆದವು. ಈ ಅನುದಾನದಲ್ಲಿ ಅವಳಿ ನಗರದಾದ್ಯಂತ ಒಟ್ಟೂ 107 ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಈ ಪೈಕಿ ರು. 36.55 ಕೋಟಿ ವೆಚ್ಚದಲ್ಲಿ 42 ರಸ್ತೆ ಕಾಮಗಾರಿ, ರು. 3.47 ಕೋಟಿ ವೆಚ್ಚದಲ್ಲಿ 4 ಸೇತುವೆ, ರು. 22 ಕೋಟಿಯಲ್ಲಿ 11 ಲೋಕೋಪಯೋಗಿ ರಸ್ತೆ, ರು. 2 ಕೋಟಿಯಲ್ಲಿ 7 ಸ್ಮಶಾನಕ್ಕೆ ರಸ್ತೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ, ಕಾರಂಜಿ, ಬಸ್ ಶೆಲ್ಟರ್ ನಿರ್ಮಾಣಕ್ಕಾಗಿ ರು. 16 ಕೋಟಿ ಖರ್ಚು ಮಾಡಲಾಗಿದೆ. ರು. 5.71 ಕೋಟಿ ವೆಚ್ಚದಲ್ಲಿ 14 ಗ್ರಾಮೀಣ ರಸ್ತೆ, ರು. 12 ಕೋಟಿಯಲ್ಲಿ ನಾಲಾ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆಗಾಗಿ ರು. 5.57 ಕೋಟಿ, ಮಾರುಕಟ್ಟೆ ಅಭಿವೃದ್ಧಿಗೆ ರು. 1.15 ಕೋಟಿ, ಕೆರೆ ಅಭಿವೃದ್ಧಿಗೆ ರು. 6 ಕೋಟಿ, ಥರ್ಡ್ ಪಾರ್ಟಿ ಪರಿಶೀಲನೆಗೆ ರು. 1.25 ಕೋಟಿ ಖರ್ಚು ಮಾಡಲಾಗಿದೆ.
ಈ ಎಲ್ಲ ಕಾಮಗಾರಿಗಳಿಗೆ ರು. 98.69 ಕೋಟಿ ಖರ್ಚಾಗಿದೆಯಲ್ಲದೇ ಕಾಮಗಾರಿಯೂ ಪೂರ್ಣಗೊಂಡಿದೆ. ಈ 100 ಕೋಟಿ ಅನುದಾನದಲ್ಲಿ ಶೇ. 96.88ರಷ್ಟು ಪಾಲಿಕೆ ಪ್ರಗತಿ ಸಾಧಿಸಿದೆ.
ಎರಡನೇ ಹಂತದಲ್ಲಿ ಆಗಿದ್ದೇನು?: ಇನ್ನು ಎರಡನೇ ಹಂತದ ಅನುದಾನ ಬಿಜೆಪಿ ನಾಯಕರು ಹೇಳಿಕೊಂಡಿದ್ದರ ಪ್ರಕಾರ ರು. 100 ಕೋಟಿ ಬಿಡುಗಡೆಯಾಗಿತ್ತು. ಆದರೆ, ಈ ಪೈಕಿ ಬಿಡುಗಡೆಯಾಗಿದ್ದು ರು. 42.44 ಕೋಟಿ ಮಾತ್ರ.
ಎರಡನೇ ಹಂತದ ಯೋಜನೆಯಲ್ಲಿ ಪಾಲಿಕೆ ಒಟ್ಟು 350 ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಸ್ತಾವನೆ ಸಿದ್ಧ ಪಡಿಸಿತ್ತು. ಈ ಪೈಕಿ 261 ಕೆಲಸ ಮಾತ್ರ ಕೈಗೆತ್ತಿಕೊಳ್ಳುವಲ್ಲಿ ಪಾಲಿಕೆ ಅಧಿಕಾರಿಗಳು ಸಫಲರಾಗಿದ್ದಾರೆ.
ರಸ್ತೆ, ಚರಂಡಿ ಹಾಗೂ ಪುಟ್‌ಪಾತ್ ನಿರ್ಮಾಣದ 187 ಕೆಲಸ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಈಗಾಗಲೇ ರು. 29.62 ಕೋಟಿ ಖರ್ಚಾಗಿದೆ. ಇನ್ನುಳಿದಂತೆ ಒಳಚರಂಡಿ, ಸಂಚಾರಿ ವ್ಯವಸ್ಥೆ, ನಗರದ ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆಗೆ, ಕೆರೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿ ಮತ್ತಿತರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಪ್ರಸ್ತುತ ಯೋಜನೆಯಡಿ ಕೈಗೆತ್ತಿಕೊಂಡಿದ್ದ 261 ಕಾಮಗಾರಿಗಳ ಪೈಕಿ 154 ಕಾಮಗಾರಿ ಮಾತ್ರ ಮುಗಿದಿವೆ. ಇನ್ನುಳಿದ ಕಾಮಗಾರಿ ಇನ್ನೂ ಪ್ರಗತಿಯ ಹಂತದಲ್ಲಿವೆ ಎಂಬುದು ಸತ್ಯಾಂಶ.
ಅಧಿಕಾರಿಗಳ ನಿರಾಸಕ್ತಿ: ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಎರಡನೇ ಹಂತದಲ್ಲಿ ಮುಖ್ಯಮಂತ್ರಿಗಳ ರು. 100 ಕೋಟಿಯ ವಿಶೇಷ ಅನುದಾನ ಸಂಪೂರ್ಣ ಬಿಡುಗಡೆಯಾಗಲು ಯಾವುದೇ ತೊಂದರೆ ಇದ್ದಿರಲಿಲ್ಲ.
ಆದರೆ, ಅಧಿಕಾರಿಗಳು ಎಲ್ಲ ಕಾಮಗಾರಿ ಒಂದೇ ಹಂತಕ್ಕೆ ಕೈಗೆತ್ತಿಕೊಂಡು ಮುಗಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳ ಅಸಡ್ಡೆ, ಅನಾದರವೇ ಅಂದುಕೊಂಡ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜತೆಗೆ ಜನಪ್ರತಿನಿಧಿಗಳೂ ಈ ವಿಷಯದಲ್ಲಿ ಎಡವಿದ್ದಾರೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.